– ಸಂಜಯ್ ಹೊಯ್ಸಳ
ನಾವು ಕೆಲವು ಪುರಾಣ ಹಾಗೂ ಐತಿಹಾಸಿಕ ಕತೆಗಳಲ್ಲಿ ವಿಷ ಕನ್ಯೆಯ ಬಗ್ಗೆ ಉಲ್ಲೇಖ ಇರುವುದನ್ನು ಕೇಳಿದ್ದೇವೆ. ಎದುರಾಳಿ ರಾಜರನ್ನು ಬಗ್ಗುಬಡಿಯಲು ಕೆಲವು ರಾಜರು ಈ ವಿಷಕನ್ಯೆಯರನ್ನು ಬಳಸುತ್ತಿದ್ದರಂತೆ.
ಎದುರಾಳಿ ರಾಜರು ವಿಷಕನ್ಯೆಯರ ರೂಪ, ಲಾವಣ್ಯ, ಮೈಮಾಟಕ್ಕೆ ಮರುಳಾದರೇ ಅವರ ಕತೆ ಮುಗಿದಂತೆ. ಈ ವಿಷಕನ್ಯೆಯರ ವಿಷಯ ಕೇಳಿದರೇ ನಾವು ಯಾವುದೇ ಸುಂದರ ವಸ್ತುವಿಗೆ ಅದರ ಪೂರ್ವಾಪರ ತಿಳಿದುಕೊಳ್ಳದೆ ಮರುಳಾಗಬಾರದೆಂಬ ವಿಷಯ ಮನದಟ್ಟಾಗುತ್ತದೆ.
ಸೌಂದರ್ಯದ ಗಣಿಯಾಗಿದ್ದ ವಿಷಕನ್ಯೆಯಂತೆಯೇ ಕಾಡಿನಲ್ಲಿ ತನ್ನ ಸೌಂದರ್ಯದಿಂದ ಒಂದು ಹೂ ಎಲ್ಲರನ್ನು ಸೆಳೆಯುತ್ತದೆ. ಆದರೇ ಈ ಹೂ ಕೂಡ ವಿಷಕನ್ಯೆಯಂತಯೇ ತನ್ನ ಒಡಲ ತುಂಬ ವಿಷ ತುಂಬಿಕೊಂಡಿರುತ್ತದೆ. ಆದ್ದರಿಂದ ಈ ವಿಷಪುಷ್ಪವನ್ನು ನೋಡಿ ಮನತಣಿಸಿಕೊಳ್ಳಬೇಕಷ್ಟೆ.
ಈ ಪೀಠಿಕೆಯಿಂದ ಪರಿಚಯಿಸಿದ ಹೂವಿನ ನಾಮದೇಯ ಗೌರಿ ಹೂವು. ನೋಡಲು ಮನಮೋಹಕ ವಾಗಿರುವ ಈ ಹೂವನ್ನು ಕಾಡಿನ ಹೂ ಅಂತಲೇ ಹೇಳಬೇಕು. ಏಕೆಂದರೆ ಇದು ಕಾಡು ಬಿಟ್ಟರೇ ಬೇರೆಡೆ ಅಷ್ಟಾಗಿ ಕಾಣಸಿಗುವುದಿಲ್ಲ.
ಇದರ ವೈಜ್ಞಾನಿಕ ಹೆಸರು : Gloriousa superba ಇಂಗ್ಲೀಷ್ ಹೆಸರು- Glory lily. ಕುಟುಂಬ – Liliaceae. ಕನ್ನಡದಲ್ಲಿ ಗೌರಿ ಹೂ, ಅಗ್ನಿಶಿಖೆ. ಕಡುಕೆಂಪು, ಹಳದಿ ಬಣ್ಣದಿಂದ ಕೂಡಿದ ಇದರ ಹೂಗಳು ಬಹಳ ಆಕರ್ಷಕ. ನಮ್ಮ ರಾಜ್ಯದ ಪಶ್ಚಿಮಘಟ್ಟದ ಮಳೆಕಾಡುಗಳು, ಬಂಡೀಪುರ, ಬಿ.ಆರ್.ಟಿ ಅರಣ್ಯಗಳಲ್ಲಿ ಮುಖ್ಯವಾಗಿ ಕಂಡುಬರುವ ಈ ಬಳ್ಳಿಯ ಸಸ್ಯ, ಆಗಷ್ಟ್ – ಅಕ್ಟೋಬರ್ ಮಾಸದಲ್ಲಿ ಹೂ ಬಿಡುತ್ತದೆ.
