ತುಮಕೂರು:ರಾಜ್ಯ ಸರ್ಕಾರ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗದೆ ಕೇವಲ ಮನವಿಯನ್ನು ಪಡೆದು ಬೇಜವಾಬ್ದಾರಿಯನ್ನು ಮೆರೆದಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ವಾಗ್ದಾಳಿ ನಡೆಸಿದರು.
ತುಮಕೂರಿನ ಅಮಾನಿಕೆರೆಯ ಗಾಜಿನಮನೆಯ ಆವರಣದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿರುವ ಪಾದಯಾತ್ರೆಯ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಅಂಗನವಾಡಿ ನೌಕರರ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ಇದರಿಂದ ನಮ್ಮ ದನಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತುಮಕೂರಿನ ಸ್ವಾತಂತ್ರ್ಯ ಚೌಕ ಮಂಗಳವಾರ ಮಧ್ಯಾಹ್ನ ಪಾದಯಾತ್ರೆ ಆರಂಭವಾಗಬೇಕಾಗಿತ್ತು.
ತುಮಕೂರಿನ ಸ್ವಾತಂತ್ರ್ಯ ಚೌಕ ಐತಿಹಾಸಿಕ ಮಹತ್ವವನ್ನು ಹೊಂದಿದೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ತ್ಯಾಗಬಲಿದಾನ ಮಾಡಿದ ಸ್ಥಳ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಭೂಮಿ. ಇಂತಹ ಹಿನ್ನೆಲೆಯನ್ನು ಹೊಂದಿರುವ ಸ್ವಾತಂತ್ರ್ಯ ಚೌಕದಿಂದ ಪಾದಯಾತ್ರೆ ಆರಂಭಗೊಳ್ಳಬೇಕಿತ್ತು. ಆದರೆ ರಾಜ್ಯ ಸರ್ಕಾರ ಪೊಲೀಸರ ಮೂಲಕ ಪಾದಯಾತ್ರೆಗೆ ಅಡ್ಡಿಪಡಿಸಿತು ಎಂದು ಟೀಕಿಸಿದರು.
ಅಂಗನವಾಡಿ ತಾಯಂದಿರು ಇಂದು ನಂದಿಹಳ್ಳಿ ಸಮೀಪ ಇರುವ ಶರಣಲೋಕದಿಂದ ಮುಂದು ಹೊರಡಬೇಕಿತ್ತು. ಈ ವೇಳೆಗೆ ಡಾಬಸ್ ಪೇಟೆ ತಲುಪಬೇಕಿತ್ತು. ಅಲ್ಲಿ ಪಾದಯಾತ್ರೆ ನಡೆಸುತ್ತಿರುವ ನಮಗಾಗಿ ಎರಡು ಪ್ಯಾಕ್ಟರಿಯವರು ಒಂದು ಸಾವಿರ ಕೆಜಿ ಅಕ್ಕಿ ಸಂಗ್ರಹಿಸಿ ತಿಂಡಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಆದರೆ ಪಾದಯಾತ್ರೆ ಸಾಧ್ಯವಾಗದೆ ಚಳಿಗಾಳಿಯಲ್ಲಿ ಇಲ್ಲೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಾವು ಬೆದರುವುದಿಲ್ಲ ಎಂದು ಹೇಳಿದರು.
ಅಂಗನವಾಡಿ ನೌಕರರ ಬೇಡಿಕೆಗಳು ಸಮರ್ಪಕವಾಗಿವೆ. ಆ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು. ಪಾದಯಾತ್ರೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.