ತುಮಕೂರು: ರಾಜಕೀಯವಾಗಿ ಬೆಳೆಯುವ ಮುಖಂಡರನ್ನು, ವಿರೋಧಿ ಬಣದಲ್ಲಿರುವರನ್ನು ಹಣೆಯಲು ಅಶ್ಲೀಲ ವಿಡಿಯೋ ಕಾಲ್ ಬಳಕೆ ಮಾಡಿಕೊಳ್ಳಲಾಗುತ್ತಿದೆಯೇ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.
ಸಾಮಾಜಿಕ ಜಾಲತಾಣಗಳ ಈ ಕಾಲಘಟ್ಟದಲ್ಲಿ ಸ್ವಲ್ಪ ಯಾಮಾರಿದರೂ ಸಾಕು ಇಂಥ ಬಲೆಗಳಿಗೆ ಸಿಕ್ಕಿಸುವುದು ಸುಲಭವಾಗಿದೆ. ಇದನ್ನು ರಾಜಕೀಯಕ್ಕೂ ಬಳಕೆ ಮಾಡಿಕೊಂಡರೆ ಅದರಂಥ ಹೀನಾಯ ಸ್ಥಿತಿ ಮತ್ತೊಂದು ಇರಲಾರದು.
ಹನಿ ಟ್ರ್ಯಾಪ್ ಹಳೆಯ ವಿಷಯ. ಅಶ್ಲೀಲ, ನಗ್ನ ವಿಡಿಯೋ ಕಾಲ್ ಮಾಡಿದಾದ ಅದನ್ನು ಒಂದೆರಡು ಸೆಕೆಂಡ್ ಗಳ ಕಾಲ ರೆಕಾಡ್ರ್ ಮಾಡಿಕೊಂಡರೂ ಸಾಕು, ಸಿಕ್ಕವನನ್ನು ಹೇಗೆ ಬೇಕಾದರೂ ಸಾಮಾಜಿಕವಾಗಿ ಮರ್ಯಾದೆ ಕಳೆದು ಆತನನ್ನು ಮುಖ್ಯವಾಹಿನಿಯಿಂದ ಹಿಂದೆ ಸರಿಸಲು.
ತುಮಕೂರಿನ ಭೈರವೇಶ್ವರ ಕೋ ಆಫರೇಟಿವ್ ಬ್ಯಾಂಕ್ ನ ಚುನಾವಣೆ ಹಿನ್ನೆಲೆಯಲ್ಲಿ ಇಂಥದೊಂದು ಚರ್ಚೆ ಜೋರಾಗಿ ವಾಟ್ಸಾಪ್ ಗ್ರೂಪ್ ಗಳಲ್ಲಿ ನಡೆದಿದೆ. ಆದರೆ ಇಂಥ ಬೆಳವಣಿಗೆಗಳು ಯಾವುದೇ ಸಮುದಾಯಕ್ಕೂ ಶೋಭೆ ತರುವಂಥವಲ್ಲ.
ಒಕ್ಕಲಿಗ ಸಮುದಾಯವರ ಹಿಡಿತದಲ್ಲಿರುವ ಈ ಬ್ಯಾಂಕ್ ನ ಚುನಾವಣೆಗಳು ಇತ್ತೀಚಿನವರೆಗೂ ಅಂಥ ಪ್ರಾಮುಖ್ಯತೆ ಗಳಿಸಿರಲಿಲ್ಲ. ಬ್ಯಾಂಕ್ ಬೆಳೆದಂತೆ ಈ ಚುನಾವಣೆ ರಂಗು ಪಡೆದುಕೊಂಡಿದೆ. ಜೋರಾಗಿ ನಡೆಯುತ್ತಿದೆ. ಒಕ್ಕಲಿಗರಲ್ಲೇ ಮೂರು-ನಾಲ್ಕು ಬಣಗಳು, ಒಳಸುಳಿಗಳು, ರಾಜಕೀಯ ಕೆಸೆರೆರಚಾಟ, ಪಾಟರ್ಿಗಳು ಇಂಥವೆಲ್ಲ ಈ ಚುನಾವಣೆಗೂ ಕಾಲಿಟ್ಟಿದೆ.
