ರಘುನಂದನ್ ಎ.ಎಸ್.
ಒಮ್ಮೆ ಬಣ್ಣಗಳ ನಡುವೆ ತಮ್ಮ ಹಿರಿಮೆ, ಹಾಗು ಪ್ರಾಮುಖ್ಯತೆ ಬಗ್ಗೆ ಪರಸ್ಪರ ವಾಗ್ವದ ನಡೆಯುತ್ತಿತ್ತು.
ಮೊದಲಿಗೆ ಹಸಿರು ಬಣ್ಣವು ತಾನು ಉಸಿರು /ಜೀವದ ಸಂಕೇತ. ತಾನಿಲ್ಲದೆ ವನ, ಬನ, ಮೃಗ ಮನುಷ್ಯರೆಲ್ಲರೂ ಶೂನ್ಯ ಎಂದಿತು.
ನಂತರ ನೀಲಿ ಬಣ್ಣವು ತಾನು ಪ್ರಶಾಂತತೆಯನ್ನು ಸೂಚಿಸುತ್ತಾ, ಮನುಷ್ಯ ತನ್ನನ್ನ ಸಾಗರದ ನೀಲಿ ಮತ್ತು ಆಕಾಶದ ನೀಲಿ ಎಂದೇ ಹೋಲಿಸುತ್ತಾರೆ ಅಂದಿತು.
ಆಗ ಕಿತ್ತಳೆಯು ತನ್ನನ್ನು ತಾನು ಶಕ್ತಿ, ಅರೋಗ್ಯ ಹಾಗು ಜೀವಸತ್ವಗಳಿಗೆ ಹೋಲಿಸಿಕೊಂಡಿತು.
ನಂತರ ಅಧಿಕಾರಶಾಹಿಯಂತೆ ಗರ್ಜಿಸಿದ ಕೆಂಪು ಬಣ್ಣವು, ಶೌರ್ಯ, ಪರಾಕ್ರಮದ ಪ್ರತಿಬಿಂಬ, ಮನುಷ್ಯರ ರಕ್ತವು ನನ್ನದೇ ಬಣ್ಣವೆಂದು ಘರ್ಜಿಸಿತು.
ಹಳದಿಯು ತನ್ನನ್ನ ತಿಳಿನಗೆ, ಬೆಳಗಿನ ಸೂರ್ಯನಿಗೆ ಹೋಲಿಸುತ್ತಾ ಸಂತಸ ಪಡುತ್ತಿತ್ತು.
ಆಗ ನೇರಳೆ ಬಣ್ಣವು ತಾನು ಅಧಿಕಾರ ಮತ್ತು ಬುದ್ಧಿವಂತಿಕೆಯ ರಾಯಭಾರಿಯೆಂದು ವಿವರಿಸಿತು.
ಹೀಗೇ ಹಿರಿಮೆ ಮತ್ತು ಶ್ರೇಷ್ಠತೆ ಬಗ್ಗೆ ಜಗಳ ಬೆಳೆಯುತ್ತಲೇ ಇತ್ತು.
ಇದ್ದಕ್ಕಿದ್ದಂತೆ ಮಿಂಚು, ಗುಡುಗು ತುಂಬಿದ ಭಾರೀ ಮಳೆ ಎಡಬಿಡದೆ ಸುರಿಯ ತೊಡಗಿತು.
ಆಗ ಗುಡುಗು “ನಿಮ್ಮ ಜಗಳವನ್ನು ನಿಲ್ಲಿಸಿ, ನೀವು ಅನನ್ಯ ಮತ್ತು ವಿಭಿನ್ನ. ಒಟ್ಟಾಗಿದ್ದರೆ ಮಾತ್ರ ಜಯ. ಆಗಲೇ ಕಾಮನಬಿಲ್ಲಿನಂತ ಮನಮೋಹಕತೆ ಉದಯಿಸಲು ಸಾಧ್ಯ. ಅದೇ ನಿಮ್ಮ ನಿಜವಾದ ಅಸ್ತಿತ್ವ. ಒಬ್ಬರನ್ನೊಬ್ಬರು ಶ್ಲಾಘಿಸಿ ಒಟ್ಟಿಗೆ ಬದುಕಿ. ಸ್ವಾರ್ಥದಿಂದ ತಾನೊಬ್ಬನ ಏಳಿಗೆ, ಆದರೆ ಒಟ್ಟಾಗಿ ಶ್ರಮಿಸಿದರೆ ಸಮುದಾಯದ ಏಳಿಗೆ” ಎಂದು ಝಾಡಿಸಿದಾಗ ಬಣ್ಣಗಳೆಲ್ಲವೂ ಮೌನಕ್ಕೆ ಶರಣಾದವು.
“ನಾವು ಸ್ವಾರ್ಥ ತುಂಬಿದ ಮೌಢ್ಯರೋ ಅಥವಾ ಕಾಮನಬಿಲ್ಲಿನಂತೆ ಮಿಂಚುವರವರೊ…? ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.