ಪ್ರಪಂಚದಾದ್ಯಂತ ಕನ್ನಡ ನುಡಿ, ಜನ, ಸಂಸ್ಕೃತಿಗೆ ವಿಶೇಷ ಸ್ಥಾನ ಮಾನವಿದೆ. ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಕನ್ನಡಿಗರು. ಸುಸಂಸ್ಕೃತ ನಡೆ, ನುಡಿಯ ಜನರಿರುವ ರಾಜ್ಯ ಎಂಬ ಹೆಸರು ರಾಜ್ಯಕ್ಕಿದೆ.
ಈ ಹಿಂದೆ ಮೈಸೂರು ಎಂದು ಈ ಪ್ರಾಂತ್ಯವನ್ನು ಕರೆಯಲಾಗುತ್ತಿತ್ತು. ಕರ್ನಾಟಕ ಏಕೀಕರಣ ಚಳುವಳಿಯನ್ನು ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್ 1905 ರಲ್ಲಿ ಪ್ರಾರಂಭಿಸಿದರು. 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.
ಮೈಸೂರು ರಾಜ್ಯದ ಉದಯ
1956 ರ ನವೆಂಬರ್ 1 ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.
ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಮೊದಲಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ 1, 1973 ರಂದು “ಕರ್ನಾಟಕ” ಎಂದು ಬದಲಾಯಿತು. ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ರಾಜ್ಯೋತ್ಸವ ಆಚರಣೆ
1956ರ ನವೆಂಬರ್ 1 ರಂದು ಮೈಸೂರು ರಾಜ್ಯವು ಉದಯವಾದ ಸಂಕೇತವಾಗಿ ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷದ ನವೆಂಬರ್ 1 ರಂದು ಸಂತಸ, ಸಂಭ್ರಮದಿಂದ ಆಚರಿಸಲಾಗುತ್ತದೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡುವ ಪದ್ದತಿ ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ.
ರಾಜ್ಯೋತ್ಸವದಂದು ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” ಯನ್ನು ಹಾಡಲಾಗುತ್ತದೆ. ಸರ್ಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ.
ಭಾರತದ ಇನ್ನಿತರ ಪ್ರದೇಶಗಳಾದ ಮುಂಬಯಿ, ದೆಹಲಿ ಇತರೆಡೆಯೂ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.
ಉತ್ತಮ ಮಾಹಿತಿ
Giri has done very gd job