ತುಮಕೂರು; ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ.
ಹತ್ತಿರಹತ್ತಿರ ಒಂದು ಲಕ್ಷ ರೈತರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಇಲ್ಲವೇ ಜಿಲ್ಲೆಗೆ ಏನನ್ನಾದರೂ ಕೊಡುಗೆ ನೀಡಲಿದ್ದಾರೆ ಎಂಬ ಕುತೂಹಲ ಜನರಲ್ಲಿದೆ.
ಈಗಾಗಲೇ ತುಮಕೂರು ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿರುವ ಪ್ರಧಾನಿ ಮೋದಿ ತುಮಕೂರು ನಗರದ ವಸಂತನರಸಾಪುರದಲ್ಲಿ ಫುಡ್ ಪಾರ್ಕ್ ಉದ್ಘಾಟನೆ ಮತ್ತು ಗುಬ್ಬಿಯಲ್ಲಿ ಎಚ್.ಎ.ಎಲ್ ತಯಾರಿಕಾ ಘಟಕ ಉದ್ಘಾಟನೆಗೆ ಬಂದಿದ್ದರು.
ಇದೀಗ ಮೂರನೇ ಬಾರಿಗೆ ತುಮಕೂರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ತುಮಕೂರಿಗೆ ಹೊಸ ಯೋಜನೆಗಳನ್ನು ಪ್ರಕಟಿಸಲಿದ್ದಾರೆಯೇ ಎಂಬುದು ನಿಗೂಢವಾಗಿಯೇ ಇದೆ.
ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಕೆಲವೊಮ್ಮೆ ಮಾಧ್ಯಮಗಳಿಗೂ ಗೊತ್ತಾಗದ ಹಾಗೆ ಹೊಸ ಯೋಜನೆಗಳನ್ನು ಪ್ರಕಟಿಸಿರುವುದು ಈವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದ್ದರಿಂದ ತುಮಕೂರಿನಲ್ಲಿ ವಿಶೇಷ ಕೊಡುಗೆಗಳನ್ನು ನೀಡಲಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.
ನಿರೀಕ್ಷೆ ನನಸಾಗಲಿದೆಯೇ ನೋಡಬೇಕು.ಜನವರಿ 2ರಂದು ನಡೆಯಲಿರುವ ಸಮಾವೇಶದಲ್ಲಿ ಕೃಷಿ ಸನ್ಮಾನ್ ನಿಧಿ ಯೋಜನೆಯ ನಾಲ್ಕನೇ ಕಂತು ಹಣ ವಬಿಡುಗಡೆಗೊಳಿಸುವುದಾಗಿ ಈಗಾಗಲೇ ವರದಿಯಾಗಿದೆ. ಇದರ ಜೊತೆಗೆ ಕೃಷಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ ಪ್ರದಾನ ಮಾಡುವ ನಡೆಯಲಿದೆ. ಕೃಷಿಕರನ್ನು ಸನ್ಮಾನಿಸಲಿದೆ.
ತುಮಕೂರಿಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸಿದ್ದಗಂಗಾ ಮಠದಲ್ಲಿ ಒಂದೂವರೆ ಗಂಟೆ ಕಳೆಯಲಿದ್ದಾರೆ. ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ನಂತರ ಧ್ಯಾನಮಂದಿರ ಧ್ಯಾನ ಮಾಡಲಿದ್ದಾರೆ.
ಒಂದುವರೆ ಗಂಟೆ ಸಿದ್ದಗಂಗಾ ಮಠದಲ್ಲೇ ಕಳೆಯುವ ಮೂಲಕ ಕರ್ನಾಟಕ ಜನರು ಮತ್ತು ದೇಶದ ಗಮನವನ್ನು ಸೆಳೆಯುವುದು ಇದರ ಹಿಂದಿರುವ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಯ ದಕ್ಷಿಣದ ದ್ವಾರಬಾಗಿಲು ಮೂಲಕ ದಕ್ಷಿಣದ ಜನರನ್ನು ತನ್ನತ್ತ ಸೆಳೆಯುವ ಉದ್ದೇಶವೂ ಅಡಗಿದೆ.
ಇನ್ನೊಂದು ರಾಜ್ಯದಲ್ಲಿ ಅಧಿಕಾರ ಹಿಡಿಯುವ ಯತ್ನವೂ ತುಮಕೂರಿನ ಕಾರ್ಯಕ್ರಮದ ಪ್ರಮುಖ ಕಾರಣ ಎಂಬಂತ ಸೂಚನೆಗಳನ್ನು ನೀಡಲು ಹೊರಟಿದ್ದಾರೆ. ಇದುವರೆಗೆ ತುಮಕೂರು ಫುಡ್ ಪಾರ್ಕ್ ನಲ್ಲಿ ಯಾವುದೇ ಉದ್ಯೋಗಗಳು ಸೃಷ್ಟಿಯಾಗಿಲ್ಲ.
2019ರ ವೇಳೆಗೆ ಎಚ್.ಎ.ಎಲ್ ಲಘು ಯುದ್ದ ವಿಮಾನಗಳು ಕಾರ್ಯಾರಂಭ ಮಾಡಲಿವೆ ಎಂಬ ನಿರೀಕ್ಷೆಯೂ ಈಡೇರಿಲ್ಲ. ಈ ಪ್ರಶ್ನೆಯನ್ನು ಜನ ಕೇಳತೊಡಗಿದ್ದಾರೆ.ಬಿಜೆಪಿ ರಾಷ್ಟ್ರ ನಾಯಕರು ತುಮಕೂರಿಗೆ ಭೇಟಿ ನೀಡಿದಾಗಲೆಲ್ಲ, ತುಮಕೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನೇ ಬಳಸಿಕೊಂಡಿರುವುದು ನಡೆಯುತ್ತ ಬಂದಿದೆ.
ಎಲ್.ಕೆ. ಅಡ್ವಾಣಿ ಕೂಡ ಇದೇ ಜಾಗದಲ್ಲೇ ಆಯೋಜಿಸಿದ್ದ ಕಾರ್ಯಕ್ರಮದಲ್ಲೇ ಭಾಷಣ ಮಾಡಿದ್ದರು. ಈಗ ಬಿಜೆಪಿ ಅದೇ ದಾಳವನ್ನು ಮತ್ತೊಮ್ಮೆ ಉರುಳಿಸುತ್ತಿದೆಯೇ ಎಂಬ ಪ್ರಶ್ನೆ ಮೂಡತೊಡಗಿದೆ.
ತುಮಕೂರು ನಗರ ಸ್ಮಾರ್ಟ್ ಸಿಟಿಗೂ ಆಯ್ಕೆಯಾಗಿದೆ. ಫುಡ್ ಪಾರ್ಕ್ ಬಂದಿದೆ. ಎಚ್.ಎ.ಎಲ್ ಉದ್ಘಾಟನೆ ಆಗಿದೆ. ಆದರೆ ಅದರಿಂದ ಜನರಿಗಾಗಿರುವ ಅನುಕೂಲ ಹೇಳಿಕೊಳ್ಳುವಂತೇನೂ ಇಲ್ಲ. ಜನವರಿ 2ರ ಕಾರ್ಯಕ್ರಮದಲ್ಲಿ ಮೋದಿ ಹೊಸ ಯೋಜನೆಗಳನ್ನು ಕೊಡಲಿದ್ದಾರೆಯೇ ಎಂಬುದನ್ನು ತುಮಕೂರು ಜಿಲ್ಲೆಯ ಜನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅದು ಫಲಪ್ರದವಾಗುವುದೇ ನೋಡಬೇಕು