ಹರೀಶ್ ಕಮ್ಮನಕೋಟೆ
ಅಂದು..
ಮೇಕಪ್ ಇಲ್ಲದ ಸಹಜ ಸುಂದರಿಯೊಬ್ಬಳು ಕ್ಯಾಂಪಸ್ ನಲ್ಲಿ ಪ್ರತ್ಯಕ್ಷವಾದಳು. ಅವಳನ್ನು ನೋಡಿದಕೂಡಲೇ ಮಂತ್ರ ಮುಗ್ದನಂತೆ ಹಿಂಬಾಲಿಸಿ ಬಿಟ್ಟೆ.
ಅಂದಿನಿಂದ ಈ ಪೋಲೀ ಹೃದಯಕ್ಕೆ ರೆಕ್ಕೆ ಬಂದುಬಿಟ್ಟಿವೆ.
ಕ್ಲಾಸ್ಗಳನ್ನ ಮಿಸ್ಮಾಡಿ ಆಲದ ಕಟ್ಟೆಯ ಮೇಲೆ ಕುಳಿತದ್ದು ಆಕೆಗಾಗಿ.
ಅವಳು ನನ್ನೆದುರು ನಡೆದುಹೋದಾಗ ತಂಗಾಳಿಯು ಮೈತಾಗಿದ ಅನುಭವ. ಹವಳದ ಬಂಡೆಯನ್ನು ತಿಕ್ಕಿ ತೀಡಿ ಸಿದ್ಧಪಡಿಸಿದ ಹರಳಂತೆ ಆಕೆಯ ಹಲ್ಲುಗಳು. ಅವಳ ನಗು ಮೈಮನಸ್ಸನ್ನು ನವಿರೇಳಿಸಿ ಕಣ್ಣಲ್ಲಿ ಕಣ್ಣಿಡುವ
ಆಸೆಯನ್ನು ಉಕ್ಕಿಸಿದೆ.
ಅವಳು ಭೌತಶಾಸ್ತ್ರದ ತರಗತಿಯಿಂದ
ಹೊರಬರುವ ಹೊತ್ತಿಗೆ, ಹಾಸ್ಟೆಲ್ ಕಡೆ
ಮುಖಮಾಡಿ, ಮಧ್ಯಾಹ್ನದ ಊಟ, ಸ್ನಾನ ಮುಗಿಸಿ ಮತ್ತೆ ಕಟ್ಟೆಯ ಹತ್ತಿರ, ಸ್ನೇಹಿತರ ಜೊತೆ ಹಾಜರ್. ಸಂಜೆಯ ಸಮಯಕ್ಕೆ.. ಗೋಬಿ ಸ್ಟಾಲ್, ಮಂಡಕ್ಕಿ ಅಂಗಡಿ, ಕೇಕ್ ಪ್ಯಾಲೆಸ್ ಹೀಗೆ ಎಲ್ಲಿ
ಹೋಗುತ್ತಾಳೋ ಅಲ್ಲಿಗೆ ಹಿಂದೆ ಹಿಂದೆ ಸುತ್ತುವುದೇ
ಕೆಲಸ.
ನಾನು ಹಿಂದೆ ತಿರುಗುವ ಸಂಗತಿ ಅವಳಿಗೂ ತಿಳಿದಿದೆ ಎಂದುಕೊಂಡಿದ್ದೇನೆ. ಹುಡುಗಿಯರ ಹಿಂದೆ ಅಲೆದ ಅನುಭವದ ಕೊರತೆ ನನ್ನಲ್ಲಿ ತುಸು ಹೆಚ್ಚೇ ಇದೆ.
ಹಿಂದೆ ಹೋಗಿ ಇಂಪ್ರೆಸ್ ಮಾಡು ಎಂದು ನನ್ನ ಆಪ್ತ ಸ್ನೇಹಿತರು ಎಳೆದೊಯ್ಯುತ್ತಾರೆ.
ಆದರೆ ಏನು ಮಾಡುವುದು ಏಳೆಂಟು ತಿಂಗಳಿನಿಂದ ಪ್ರೀತಿಯ ಇಂಗಿತವನ್ನು ಅವಳಲ್ಲಿ
ವ್ಯಕ್ತಪಡಿಸಲು ಸಾಧ್ಯವಾಗಿಲ್ಲ. ಹೃದಯವು ಕಂಪಿಸಿದಂತಾಗಿ ಹಿಂದೆ ಸರಿಯುತ್ತಿದ್ದೇನೆ. ಅವಳಿಗೆ ಪ್ರೀತಿಯ ವಿಷಯವನ್ನು ತಿಳಿಸು ಎಂದು ದೋಸ್ತುಗಳ ಒತ್ತಾಯವೂ ಮೊನ್ನೆ ಹೆಚ್ಚಾಗಿಬಿಟ್ಟಿತ್ತು.
ಪ್ರಪೋಸ್ ಮಾಡೇ ಬಿಡೋಣ.. ಮೊದಲು ಮಾತನಾಡುವ ಪ್ರಯತ್ನಕ್ಕೆ ಕೈಹಾಕುವುದು ಲೇಸು ಎಂದುಕೊಂಡು ಮಾತನಾಡಿಸಲು ಹೋದೆ!
