: ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಓಡಿ ಹೋಗಿದ್ದಾರೆ ಎಂದು ಕಾಂಗ್ರೆಸ್ ಗೇಲಿ ಮಾಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣಧೀಪ್ ಸುರ್ಜಿವಾಲಾ, ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಮತ್ತು ಎನ್.ಸಿ.ಪಿ ನಾಯಕರು ಬಿಜೆಪಿಗೆ ಬಹುಮತಕ್ಕೆ ಬೇಕಾದ ಶಾಸಕರ ಸಂಖ್ಯೆಯ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಕಾನೂನುಬಾಹಿರವಾಗಿ ಸರ್ಕಾರ ರಚನೆ ಮಾಡಿದೆ. ಹಾಗಾಗಿ ಬಹುಮತ ಸಾಬೀತುಪಡಿಸುವುದೊಂದೇ ಪರಿಹಾರ ಮಾರ್ಗ ಎಂದು ಹೇಳಿದ್ದಾರೆ.
ಕ್ಷಿಪ್ರ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನಾವೀಸ್ ಮತ್ತು ಎನ್.ಸಿ.ಪಿಯ ಜಿತ್ ಪವಾರ್ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಹೀಗಾಗಿ ನಮ್ಮದು ಸಾಮಾನ್ಯ ಬೇಡಿಕೆ. ಸದನದಲ್ಲಿ ಬಹುಮತ ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್, ಎನ್.ಸಿ.ಪಿ. ಮತ್ತು ಶಿವಸೇನೆಗೆ ಬಹುಮತವಿದೆ. ಸದನದಲ್ಲಿ ನಾವು ಬಹುಮತವನ್ನು ಸ್ಥಾಪಿಸುತ್ತೇವೆ ಮತ್ತು ಸಾಬೀತುಪಡಿಸುತ್ತೇವೆ ಎಂದರು.
ಬಿಜೆಪಿ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ. ಹಾಗಾಗಿಯೇ ಅದು ಬಹುಮತ ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಪಕ್ಷದ ಸರ್ವಸಮ್ಮತ ನಿರ್ಧಾರ ಎಂದು ಶರದ್ ಪವಾರ್ ಟ್ವೀಟ್ ಮಾಡಿ ಹೇಳಿದ್ದಾರೆ.
ನಮ್ಮ ತೀರ್ಮಾನ ಅಚಲ. ಅದು ಶಿವಸೇನೆ, ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚನೆ ಮಾಡುವುದು. ಅಜಿತ್ ಪವಾರ್ ಹೇಳಿಕೆ ಸುಳ್ಳು. ಅದು ದಾರಿತಪ್ಪಿಸುವ ಮತ್ತು ಗೊಂದಲ ಉಂಟು ಮಾಡುವ ಹೇಳಿಕೆ. ಅವರ ಹೇಳಿಕೆ ಜನರು ತಪ್ಪಾಗಿ ಗ್ರಹಿಸಲು ಅವಕಾಸ ಮಾಡಿಕೊಡುತ್ತದೆ. ಇದನ್ನು ನಂಬಬೇಡಿ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಬಿಜೆಪಿ ಶಾಸಕರಿಗಾಗಿ ಹೋಟೆಲ್ ನಲ್ಲಿ ಕೊಠಡಿಗಳನ್ನು ಬುಕ್ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಚವಾಣ್ ದೂರಿದ್ದಾರೆ. ಕಾಂಗ್ರೆಸ್ ಮತ್ತು ಎನ್.ಸಿ.ಪಿ ಶಾಸಕರನ್ನು ಸೆಳೆದು ಈ ಕೊಠಡಿಗಳಲ್ಲಿ ಇಡಲು ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಮಹಾರಾಷ್ಟ್ರ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು ಸನದಲ್ಲಿ ಬಹುಮತ ಸಾಬೀತುಪಡಿಸಲು ಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದೆ. ಒಟ್ಟು 105 ಶಾಸಕರ ಪೈಕಿ 99 ಶಾಸಕರು ಭಾಗವಹಿಸಿದ್ದು ಹೇಗೆ ಬಹುಮತ ಸಾಬೀತುಪಡಿಸಬೇಕೆಂಬುದು ಗೊತ್ತು ಎಂದು ಸಭೆಯ ನಂತರ ಆಶೀಶ್ ಸೆಲ್ಹಾರ್ ತಿಳಿಸಿದ್ದಾರೆ.
ಬಹುಮತಕ್ಕೆ ಬೇಕಾದ ಶಾಸಕರ ಸಂಖ್ಯೆಯನ್ನು ಕಲೆಹಾಕುವ ಸಂಬಂಧ ಪಕ್ಷೇತರ ಶಾಸಕರೊಂದಿಗೆ ಪ್ರತ್ಯೇಕವಾಗಿ ಸ್ಥಳಗಳಲ್ಲಿ ಸಭೆಗಳು ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.