ರೂಪಕಲಾ
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹಾಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ದಯ್ಯನಪಾಳ್ಯದ ರೈತರಾದ ಈರಣ್ಣರವರು ತಮ್ಮ ಜಮೀನಿನಲ್ಲಿ ತೆಂಗು ನಾಟಿ ಮಾಡಿ ಕೊಂಡಿದ್ದು, ಇವರ ಜಮೀನಿನಲ್ಲಿ ಬೋರ್‍ವೆಲ್‍ನಲ್ಲಿ ದೊರೆಯುವ ಅಲ್ಪ-ಸ್ವಲ್ಪ ನೀರನ್ನು ಬಳಸಿ ಹನಿ ನೀರಾವರಿ ಮುಖಾಂತರ ತೆಂಗಿನ ಗಿಡಗಳಿಗೆ ನೀರು ಒದಗಿಸುತ್ತಿದ್ದರು.
ಬೇಸಿಗೆಯಲ್ಲಿ ಬೋರ್‍ವೆಲ್‍ನಲ್ಲಿ ಬತ್ತಿ ಹೋಗಿ ಗಿಡಗಳಿಗೆ ನೀರಿಲ್ಲದಂತಾಗಿ ಒಣಗಿ ಹೋಗುವ ಸ್ಥಿತಿಗೆ ತಲುಪಿದ್ದವು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರದಿಂದ ಸೌಲಭ್ಯವಿದ್ದರೆ ತಿಳಿಸಿ ಎಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಮ್ಮ ಜಮೀನುಗಳಲ್ಲಿ ತಾವೇ ಕೆಲಸ ನಿರ್ವಹಿಸುವಂತಹ ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ ಮತ್ತು ಕ್ಷೇತ್ರ ಬದುಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಲಹೆ ನೀಡಿದರು.
ನನ್ನ ಬಳಿ ಈ ಕಾಮಗಾರಿಗಳನ್ನು ನಿರ್ಮಾಣ ಮಾಡಿಕೊಳ್ಳಲು ಹಣದ ಕೊರತೆ ಇತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯನ್ನು ಭೇಟಿ ಮಾಡಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನು ವಿಚಾರಿಸಿದಾಗ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿಮ್ಮ ಜಮೀನುಗಳಲ್ಲಿ ನೀವೆ ಕೆಲಸ ಮಾಡಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ನೇರವಾಗಿ ಹಣ ಸಂದಾಯವಾಗುತ್ತದೆ ಹಾಗೂ ನಿಮಗೆ ಇದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕೂಲಿ ಬೇಡಿಕೆ ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ನಮೂನೆ-6 ರಲ್ಲಿ ಸಲ್ಲಿಸಿ ನಮ್ಮ ಕುಟುಂಬದವರೆಲ್ಲ ಸೇರಿ ಕಾಮಗಾರಿ ನಿರ್ಮಾಣ ಮಾಡಿಕೊಳ್ಳಲು ಮುಂದಾಗಿದ್ದೇವೆ. ಇದರಿಂದ ನಮ್ಮ ಕುಟುಂಬದ ನಿರ್ವಹಣೆಗೆ ಅನುಕೂಲವಾಯಿತು.
ಕೃಷಿ ಹೊಂಡದಲ್ಲಿ ಮಳೆಗಾಲದಲ್ಲಿ ನೀರು ಶೇಖರಣೆಗೊಂಡು ಬೇಸಿಗೆ ದಿನಗಳಲ್ಲಿ ತೆಂಗಿನ ಬೆಳೆಗೆ ಇದರಿಂದ ನೀರನ್ನು ಹರಿಸಲು ಮತ್ತು ಜಾನವಾರುಗಳಿಗೆ ಕುಡಿಯುವ ನೀರನ್ನು ಪಡೆಯಲು ಇದರಿಂದ ಅನುಕೂಲವಾಗುತ್ತದೆ ಎಂಬ ನಂಬಿಕೆ ಇದೆ. ಹೊಲದಲ್ಲಿ ಬದು ನಿರ್ಮಾಣ ಮಾಡುವುದರಿಂದ ಮಳೆ ನೀರು ವ್ಯರ್ಥವಾಗಿ ಹರಿದು ಪೋಲಾಗದೆ ನಮ್ಮ ಜಮೀನಿನಲ್ಲಿಯೇ ಇಂಗಿ ಕೊಳವೆ ಬಾವಿಗೆ ಅಂತರ್ಜಲ ಒದಗಿಸುತ್ತದೆ ಮತ್ತು ಮಣ್ಣಿನಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
ನಮ್ಮ ಕುಟುಂಬದವರೆ ನಮ್ಮ ಹೊಲದಲ್ಲಿ ಕೆಲಸ ಮಾಡುವುದರಿಂದ 100 ದಿನಗಳ ಕಾಲ ಉದ್ಯೋಗ ದೊರೆತು 27500/- ರೂ.ಗಳು ಕೂಲಿ ಹಣ ದೊರೆಯುತ್ತದೆ. ಹಾಗೂ ಇತರೆ ಕುಟುಂಬಗಳಿಗೂ ಸಹ ಕೂಲಿ ದೊರೆಯುತ್ತದೆ. ಕೇಂದ್ರ ಸರ್ಕಾರ ಈ ವರ್ಷ ಕೂಲಿ ದರವನ್ನು 275/- ರೂ.ಗಳಿಗೆ ಹೆಚ್ಚಿಸಿರುವುದರಿಂದ ಇನ್ನು ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ಹಣವು ನಮ್ಮ ಖಾತೆಗಳಿಗೆ ಸಂದಾಯವಾಗುವುದರಿಂದ ನಮ್ಮ ಕುಟುಂಬವನ್ನು ನಿರ್ವಹಣೆ ಮಾಡಲು ಅನುಕೂಲವಾಗಿರುತ್ತದೆ. ಹಾಗೂ ನಮ್ಮ ಜಮೀನಿನಲ್ಲಿ ಆಸ್ತಿಯ ನಿರ್ಮಾಣ ಆಗಿ ಮುಂದಿನ ದಿನಗಳಲ್ಲಿ ನಮ್ಮ ಜೀವನ ಮಟ್ಟ ಸುಧಾರಿಸುತ್ತದೆ ಎಂಬ ಆಶಾಭಾವನೆ ಇದೆ ನಗು ಸೂಸಿದರು.
ರೂಪಕಲಾ ಅವರು ತುಮಕೂರು ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿ.