ಜಮೀನಿನಲ್ಲಿ ತಾನು ಬೆಳೆದ ಬೆಳೆಯಲ್ಲಿಯೇ ರೈತನೋರ್ವ ಜೀವಸಮಾಧಿಯಾಗಿರುವ ವಿಷಾದನೀಯ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ಹೊಸಹಳ್ಳಿ ತಾಂಡದಲ್ಲಿ ಸೋಮವಾರ ನಡೆದಿದೆ.
ಇದೇ ಗ್ರಾಮದ ರೈತ ಹೊಸರಾಂ ನಾಯ್ಕ(50)ಮೃತ ದುರ್ದೈವಿ. ಗ್ರಾಮದ ಬಳಿ 10 ಎಕರೆ ಜಮೀನು ಹೊಮದಿರುವ ಹೊಸರಾಂ ನಾಯ್ಕ ಹುರುಳಿ, ತೊಗರಿ ಇತ್ಯಾದಿಬೆಳೆಗಳನ್ನು ಬೆಳೆದಿದ್ದರು. ಕಟಾವು ಮಾಡಿದ ಬೆಳೆಯನ್ನು ಜಮೀನಿನಲ್ಲಿಯೇ ಬಣವೆ ಹಾಕಿದ್ದರು.
ಬಣವೆಯ ಸುತ್ತಲ ಪ್ದೇಶದಲ್ಲಿ ಬೆಳೆದಿದ್ದ ಹುಲ್ಲನ್ನು ತುಂಡರಿಸಿ ಬೆಂಕಿ ಹಚ್ಚಿದ್ದಾರೆ. ಜೋರಾಗಿ ಬೀಸಿದ ಗಾಳಿಯಿಂದ ಬೆಂಕಿ ಬಣವೆಗೆ ವ್ಯಾಪಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕಣ್ಣೆದುರಿನಲ್ಲಿಯೇ ಸುಟ್ಟು ಹೋಗುವುದನ್ನು ಸಹಿಸಲಾಗದೆ ಏಕಾಂಗಿಯಾಗಿ ಬೆಂಕಿ ನಂದಿಸಲು ರೈತ ಮುಂದಾಗಿದ್ದಾರೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಿ ಬೆಂಕಿಯ ಕೆನ್ನಾಲಿಗೆಗೆ ಅವರು ಬಲಿಯಾಗಿದ್ದಾರೆ.
ಗ್ರಾಮದ ನೂರಾರು ಮಂದಿ ಜಮೀನಿನ ಬಳಿ ನೆರೆದಿದ್ದರು. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ತಿರುಮಣಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.