Publicstory. in
Tumkuru; ಸಾಮಾಜಿಕ ಅರಣ್ಯ, ಡೀಮ್ಡ್ ಅರಣ್ಯ, ಗೋಮಾಳ ಮತ್ತು ಸರ್ಕಾರಿ ಭೂಮಿಗಳಲ್ಲಿ ಬಗರ್‍ಹುಕುಂ ಸಾಗುವಳಿ ಮಾಡುತ್ತಿರುವ ಭೂಮಿಯ ಸರ್ವೇ ಕಾರ್ಯ ನಡೆಸಿ ಪರಿಶೀಲಿಸಿ ಸಾಗುವಳಿದಾರರಿಗೆ ಭೂಮಿ ನೀಡುವಂತೆ ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವ ಮಾಧುಸ್ವಾಮಿ ಅವರು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಬಗರ್‍ಹುಕುಂ ಸಾಗುವಳಿದಾರರ ಹೋರಾಟ ಸಮಿತಿಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಗುಬ್ಬಿ ತಾಲೂಕು ಮಂಚಲದೊರೆ ಗ್ರಾಮ ಪಂಚಾಯಿತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿ ಅರಣ್ಯಭೂಮಿಯ ಜಂಟಿ ಸರ್ವೇ ಕಾರ್ಯ ನಡೆಸಿ ಹಿಂದೆ ಭೂಮಿ ಕಳೆದುಕೊಂಡವರಿಗೆ ಭೂಮಿ ನೀಡುವುದಾಗಿ ಭರವಸೆ ನೀಡಿದರು.
ತುಮಕೂರು ತಾಲೂಕು ಶೀಬಿ ಮತ್ತು ಇತರೆ ಗ್ರಾಮಗಳಲ್ಲಿ ಸಾಮಾಜಿಕ ಅರಣ್ಯ, ಡೀಮ್ಡ್ ಫಾರೆಸ್ಟ್ ಪ್ರಕರಣಗಳಲ್ಲಿ ಬಗರ್‍ಹುಕುಂ ಸಾಗುವಳಿ ಸಕ್ರಮ ಮಾಡುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಚಿಕ್ಕನಾಯಕನಹಳ್ಳಿ ಬೋರನಕಣಿವೆ ಜಲಾಶಯದ ಮುಳುಗಡೆ ಪ್ರದೇಶ ಸರ್ವೇ ಮಾಡಿಸಿ ಅದರಿಂದ ಒಳಗಡೆ ಇರುವ ಭೂಮಿಗಳನ್ನು ಸಕ್ರಮ ಮಾಡುವುದಾಗಿ ಭರವಸೆ ನೀಡಿದರು.
ಪಿ (ಪೈಕಿ) ನಂಬರ್‍ಗಳನ್ನು ಕಾಲಮಿತಿಯೊಳಗೆ ಪೋಡು ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು. ನೀರಾವರಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳನ್ನು ಕೈಗೊಳ್ಳುವಾಗ ರೈತರ ಅನುಮತಿಯನ್ನು ಪರಿಗಣಿಸಿ ಸೂಕ್ತ ಪರಿಹಾರವನ್ನು ಕೊಟ್ಟು ಭೂಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಣಗಳು ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ರಾಗಿ ಖರೀದಿಸಲು ಒಂದು ತಿಂಗಳು ಕಾಲಾವಕಾಶ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬೈಯ್ಯಾರೆಡ್ಡಿ ಮತ್ತು ರೈತರು ಮನವಿ ಮಾಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರಲ್ಲದೆ ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸುವುದಾಗಿ ರೈತರ ನಿಯೋಗಕ್ಕೆ ಭರವಸೆ ನೀಡಿದರು.
ಮೇಲಿನ ಎಲ್ಲಾ ವಿಷಯಗಳನ್ನು ಕುರಿತು ಏಪ್ರಿಲ್ ತಿಂಗಳಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ರಾಜ್ಯ ರೈತ ಸಂಘದ ಶಂಕರಪ್ಪ, ಮುಖಂಡರಾದ ಕೋದಂಡಪ್ಪ, ದೊಡ್ಡನಂಜಯ್ಯ, ರಾಚಪ್ಪ, ನರಸಿಂಹಮೂರ್ತಿ, ರಾಜಣ್ಣ, ಚನ್ನಬಸಣ್ಣ, ಕರಿಬಸಯ್ಯ, ಮಂಜು, ಆನಂದ, ಶಿವಣ್ಣ ಲೋಕೇಶ್, ಯಲ್ಲಪ್ಪ, ಚಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.