ಹೀಗಾಗಿಯೇ ವಿರೋಧಿ ಬಣದವರನ್ನು ಹಣೆಯಲು ಅಶ್ಲೀಲ ವಿಡಿಯೋ ಚಾಟ್ ನ ಬಳಕೆಗೆ ಯತ್ನಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಲು ಕಾರಣವಾಗಿದೆ.
ಬಿಜೆಪಿ ಸಕ್ರಿಯ ಮುಖಂಡರೂ ಆಗಿರುವ, ಹಿರಿಯ ವಕೀಲರಾದ ರವಿ ಗೌಡ ಅವರಿಗೆ ಎರಡು-ಮೂರು ಸಲ ವಿಡಿಯೋ ಕರೆ ಮೂಲಕ ಬಲೆಗೆ ಕೆಡವಿಕೊಳ್ಳುವ ಪ್ರಯತ್ನಕ್ಕೆ ಈ ಆರೋಪಗಳು ಇಂಬು ನೀಡಿದಂತಿವೆ.
‘ನಾನು ಚುನಾವಣೆಯಲ್ಲಿ ಸಕ್ರಿಯವಾಗಿರುವ ಕಾರಣದಿಂದಲೇ ಅಶ್ಲೀಲ ವಿಡಿಯೊ ಕರೆ ಮೂಲಕ ನನ್ನನ್ನು ಹಣೆಯಲು ಯತ್ನಿಸಿದ್ದಾರೆ. ಆದರೆ ಅದೃಷ್ಟ. ಆ ಸಂದರ್ಭ ನನ್ನ ಮೊಬೈಲ್ ಬೇರೆಯವರು ಬಳಕೆ ಮಾಡಿದ್ದರು. ಇಲ್ಲದಿದ್ದರೆ ನನ್ನನ್ನು ಸಾಮಾಜಿಕವಾಗಿ ತೇಜೋವಧೆ ಮಾಡಿಬಿಡುತ್ತಿದ್ದರು’ ಎಂದು ರವಿಗೌಡ ಅವರು ಪಬ್ಲಿಕ್ ಸ್ಟೋರಿಯೊಂದಿಗೆ ಮಾತನಾಡಿ ನೇರ ಆರೋಪ ಮಾಡಿದರು.
‘ಈ ಥರದ್ದು ಯಾರೇ ಮಾಡಿದರೂ ತಪ್ಪು, ರಾಜಕೀಯವಾಗಿ ಇದನ್ನು ಬಳಸಲೇಬಾರದು. ಆದರೆ ಈ ಥರದ್ದು ಸೈಬರ್ ಕ್ರೈಂ, ಹಣ ಕೀಳಲು ಸಹ ಮಾಡುತ್ತಿದ್ದಾರೆ. ರಾಜಕೀಯವಾಗಿ ಇದೆಯೋ, ಇಲ್ಲವೋ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಒಟ್ಟಾರೆ ಇದೊಂದು ದುರುಪಯೋಗ. ಒಟ್ಟಾರೆ ಇದೊಂದು ಜಾಲ ಇದೆ. ಸಾಮಾನ್ಯ ಜನ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಇದನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜಕೀಯ ಕಾರಣದಿಂದಲೂ ಮಾಡಿರಬಹುದೇನೋ? ಒಟ್ಟಾರೆ ತನಿಖೆ ಆಗಬೇಕು’ ಎಂದು ಬೈರವೇಶ್ವರ ಬ್ಯಾಂಕ್ ಚುನಾವಣೆಯಲ್ಲಿ ವೆಂಕಟೇಶ್ ಬಾಬು ಅವರ ಬಣದಲ್ಲಿ ಗುರುತಿಸಿಕೊಂಡಿರುವ ಬೆಳ್ಳಿ ಲೋಕೇಶ್ ಅವರು ತಿಳಿಸಿದರು.