ಲೇ.. ಹುಡುಗಿ ಒಂದಂತೂ ಸತ್ಯ.
ನೀನಿಲ್ಲದಿದ್ದರೆ ಸಾರಾಯಿ ಕುಡಿಯುವುದಿಲ್ಲ, ಸಿಗರೇಟ್ ದಾಸನಾಗುವುದಿಲ್ಲ, ಚಟದ ಗೀಳಿಗೆ ಜೋತುಬೀಳುವುದಿಲ್ಲ.
ಖಾಲಿಯಾದ ಫರ್ಫ್ಯೂಮ್ ಬಾಟೆಲ್ ಮತ್ತು ಸವೆದ ಸಾಬೂನು, ಟೂತ್ ಪೇಸ್ಟ್, ಬ್ರಷ್ಗಳ ಬಿಲ್ ಮೇಲೆ ನಿನ್ನ ಹೆಸರು ಬರೆದಿಡುತ್ತೇನೆ. ಈ ವ್ಯಯಗಳಿಗೆ ಹಣ ಸುರಿಯಲು ಕಾರಣ ನೀನಲ್ಲವೇ?
ಕ್ಷಮಿಸು ನನ್ನನು ತಪ್ಪೂ ನಿನ್ನದೆ
ನನ್ನ ಜೀವಮಾನದಲ್ಲೇ ಯಾವ ಹುಡುಗಿಯ ಹಿಂದೆಯೂ ಹೋದವನಲ್ಲ. ಅಂದು ಮಾತನಾಡಿಸುವ ಹಂಬಲ ಮತ್ತು ನಿನ್ನ ಸಕಾರಾತ್ಮಕ ಹಾವಭಾವಗಳು ನನ್ನನ್ನು ಎಳೆದು ತಂದು ಮುಂದೆ ನಿಲ್ಲಿಸಿತು.
ಹೇ ಹುಡುಗಿ ಆ ದಿನ ನೀನು ಮಾಡಿದ್ದೇನು?ನಿರ್ಲಕ್ಷ್ಯಿಸಿ ಮುಂದೆ ನಡೆದು ಬಿಟ್ಟೆ. ನನ್ನನ್ನು ಅಪರಾಧಿಯಂತೆ ನೋಡಿದೆ. ವಿತ್ ಪರ್ಮೀಷನ್…ನಿಮ್ಮ ಜೊತೆ ಮಾತನಾಡಬಹುದೇ ಎಂದು ಯಾವ ಹುಡುಗನೂ ನಿಮ್ಮಲ್ಲಿ ಕೇಳಿರಲಾರ, ನಾನು ಕೇಳಿದ್ದೆ. ಆದರೂ ನನ್ನ ಸದುದ್ದೇಶದ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ನಿನಗೆ ಕಷ್ಟವಾಗಿರಬಹುದು.
ಇಷ್ಟವಿರಲಿ ಇಲ್ಲದಿರಲಿ ಒಮ್ಮೆ ಪ್ರತಿಕ್ರಿಯೆ ನೀಡಬೇಕಿತ್ತು. ಇನ್ಮುಂದೆ
ನಿನ್ನನ್ನು ಕಣ್ಣೆತ್ತಿಯೂ ನೋಡುವುದಿಲ್ಲ, ನೋಡಿದರೂ ಅಪರಿಚಿತಳಷ್ಟೆ.
ನೀನು ನನ್ನ ಸ್ವಾಭಿಮಾನಕ್ಕೆ ತುಂಬಾ ಹರ್ಟ್ ಮಾಡಿಬಿಟ್ಟೆ.
ಇನ್ನೂ ಮುಂದೆ ಸಾಗುವ ದಾರಿ ಇದೆ, ಯಶಸ್ಸನ್ನು ತನ್ನದಾಗಿಸಿಕೊಳ್ಳುವ ಸುವರ್ಣಾವಕಾಶಗಳಿವೆ, ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವುದು ಪರಮ ಗುರಿಯಾಗಬೇಕೆಂದು ಪರೋಕ್ಷವಾಗಿ ತಿಳಿಸಿಕೊಟ್ಟಿದ್ದೀಯ ಎಂದು ಸಮಾಧಾನಿಸಿಕೊಳ್ಳಬೇಕಿದೆ ಅಷ್ಟೆ. ಒಂದು ಮಾತ್ರ ನೆನಪಿರಲಿ. ಈ ಜಗವೆಲ್ಲ ಹುಡುಕಿ ಬಂದರೂ.. ನನ್ನಂತ ಕಲೆಗಾರನೂ.. ಜೊತೆಗಾರನು ಸಿಗಲಾರ ನಿನಗೆ. ಗುಡ್ ಬೈ…
-ಹರೀಶ್ ಕಮ್ಮನಕೋಟೆ
9591949304
ಪತ್ರಿಕೋದ್ಯಮ ಎಂ.ಎ
ಕು.ವಿ.ವಿ ಶಂಕರಘಟ್ಟ
Super bossu