ಕೆಲವೇ ಕಾಡುಗಳಲ್ಲಿ ಕಂಡುಬರುವ ಈ ಹೂವು, ಹಿಂದೆ ವಿಷಕನ್ಯೆಯರು ಹೇಗೆ ಬೇರೆಯವರ ಲಾಭಕ್ಕೆ ದಾಳವಾಗುತ್ತಿದ್ದರೋ ಅದೇ ರೀತಿ ಈ ಹೂವಿನಲ್ಲಿರುವ ಕೆಲವು ಔಷಧೀಯ ಗುಣಗಳಿಂದಾಗಿ ಮನುಷ್ಯನ ದುರಾಸೆಗೆ ಇವು ಬಲಿಯಾಗಿ ಈ ಸಸ್ಯದ ತಳಿ ಅಪಾಯದ ಅಂಚನ್ನು ಮುಟ್ಟಿದೆ.
ಇದರ ಔಷಧೀಯ ಗುಣಗಳ ಬಗ್ಗೆ ತಿಳಿಯುವುದಾದರೇ, ಇದನ್ನು ಮುಖ್ಯವಾಗಿ ಹಾವು ಕಡಿತದಲ್ಲಿ ಆ್ಯಂಟಿ ವೆನಮ್ ಆಗಿ ಉಪಯೋಗಿಸುತ್ತಾರೆ. ಇದಲ್ಲದೆ ಅಲ್ಸರ್, ಆರ್ಥರೈಟಿಸ್, ಕಾಲರಾ, ಕುಷ್ಠ, ಕಿಡ್ನಿ, ಕ್ಯಾನ್ಸರ್, ಹೆರಿಗೆ ನೋವು ಇನ್ನೂ ಹಲವು ಗಂಭೀರ ಕಾಯಿಲೆಗಳ ನಿವಾರಣೆಯಲ್ಲಿಯೂ ಇದನ್ನು ಬಳಸಲಾಗುತ್ತದೆ.
ವಿವಿಧ ದೇಶಗಳ ಸಾಂಸ್ಕೃತಿಕ ಆಯಾಮದಲ್ಲೂ ಇದರ ಬಣ್ಣನೆ ಇದೆ. ಜಿಂಬಾಬ್ವೆ ದೇಶದ ರಾಷ್ಟ್ರ ಪುಷ್ವವಾದ ಈ ಹೂವಿನ ವಿನ್ಯಾಸಕ್ಕೆ ಮರುಳಾಗಿ ಇಂಗ್ಲೆಂಡಿನ ರಾಜಕುಮಾರಿ ತನ್ನ ಕಿರೀಟದ ವಿನ್ಯಾಸವನ್ನು ಈ ಹೂವಿನ ಶೈಲಿಗೆ ಬದಲಾಯಿಸಿದಳಂತೆ. ಭಾರತದ ಅಂಚೆ ಇಲಾಖೆಯೂ ಕೂಡ ಈ ಹೂವಿನ ಚಿತ್ರವಿರುವ ಸ್ಟಾಂಪ್ ಒಂದನ್ನು ಬಿಡುಗಡೆಗೊಳಿಸಿದೆ.
ತಮಿಳುನಾಡು ತನ್ನ ರಾಜ್ಯ ಲತೆಯಾಗಿ ಇದನ್ನು ಉಳಿಸಿಕೊಂಡಿದೆ.
ಇಂತಹ ಅದ್ಭುತ ಹಿನ್ನಲೆಯ, ಅಸಾಧಾರಣ ಮಹತ್ವವುಳ್ಳ ಸಾವಿರಾರು ಗಿಡ, ಮರ, ಬಳ್ಳಿ, ಹೂ, ಹಣ್ಣುಗಳ ತವರು, ಏಕೈಕ ಆವಾಸಸ್ಥಾನ ನಮ್ಮ ಕಾಡುಗಳು. ಈ ಕಾಡುಗಳನ್ನು ರಕ್ಷಿಸುವುದರಿಂದ ಮಾತ್ರ ಇಂತಹ ಅಪರೂಪದ ಸಸ್ಯಸಂಕುಲಗಳನ್ನು ರಕ್ಷಿಸಲು ಸಾದ್ಯ. ಆದ್ದರಿಂದ ಕಾಡನ್ನು ರಕ್ಷಿಸೋಣ. ಆ ಮೂಲಕ ಎಲ್ಲಾ ರೀತಿಯ ಜೀವವೈವಿಧ್ಯತೆಯನ್ನು ಸಂರಕ್ಷಿಸೋಣ. ಆ ಮೂಲಕ ನಮ್ಮ ಮುಂದೆ ನಮ್ಮ ಭವಿಷ್ಯಕ್ಕೆ ಎದುರಾಗಬಹುದಾದ ಅಪಾಯದಿಂದ ಪಾರಾಗೋಣ.
ನಮ್ಮ ಊರಿನಲ್ಲಿ ಇದೆ…ನನಗೆ ಗೊತ್ತಿರಲಿಲ್ಲ ಗಣೇಶ ಹಬ್ಬಕ್ಕೆ ತಂದು ಡಿಸೈನ್ ಮಾಡಿದ್ದೆ