Tumkuru: ತಾಯಂದಿರು ಸಮರ್ಥರಾಗಿರಲು ಪೌಷ್ಠಿಕಯುಕ್ತ ಉತ್ತಮ ಆಹಾರ ಸೇವಿಸಿಸಬೇಕು ಇದರಿಂದ ಮಕ್ಕಳಲ್ಲಿಯೂ ಸಬಲತೆ ಸಮರ್ಥತೆ ತಾನಾಗಿ ಬರುತ್ತದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ತುಮಕೂರಿನ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಮಾಜದಲ್ಲಿ ಇರುವ ಮೌಢ್ಯತೆಯಿಂದ ಹೆಣ್ಣುಮಕ್ಕಳು ತಾಯಿಯಾದಂತಹ ಸಂದರ್ಭದಲ್ಲಿ ಬಾಣಂತನ ಪತ್ಯೆಯು ಶಿಕ್ಷೆಯಾಗಿದೆ.
ಇದಕ್ಕೆ ಬದಲಾಗಿ ಆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಾಯಿಗೆ ಆ ಸಮಯದಲ್ಲಿ ಅಗತ್ಯವಾದ ಶಕ್ತಿಯುತ ಆಹಾರ ನೀಡಿ ಸುಖಕಾಲವಾಗಿಸಬೇಕು ಎಂದು ಸಲಹೆ ನೀಡಿದರು.
ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದೆ. ಶರೀರ ಆರೋಗ್ಯವಾಗಿ ಬಲವಾಗಿದ್ದರೆ ಮನಸ್ಸು ಮತ್ತು ಬುದ್ದಿ ಚನ್ನಾಗಿರುತ್ತದೆ. ಆದ್ದರಿಂದ ಮಕ್ಕಳು ಮತ್ತು ಮಹಿಳೆಯರ ಅಪೌಷ್ಠಿಕತೆಯನ್ನು ಹೋಗಲಾಡಿಸಿ ಆರೋಗ್ಯವಂತ, ಶಕ್ತಿಯುತ ಸಮಾಜ ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ನ್ಯಾಷನಲ್ ನ್ಯೂಟ್ರಿಷನ್ ಮಿಷನ್ ಯೋಜನೆ ಜಾರಿಗೆ ತಂದಿದ್ದು, ಇದರಡಿ ಇಂದು ಜಿಲ್ಲೆಯಲ್ಲಿ ಪೋಷಣ್ ಅಭಿಯಾನ್ ಪಕ್ವಾಡ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲೆಯ ಜನರಿಗೆ ಅನುಕೂಲಮಾಡಿಕೊಡಲಾಗಿದೆ ಎಂದರು.
ಸಾಧನೆ ಮಾಡಿರುವ ಹೆಣ್ಣುಮಕ್ಕಳನ್ನು ಮಾದರಿಯಾಗಿಟ್ಟುಕೊಂಡು ಪ್ರತಿಯೊಬ್ಬ ಮಹಿಳೆಯು ಏನಾದರೂ ಸಾಧಿಸಿ ಸಾಧಕರ ಪಟ್ಟಿ ಸೇರಬೇಕು, ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡದೇ ಏನಾದರೂ ಒಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಳ್ಳುವುದು, ಇತರರಿಗೆ ನೆರವಾಗಿ ಸಹಾಯ ಮಾಡುವ ಮೂಲಕ ಕುಟುಂಬಕ್ಕೆ, ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು.ಆದಾಯದ ಮೂಲವನ್ನು ಕಂಡುಕೊಂಡು ಸದೃಢರಾಗಬೇಕು ಎಂದು ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಮಹಿಳೆಯರ ಆರೋಗ್ಯ, ಪೌಷ್ಠಿಕತೆ ಹಾಗೂ ಸಬಲೀಕರಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಹೆಣ್ಣುಮಕ್ಕಳ ಹೆಸರಲ್ಲಿ ಇರುವ ಉಜ್ವಲ ಅನಿಲ ಯೋಜನೆಯಿಂದ ದೇಶದ ಸುಮಾರು 7-8 ಕೋಟಿ ಕುಟುಂಬಗಳಿಗೆ ಅನುಕೂಲವಾಗಿ ಹೆಣ್ಣುಮಕ್ಕಳು ಹೊಗೆಯಲ್ಲಿ ಅಡಿಗೆ ಮಡುವುದನ್ನು ತಪ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಮಾತನಾಡಿ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಗೆ ಮೀಸಲಾತಿ ಕಲ್ಪಿಸಲಾಗಿದೆ. ಮಹಿಳೆಯರಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದೆ ಅದರಲ್ಲೂ ಹೆಚ್ಚು ಕೆಲಸ ಮಾಡುವ ರೈತ ಮಹಿಳೆಯರು ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಮಹಿಳೆಯರಿಗಾಗಿಯೇ ಪೋಷಣ್ ಅಭಿಯಾನ್ ಜಾರಿಯಾಗಿದೆ ಎಂದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಹೆಸರು ಮಾಡಿದ ತಿಪಟೂರು ತಾಲ್ಲೂಕು ಈಚನೂರು ಗ್ರಾಮದ ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಸದಸ್ಯರನ್ನು ಸನ್ಮಾನಿಸಲಾಯಿತು. ಹಾಗೂ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಬಾಂಡ್ ವಿತರಣೆ ಮತ್ತು ಉದ್ಯೋಗಿನಿ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು.