Publicstory.in
ತುಮಕೂರು: ಜಿಲ್ಲಾ ಬಿಜೆಪಿ ಘಟಕಕ್ಕೆ ನೂತನ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮನೆ ಮಾಡಿದೆ.
ಸದ್ಯ, ಶಾಸಕರಾದ ಜ್ಯೋತಿ ಗಣೇಶ್ ಅಧ್ಯಕ್ಷ ರಾಗಿದ್ದಾರೆ. ಅವರ ಅವಧಿ ಮುಗಿದ ಕಾರಣ ಹೊಸಬರ ಹುಡುಕಾಟ ನಡೆದಿದೆ.
ನಿರ್ಮಲ ಕುಮಾರ ಸುರಾನ, ಶಿವಯೋಗಿ ಸ್ವಾಮಿ ನೇತೃತ್ವದಲ್ಲಿ ಶನಿವಾರ ಈ ಸಂಬಂಧ ಸಭೆ ನಡೆಸಲಾಯಿತು.
ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜ್, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕರಾದ ಬಿ.ಸಿ.ನಾಗೇಶ್, ಜ್ಯೋತಿ ಗಣೇಶ್, ಮಾಜಿ ಶಾಸಕರಾದ ಬಿ.ಸುರೇಶಗೌಡ ಇತರರು ಹಾಜರಿದ್ದರು.
ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರನ್ನು ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಮಾಜಿ ಶಾಸಕ ಬಿ.ಸುರೇಶಗೌಡ, ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿನಯ್ ಬಿದರೆ, ರವಿ ಹೆಬ್ಬಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್, ಚಂದ್ರಶೇಖರ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಈ ಪಟ್ಟಿಯನ್ನು ರಾಜ್ಯ ಸಮಿತಿಗೆ ಸಲ್ಲಿಸಲಾಗುವುದು. ಅಲ್ಲಿ ಅಂತಿಮ ಆಯ್ಕೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಯಾರ ಕೈ ಮೇಲಾಗಲಿದೆ ಎಂಬುದರ ಮೇಲೆ ಆಯ್ಕೆ ನಿಂತಿದೆ ಎಂದು ಹೇಳಲಾಗುತ್ತಿದೆ.
ಯಾರು ಹಿತವರು
ಲಿಂಗಾಯತರು, ಒಕ್ಕಲಿಗರು, ಹಿಂದುಳಿದವರು ಯಾರ ಕೈಗೆ ಅಧ್ಯಕ್ಷ ಸ್ಥಾನ ಹೋಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಈಗಾಗಲೇ ಒಕ್ಕಲಿಗ ಸಮುದಾಯದ ಮಾಜಿ ಶಾಸಕಬಿ.ಸುರೇಶ ಗೌಡ ಅಧ್ಯಕ್ಷರಾಗಿದ್ದರು. ಇವರ ಅವಧಿಯಲ್ಲಿ ಪಕ್ಷಕ್ಕೆ ಜಿಲ್ಲೆಯಲ್ಲಿ ಉತ್ತಮ ಬುನಾದಿ ಹಾಕಿಕೊಟ್ಟರು. ತುರುವೇಕೆರೆ, ಕೊರಟಗೆರೆ, ಶಿರಾ,ಮಧುಗಿರಿಯಲ್ಲಿ ಪಕ್ಷಕ್ಕೆ ಗಟ್ಟಿ ನೆಲೆ ಒದಗಿಸಿ ಕೊಟ್ಟರು.
ಮಧುಗಿರಿಯಲ್ಲಿ ಈ ಸಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಬರಲು ಇವರು ಇಲ್ಲಿ ಪಕ್ಷ ಬಲ ಪಡಿಸಿದ್ದು ಕಾರಣ ಎಂಬುದನ್ನು ಪಕ್ಷದ ಹಿರಿಯರೇ ಒಪ್ಪಿಕೊಂಡಿದ್ದಾರೆ.
