ದೆಹಲಿ : ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ದೇಶ ವ್ಯಾಪ್ತಿ ಲಾಕ್‌ಡೌನ್ ಮಾಡಲಾಗಿತ್ತು. ಇದರಿಂದ ಮಧ್ಯಮ ವರ್ಗ, ಸಣ್ಣ ಕೈಗಾರಿಕೆ, ರೈತರು ಸಂಕಷ್ಟ ಎದುರಿಸುತ್ತಿದ್ದು, ದೇಶದ ಮುನ್ನೆಡೆಗಾಗಿ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದರು.
ದೇಶವನ್ನು ಉದ್ದೇಶಿಸಿ ಮಂಗಳವಾರ ರಾತ್ರಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳು ಆಶಾಭಾವನೆ ಮೂಡಿಸಿವೆ.
ಲಾಕ್ ಡೌನ್ 4.0 ವಿಭಿನ್ನವಾಗಿರಲಿದೆ. ಕೊರೊನಾ ದೀರ್ಘಕಾಲದ ಹೋರಾಟ ಎನ್ನುವ ಅವರ ಮಾತುಗಳು ಕೊರೊನಾ ಜತೆಗಿನ ಸೆಣಸಾಟ ಜನರೇ ಮುಂದುವರೆಸಬೇಕೆಂಬ ಮುನ್ಸೂಚನೆಯಾಗಿರಬಹುದೇ ಎಂಬ ಅಭಿಪ್ರಾಯ ಕೇಳಿಬಂದಿವೆ.
ವಿಶೇಷ ಪ್ಯಾಕೆಜ್ವ ಕಾರ್ಮಿಕರು, ರೈತರು, ಸಣ್ಣ ಮಧ್ಯಮ ವರ್ಗದವರಿಗೆ ಸಹಕಾರಿಯಾಗಲಿದೆ.
ಇದು ನಮ್ಮ ದೇಶದ ಜಿಡಿಪಿಯ ಶೇ.10 ರಷ್ಟು. ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪ್ರತಿನಿತ್ಯ ವಿಶೇಷ ಪ್ಯಾಕೇಜ್ ಬಗ್ಗೆ ವಿವರಣೆ ನೀಡಲಿದ್ದಾರೆ. ನಾಳೆಯಿಂದಲೇ ವಿತ್ತ ಸಚಿವರು ಮಾಹಿತಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.
ಆಧಾರ್, ಮೊಬೈಲ್ ಹಾಗು ಜನಧನ್ ಖಾತೆ ಬಳಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ವಿಶೇಷ ಪ್ಯಾಕೇಜ್ ಮೂಲಕ ಹೊಸ ಬಂಡವಾಳ ಹರಿದು ಬರಲಿದೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.
ಈ ವಿಶೇಷ ಆರ್ಥಿಕ ಪ್ಯಾಕೇಜ್ ನಿಂದ ಪ್ರತಿ ವರ್ಗದ ಕಾರ್ಯಕ್ಷಮತೆ ಹೆಚ್ಚಾಗಲಿದೆ. ಲಾಕ್‌ಡೌನ್ ನಿಂದ ರಸ್ತೆ ಬದಿ ವ್ಯಾಪಾರಿಗಳು, ಮನೆಗೆಲಸ ಮಾಡೋರು, ಸಣ್ಣಪುಟ್ಟ ಅಂಗಡಿ ನಡೆಸುವವರು, ಮೀನುಗಾರರು, ಮಾರುಕಟ್ಟೆ ವ್ಯಾಪಾರಿಗಳು ಬಹಳಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಈಗ ಅವರನ್ನು ಆರ್ಥಿಕವಾಗಿ ಮೇಲೆತ್ತ ಬೇಕಾಗಿದೆ ಎಂದು ಪ್ರಧಾನಿ ಭಾಷಣದಲ್ಲಿ ತಿಳಿಸಿದ್ದಾರೆ.
ಪ್ರತಿ ಭಾರತೀಯ ವಾಸಿಗಳು ಸ್ಥಳೀಯಮಟ್ಟದಲ್ಲಿ ತಯಾರಾಗುವ ವಸ್ತುಗಳನ್ನ ಖರೀದಿಸಿ ಹಾಗು ಅದಕ್ಕೆ ಪ್ರಚಾರ ಮಾಡುವ ಮೂಲಕ ಅವುಗಳಿಗೆ ಮಾರುಕಟ್ಟೆ ಹೆಚ್ಚಿಸಬೇಕು ಹಾಗು ತಯಾರಕರು ಆರ್ಥಿಕವಾಗಿ ಮುಂದುವರೆಯಲು ಸಹಕಾರ ನೀಡಬೇಕು ಎಂದರು.ಪ್ರಧಾನಿಯವರ ಈ ಮಾತುಗಳು ಗಾಂಧಿಯನ್ ಎಕಾನಮಿ ಕಡೆ ದೇಶ ಸಾಗುವ ಮುನ್ನೋಟ ಇರಬಹುದೇ ಎಂಬ ವಿಶ್ಲೇಷಣೆಗಳು ಕೇಳಿ ಬಂದಿವೆ.