Publicstory.in
ತುಮಕೂರು: ದೊಡ್ಡದೊಡ್ಡ ಬ್ಯಾಂಕ್ ಗಳು ಹಿಂದಿರುಗಿ ಬಾರದ ಸಾಲದ ಸುಳಿಯಲ್ಲಿ ಸಿಲುಕಿದ್ದು ಅವುಗಳ ಉಳಿವಿಗೆ ಸರ್ಕಾರ ಹೆಣಗುತ್ತಿದೆ. ಹಾಗಾಗಿ ಸಹಕಾರಿ ಸಂಘಗಳು ಉಳಿಯಬೇಕಾದರೆ ಬಡ್ಡಿಸಹಿತ ಸಾಲವನ್ನು ಎಲ್ಲರೂ ತೀರಿಸಬೇಕು ಎಂದು ಮಾನವ ಮಂಟಪ ಸಹಕಾರ ಸಂಘದ ನಿರ್ದೇಶಕ ಕೆ.ಪಿ.ನಟರಾಜ್ ಹೇಳಿದರು.
ತುಮಕೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಾನವ ಮಂಟಪ ಸಹಕಾರ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದ ಅವರು ನೀರವ್ ಮೋದಿ, ವಿಜಯ ಮಲ್ಯ ಅಂಥವರು ಸಾವಿರಾರು ಕೋಟಿ ರೂಪಾಯಿಗಳನ್ನು ಬ್ಯಾಂಕಿಗಳಿಗೆ ವಂಚಿಸಿ ಪರಾರಿಯಾಗಿದ್ದಾರೆ. ಹಿಂದಿರುಗಿ ಬಾರದ ಸಾಲ ಲಕ್ಷಾಂತರ ಕೋಟಿ ರೂಪಾಯಿ ಇದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಬ್ಯಾಂಕ್ ಗಳನ್ನ ಉಳಿಸಿಕೊಳ್ಳಬೇಕಾಗಿದೆ ಎಂದರು.
ಮಾನವ ಮಂಟಪ ಸಹಕಾರ ಸಂಘಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಇದು ಹೊಸ ಸಹಕಾರ ಸಂಘವೇನೂ ಅಲ್ಲ. 19ನೇ ಶತಮಾನದ ಅಂತ್ಯದಲ್ಲಿ ಕುದ್ಮಲ್ ರಂಗರಾಯರು ದಲಿತರು, ಬಡವರ ಏಳ್ಗೆಗಾಗಿ ಗ್ರಾಮೀಣ ಸಹಕಾರ ಸಂಘವನ್ನು ರಚಿಸಿದ್ದರು. ದಲಿತರ ಉದ್ದಾರದ ಕನಸು ಕಂಡಿದ್ದರು. ಹೀಗಾಗಿ ಮಾನವ ಮಂಟಪ ಸಹಕಾರ ಸಂಘದ ಸದಸ್ಯರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ ಎಂದರು.
ಜಾತಿ ಸಹಕಾರ ಸಂಘಗಳು ಎಲ್ಲ ಕಡೆಯೂ ಸಿಗುತ್ತವೆ. ಆದರೆ ಜಾತ್ಯತೀತ ಪರಂಪರೆಯ ಸಂಘಗಳು ಕಡಿಮೆ. ನಮ್ಮ ಉದ್ದೇಶ ದಲಿತ ಮತ್ತು ಸಂತ್ರಸ್ತ ವರ್ಗಗಳು ಸಬಲರಾಗಬೇಕೆಂಬುದಾಗಿದೆ. ಈ ಸಂಘದಲ್ಲಿ ಎಲ್ಲಾ ಸಾಮಾಜಿಕ ಹಿನ್ನೆಲೆಯವರು ಇದ್ದು ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಯಾವುದೇ ಕಾರಣಕ್ಕೂ ಹಿಂದಿರುಗಿ ಬಾರದ ಸಾಲದ ಸುಳಿಗೆ ಇಂತಹ ಸಂಘಗಳು ಸಿಲುಕದಂತೆ ಎಚ್ಚರ ವಹಿಸಬೇಕು. ಸಾಲ ತೆಗೆದಕೊಂಡ ಮೇಲೆ ಅದನ್ನು ತೀರಿಸುವ ಜವಾಬ್ದಾರಿ ಸಾಲ ಪಡೆದವರ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದಿರಾ ಕಾಲೇಜು ಪ್ರಾಂಶುಪಾಲೆ ರೀಟಾ ಶಿವಮೂರ್ತಿ ಮಾತನಾಡಿ, ಸಹಕಾರ ಎಂದರೆ ಒಟ್ಟಾಗಿ ದುಡಿಯುವುದು. ಎಲ್ಲರೂ ಸಾಲ ತೆಗೆದುಕೊಂಡಷ್ಟೇ ಖುಷಿಯಿಂದ ತೀರಿಸುವುದು ಮುಖ್ಯವಾಗುತ್ತದೆ. ದೊಡ್ಡವರು ಸಣ್ಣವರೆಂಬ ಹಮ್ಮುಬಿಮ್ಮು ಬಿಟ್ಟು ದುಡಿಯಬೇಕು ಎಂದು ಸಲಹೆ ನೀಡಿದರು.
ಇಂದು ಗಲ್ಲಿಗೊಂದು ಸಹಕಾರಿ ಸಂಘಗಳಿವೆ. ಆದರೆ ಇಂತಹ ಜಾತ್ಯತೀತ ಸಂಘವನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಸಂಘದ ಸದಸ್ಯರು ಜವಾಬ್ದಾರಿಯಿಂದ ಶ್ರಮವಹಿಸಿ ದುಡಿಯಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಮಾನವ ಮಂಟಪ ಸಹಕಾರ ಸಂಘದ ಅಧ್ಯಕ್ಷೆ ಡಾ. ಅರುಂಧತಿ, ನಿರ್ದೇಶಕರಾದ ವಿರೂಪಾಕ್ಷ ಡ್ಯಾಗೇರಹಳ್ಳಿ, ಉದ್ಯಮಿ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.