ಯಾರೇ ಆಗಲಿ, ರಾಜಕೀಯವಾಗಿ ನೇರವಾಗಿ ಎದುರಿಸಬೇಕೇ ಹೊರತು ಇಂಥ ಅಡ್ಡ ಮಾರ್ಗ ಹಿಡಿಯಬಾರದು. ಈ ಸಂಬಂಧ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ ಎಂದು ವಿವರ ಬಿಚ್ಚಿಟ್ಟರು.
ಜಿಲ್ಲಾ ಒಕ್ಕಲಿಗರ ಸಂಘ ಹಾದಿತಪ್ಪಿದಂತಿದೆ. ಅದಕ್ಕೆ ಚುನಾವಣೆ ನಡೆಸಲು, ಸರಿದಾರಿಗೆ ತರಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇಂಥ ಬಿಕ್ಕಟ್ಟಿನಲ್ಲಿ ಬೈರವೇಶ್ವರ ಬ್ಯಾಂಕ್, ಒಕ್ಕಲಿಗರ ಮುಖಂಡರ ಪ್ರಾಬಲ್ಯ ಮೆರೆಯಲು ವೇದಿಕೆಯಂಥಾಗುತ್ತಿದೆ.ಇದೇ ಕಾರಣಕ್ಕಾಗಿ ಈ ಬ್ಯಾಂಕ್ ನ ಚುನಾವಣೆ ಈ ಸಮುದಾಯದಲ್ಲಿ ಪ್ರಾಮುಖ್ಯತೆ ಗಳಿಸತೊಡಗಿದೆ.
ವೆಂಕಟೇಶ್ ಬಾಬು ಅವರ ಬಣದಲ್ಲಿ ರಾಧಾ ದೇವರಾಜ್, ಆನಂದ್, ಸುಜಾತಾ ನಂಜೇಗೌಡ ಗುರುತಿಸಿಕೊಂಡಿದ್ದಾರೆ.
ಹಿರಿಯ ವಕೀಲರಾದ ಚಿಕ್ಕರಂಗಣ್ಣ ಅವರ ಬಣದಲ್ಲಿ ಕೈದಾಳ ಸತ್ಯ, ಸ್ವಾಮಿ, ರಂಗಾಮಣಿ ಇತರರು ಗುರುತಿಸಿಕೊಂಡಿದ್ದಾರೆ.
ಶಾಸಕ ಶ್ರೀನಿವಾಸ್ ಅವರಿಂದ ರಾಜೀ?
ಶಾಸಕರೂ ಆಗಿರುವ ರಾಜ್ಯ ಸಾರಿಗೆ ನಿಗಮಗಳ ಅಧ್ಯಕ್ಷರಾದ ಎಸ್.ಆರ್.ಶ್ರೀನಿವಾಸ್ ಅವರು ಎರಡೂ ಬಣಗಳ ನಡುವೆ ರಾಜೀಸೂತ್ರ ಮಾಡಿ, ಚುನಾವಣೆ ನಡೆಯದಂತೆ ತಡೆಯಲು ಸೋಮವಾರ (ಇಂದು) ಸಭೆ ಕರೆದಿದ್ದಾರೆ.
ಚುನಾವಣೆ ನಡೆದರೆ ಸಮುದಾಯದ ನಡುವೆ ಬಿರುಕು ಮೂಡಲಿದೆ. ಎಲ್ಲರೂ ಸೇರಿ ಒಂದಾಗಿ ಬ್ಯಾಂಕ್ ಅನ್ನು ಇನ್ನೂ ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಎರಡು ಬಣದವರ ಸಭೆ ಕರೆದಿದ್ದಾರೆ. ಶಾಸಕ ಶ್ರೀನಿವಾಸ್ ಅವರ ಮಾತಿಗೆ ಒಪ್ಪಿಗೆ ಸೂಚಿಸಿದರೆ ಚುನಾವಣೆ ನಡೆಯುವುದಿಲ್ಲ.