ಶಿರಾದಲ್ಲಿ ಜೆಡಿಎಸ್ ಮುಖಂಡರನ್ನು ಕರೆ ತಂದರು. ತುರುವೇಕೆರೆಯಲ್ಲಿ ವಿರೋಧದ ನಡುವೆಯೂ ಮಸಲಾ ಜಯರಾಂ ಅವರನ್ನು ಪಕ್ಷಕ್ಕೆ ಕರೆ ತಂದು,ಇಲ್ಲಿ ಕಮಲ ಅರಳಲು ಕಾರಣರಾದರು. ಕೊರಟಗೆರೆಯಲ್ಲಿ ಜಿ.ಪಂನ ಗೆಲುವು ಇವರ ಕಾಲಾವಧಿಯಲ್ಲೇ ಸಾಧ್ಯವಾಗಿತ್ರು.ಕೆಜೆಪಿ- ಬಿಜೆಪಿ ಒಂದು ಮಾಡಲು ಶ್ರಮಿಸಿದ್ದರು.
ಇನ್ನೂ ಜ್ಯೋತಿ ಗಣೇಶ್ ಅಧ್ಯಕ್ಷರಾದ ಬಳಿಕ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷ ಒಳ್ಳೆಯ ಕೂಯ್ಲನ್ನೇ ಪಡೆಯಿತು.
ಈಗಾಗಲೇ ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಅವಕಾಶ ಕೊಟ್ಟಿರುವ ಕಾರಣ ಹಿಂದುಳಿದ ವರ್ಗದವರಿಗೆ ಅವಕಾಶ ಕೊಡಬೇಕೆಂಬ ಒತ್ತಡವೂ ಇದೆ. ಹೀಗಾದ್ದಲ್ಲಿ ಲಕ್ಷ್ಮೀಶ್ ಅವರಿಗೆ ಅಧ್ಯಕ್ಷ ಸ್ಥಾನ ಲಭಿಸಲಿದೆ.
ಯಾರ ಕೈ ಮೇಲಾಗಲಿದೆ
ಆಯ್ಕೆ ಅಷ್ಟು ಸುಲಭವಾಗಿಲ್ಲ. ಯಾರ ಕೈ ಮೇಲಾಗಲಿದೆ ಎಂಬುದನ್ನು ನೋಡಬೇಕಾಗಿದೆ. ಸಭೆಯಲ್ಲು ವಾಗ್ವಾದ ನಡೆದಿದೆ. ಆದರೆ ಇದೆಲ್ಲ ಚರ್ಚೆ ರೀತಿಯ ವಾಗ್ವಾದ ಎಂದು ಹಿರಿಯ ರಾಜಕಾರಣಿಯೊಬ್ಬರು ಪಬ್ಲಿಕ್ ಸ್ಟೋರಿಗೆ ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜ್, ಶಾಸಕ ಜ್ಯೋತಿ ಗಣೇಶ್ ಒಂದು ಪರವಾಗಿದ್ದರೆ, ಸಚಿವ ಮಾಧುಸ್ವಾಮಿ ಅವರ ಗುಂಪೇ ಬೇರೆ ಇದೆ. ಮಾಜಿ ಸಚಿವ ಸೊಗಡು ಶಿವಣ್ಣ ಈಗಲೂ ಮೂಲ ಬಿಜೆಪಿಗರ ನಾಯಕರೇ ಆಗಿರುವ ಕಾರಣ ಯಾರ ಕೈ ಮೇಲಾಗಲಿದೆ ಎಂಬುದನ್ನು ನೋಡಬೇಕಾಗಿದೆ.
ಮಾಧುಸ್ಚಾಮಿ ಅವರ ಮಾತು ನಡೆದರೆ ಹೆಬ್ಬಾಕ ರವಿ ಅವರಿಗೆ ಸ್ಥಾನ ದಕ್ಕಲಿದೆ. ಆದರೆ ಮಾಧುಸ್ವಾಮಿ ಅವರ ಮಾತನ್ನು ನಡೆಸಲು ಸಂಸದರು ಬಿಡುವುದು ಕಷ್ಟ ಎನ್ನುತ್ತವೆ ಬಿಜೆಪಿ ಮೂಲಗಳು.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ನಿರ್ಧಾರ ಕೂಡ ಪ್ರಮುಖವಾಗಲಿದೆ. ಯಾರ ಪರ ಲಾಬಿ ಹೇಗೆ ಕೆಲಸ ಮಾಡಲಿದೆ ಎಂಬುದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.