ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸತೀಶ್ ಗೌಡ ಬಿ. ಅವರನ್ನು ಸನ್ಮಾನಿಸಲಾಯಿತು.
ತುಮಕೂರು: ಯುವ ವಕೀಲರಲ್ಲಿ ಶಿಸ್ತು, ಅಧ್ಯಯನ ಕೊರತೆ ಹೆಚ್ಚಾಗುತ್ತಿದೆ. ಇದು ನ್ಯಾಯದಾನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಯಂತ ಕುಮಾರ್ ಕಳವಳ ವ್ಯಕ್ತಪಡಿಸಿದರು.
ತುಮಕೂರಿನ ಸುಫಿಯಾ ಕಾನೂನು ಕಾಲೇಜಿನಲ್ಲಿ ಮೊದಲ ವರ್ಷದ ಕಾನೂನು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ಹಿರಿಯ ವಕೀಲರು ಬಂದಾಗ ಅವರಿಗೆ ನ್ಯಾಯಾಲಯದಲ್ಲಿ ಸೀಟು ಬಿಟ್ಟು ಕೊಡುವುದು ಮೊದಲಿನಿಂದಲೂ ಬೆಳೆದುಬಂದ ವಾಡಿಕೆ. ಆದರೆ ಈಗಿನ ಯುವ ವಕೀಲರಲ್ಲಿ ಇದು ಕಾಣುತ್ತಿಲ್ಲ. ಹಿರಿಯ ಅನುಭವಿ ವಕೀಲರಿಂದ ಕಲಿಯುವುದು ಸಾಕಷ್ಟಿದೆ. ಅವರಿಗೆ ಗೌರವ ಕೊಡುವುದನ್ನು, ಅವರೊಂದಿಗೆ ಸೌಜನ್ಯದ ವರ್ತನೆ ತೋರುವುದು ಮುಖ್ಯ ಎಂದರು.
ಕ್ರಿಮಿನಲ್ ಪ್ರಕರಣಗಳಲ್ಲಿ ಯುವ ವಕೀಲರು ತೋರುತ್ತಿರುವ ನಡೆ ನಿಜಕ್ಕೂ ನ್ಯಾಯದಾನದ ಮೇಲೆ ಪರಿಣಾಮ ಬೀರುತ್ತಿದೆ. ವಕೀಲರನ್ನು ನಂಬಿ ಕಕ್ಷಿದಾರರು ಬಂದಿರುತ್ತಾರೆ. ಕೇಸಿನ ಬಗ್ಗೆ ಅಧ್ಯಯನವೇ ಇಲ್ಲದೇ ಕೇಸು ನಡೆಸುವುದರ ಪರಿಣಾಮವನ್ನು ನ್ಯಾಯಾಧೀಶರ ಮೇಲೆ ಹಾಕುವ ಮನಸ್ಥಿತಿ ಹೆಚ್ಚುತ್ತಿದೆ. ಇದು ಸರಿಯಲ್ಲ ಎಂದು ತಿಳಿ ಹೇಳಿದರು.
ಓದಿ ಕಲಿಯುವುದಕ್ಕಿಂತಲೂ ಅನುಭವದಿಂದ ಕಲಿಯುವುದು ಹೆಚ್ಚು. ವಕೀಲ ವೃತ್ತಿಯಲ್ಲಿ ಓದಿಗಿಂತಲೂ ಅನುಭವದಿಂದ ಬಂದ ಕಲಿಕೆ ಹೆಚ್ಚು ಪರಿಣಾಮಕಾರಿ ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಸತೀಶ್ ಗೌಡ ಬಿ ಮಾತನಾಡಿ, ಹಳ್ಳಿಯಿಂದ ಬಂದಿದ್ದೇವೆ, ಕನ್ನಡ ಮಾಧ್ಯಮದಲ್ಲಿ ಓದಿದ್ದೇವೆ ಎಂಬ ಕೀಳರಿಮೆ ಬಿಡಬೇಕು. ಸಾಧಕರ ಪಟ್ಟಿ ನೋಡಿದರೆ ಹಳ್ಳಿಯವರೇ ಹೆಚ್ಚಿರುತ್ತಾರೆ. ಹಳ್ಳಿಯಲ್ಲಿ ಹುಟ್ಟುವುದು, ಬಡವರಾಗಿ ಹುಟ್ಟುವುದು ಶಾಪ ಅಲ್ಲ, ಸಾಧನೆ ಮಾಡಲು ಇರುವ ಅವಕಾಶ ಎಂದು ವಿದ್ಯಾರ್ಥಿಗಳು ಅಂದುಕೊಳ್ಳಬೇಕು ಎಂದು ಹೇಳಿದರು.
ನಾನೂ ಸಹ ಹಳ್ಳಿಯಿಂದ ಬಂದವನೇ. ನನ್ನಂತ ನೂರಾರು ಸಾಧಕರು ಹಳ್ಳಿಯಿಂದ ಬಂದವರೇ ಆಗಿರುತ್ತಾರೆ. ಪ್ರೊಫೆಸರ್ ಮಗ ಐಎಎಸ್ ಆಗುವುದನ್ನು ಸಾಧನೆ ಎಂದೂ ಯಾರು ಹೇಳಲಾರರು. ಆದರೆ ಹಳ್ಳಿಯ ಕೃಷಿಕರ ಮಗ, ಚಪ್ಪಲಿ ಹೊಲೆಯವವರ ಮಗ ಐಎಎಸ್ ಮಾಡಿದಾಗ ಅದು ಸಾಧನೆಯಾಗುತ್ತದೆ. ಇಂಥ ಸಾಧನೆ ಎಲ್ಲರೂ ಮಾಡಬಹುದು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶರಾದ ನೂರುನ್ನೀಸಾ ಅವರು ಮಾತನಾಡಿ, ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ರೂಪಿಸಬೇಕು. ಧರ್ಮ, ಜಾತಿಯ ಬಗ್ಗೆ ದ್ವೇಷ, ಅಸೂಸೆ ಬರಬಾರದು. ಎಲ್ಲ ಧರ್ಮಗಳು ನೆರೆಹೊರೆಯವರನ್ನು ಪ್ರೀತಿಸಿ ಎಂದು ಹೇಳಿವೆ ಹೊರತು ದ್ವೇಷಿಸಿ ಎಂದು ಹೇಳಿಲ್ಲ ಎಂದರು.
ಪ್ರಾಂಶುಪಾಲರದ ಡಾ. ಎಸ್.ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಓಬಯ್ಯ, ಪಾಧ್ಯಾಪಕರಾದ ಸಿ.ಕೆ.ಮಹೇಂದ್ರ, ಮಮತಾ, ಶ್ರೀನಿವಾಸ್, ಗೌರಿಶಂಕರ್, ಖಾಷಿಪ್, ಅಶ್ವತ್ಥನಾರಾಯಣ, ನರೇಶ್, ಕಾಲೇಜಿನ ಗ್ರಂಥಪಾಲಕ ಸುಬ್ರಹ್ಮಣ್ಯ, ಮೇಲ್ವಿಚಾರಕರಾದ ಜಗದೀಶ್ ಇದ್ದರು.