Publicstory
ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬ ಹೇಗೆ ಆಚರಿಸಬೇಕೆಂಬ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರು ಮುಸ್ಲಿಂ ಮುಖಂಡರೊಂದಿಗೆ ನಗರದಲ್ಲಿ ಸಭೆ ನಡೆಸಿದರು.
ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಡಿಸೆಂಬರ್ ಗೂ ಮುನ್ನ ಲಸಿಕೆ ಬರುವುದು ಅನುಮಾನ. ಅಕ್ಟೋಬರ್, ನವಂಬರ್ ತಿಂಗಳಲ್ಲಿ ಸೋಂಕು ಇನ್ನೂ ವ್ಯಾಪಕವಾಗಿ ಹರಡಲಿದೆ ಎಂದು ಅಂದಾಜಿಸಲಾಗಿದ್ದು, ಸಮುದಾಯಕ್ಕೂ ಹಬ್ಬಲಿದೆ ಎಂದು ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ತಡೆಯಲು ಸರ್ಕಾರದ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು. ಬಕ್ರೀದ್ ಆಚರಿಸುವಾಗ ಸರ್ಕಾರದ ಆದೇಶದ ಅನುಸಾರವಾಗಿಯೇ ಆಚರಿಸಬೇಕು ಎಂದರು.
ಮಸೀದಿಯಲ್ಲಿ 50 ಕ್ಕೂ ಹೆಚ್ಚು ಜನರು ಸೇರುವಂತಿಲ್ಲ. ಬ್ಯಾಚ್ ಗಳನ್ನು ಮಾಡಿ ನಮಾಝ್ ಸಲ್ಲಿಸಬೇಕು. ಒಂದು ಬ್ಯಾಚ್ ಗೆ 50 ಜನರ ಮೇಲೆ ಇರುವಂತಿಲ್ಲ. ಪ್ರತಿಯೊಬ್ಬರು ಆರು ಅಡಿ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಕಡ್ಡಾಯವಾಗಿ ಹಾಕಿರಬೇಕು ಎಂದರು.
ಬಕ್ರೀದ್ ಆಚರಣೆಯಲ್ಲಿ ಒಬ್ಬರಿಗೊಬ್ಬರು ಆಲಿಂಗನ ಮಾಡಿಕೊಳ್ಳುವುದು ರೂಢಿಗತವಾಗಿ ಬಂದಿದೆ. ಆದರೆ ಸೋಂಕು ತಗುಲುವ ಅಪಾಯದ ಕಾರಣ ಯಾರು ಆಲಿಂಗಿಸಿಕೊಳ್ಳಬಾರದು. ಮಸೀದಿಯಲ್ಲಿ ಯಾವುದೇ ವಸ್ತು ಮುಟ್ಟಬಾರದು ಎಂದು ಸೂಚಿಸಿದರು.
ಎಲ್ಲ ಮಸೀದಿಗಳನ್ನು ಪೊಲೀಸರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವರು. ಅಲ್ಲಿ ಥರ್ಮಲ್ ಸ್ಕ್ಯಾನರ್ ಇಟ್ಟಿರಬೇಕು. ಸ್ಯಾನಿಟೈಜ್ ಮಾಡಬೇಕು. ಮಾಸ್ಕ್ ಧರಿಸಿರಲೇ ಬೇಕು. ಕಾನೂನು, ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.
ಈಗಾಗಲೇ ಮಸೀದಿಯಲ್ಲಿ ಕಡ್ಡಾಯ ಅಂತರ ಕಾಪಾಡಲಾಗುತ್ತಿದೆ. ಸಾಮೂಹಿಕ ಪ್ರಾರ್ಥನೆ ಸಲ್ಲಿಸುವವರ ಸಂಖ್ಯೆಯೂ ಕಡಿಮೆ ಇದೆ. ಬಕ್ರೀದ್ ನಲ್ಲೂ ಇದನ್ನು ಕಾಪಾಡಿಕೊಳ್ಳಬೇಕು. ಸೋಂಕು ತಡೆಯುವ ನಿಟ್ಟಿನಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಮುಂಜಾಗ್ರತಾ ಕ್ರಮವಾಗಿ ಯಾವ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು ಜಿಲ್ಲಾ ಎಸ್ಪಿ ರವರು ನೀಡಿದರು.
ಈ ಸಮಯದಲ್ಲಿ ಎಎಸ್ಪಿ, ಆರೋಗ್ಯಾದಿಕಾರಿಗಳಾದ ನಾಗೇಶ್ ,,ಪಶುಪಾಲನಾ ಇಲಾಖೆಯ ಅಧಿಕಾರಿ ಬಾಬು ರೆಡ್ಡಿ ,ವಕ್ತ್ ಬೋರ್ಡ್ ಸಿಇಒ ಫರಿದಾ ಲ, ಮಹಾಗರಪಾಲಿಕೆ ಸದಸ್ಯ ನಯಾಜ್ ರವರು, ಹಾಗೂ ನಗರದ ಅದಿಕಾರಿಗಳು ಉಪಸ್ಥಿತಿತರಿದ್ದರು.