ಚಿತ್ರ: ಕ್ಯಾತ್ಸಂದ್ರ ನರಸಿಂಹ
ತುಮಕೂರು; ಭೂಸುಧಾರಣಾ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರು ಮತ್ತು ಸಚಿವ ಜೆ.ಸಿ.
ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ತುಮಕೂರಿನಲ್ಲಿ ವರದಿಯಾಗಿದೆ.
ನಿಮ್ಮದೇ ಸರ್ಕಾರದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ರೈತ ಮುಖಂಡರ ಪ್ರಶ್ನೆ ಸಚಿವರು ಕೆರಳಿದರು. ರೈತ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಲಾರದೆ ಸಚಿವರು ಬೇಸರಗೊಂಡು ಕಾರಿನಲ್ಲಿ ಹೋಗಿ ಕುಳಿತ ಘಟನೆ ಜರುಗಿದೆ.
ರೈತ ಮುಖಂಡರು ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದಾಗ ಸಚಿವರು ಸಿಡಿಮಿಡಿ ವ್ಯಕ್ತಪಡಿಸಿದರು. ಆಗ ಮಾತಿಗೆ ಮಾತು ಬೆಳೆಯಿತು. ಪ್ರತಿಭಟನಾನಿರತ ರೈತರು ಸಚಿವರ ವಿರುದ್ಧ ಘೋಷಣೆ ಕೂಗಿದರು. ಒಂದು ಹಂತದಲ್ಲಿ ಪ್ರತಿಭಟನಾರರು ದಿಕ್ಕಾರ ಕೂಗುತ್ತಿದ್ದಂತೆಯೇ ಸಚಿವರು ಹೊರಟು ಹೋದರು. ಮತ್ತೆ ಸಚಿವರನ್ನು ಸಮಾಧಾನಪಡಿ ಅಧಿಕಾರಿಗಳು ಕರೆತಂದರು. ಸಚಿವರು ಹಠಕ್ಕೆ ಬಿದ್ದಂತೆ ತನ್ನ ಪಟ್ಟನ್ನು ಸಡಿಸಲೇ ಇಲ್ಲ. ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರ ಬಳಿ ಬಂದಾಗ ಈ ಘಟನೆ ಜರುಗಿದೆ.
ಭೂಸುಧಾರಣೆ ಕಾಯ್ದೆ 1961ಕ್ಕೆ ತಿದ್ದುಪಡಿ ತಂದು ಕಾಯ್ದೆ ಕಲಂ 79 ಎ,ಬಿ,ಸಿ ಮತ್ತು 63 ಹಾಗೂ 80ನ್ನು ತೆಗೆದಹಾಕುವ ಕರಡು ಮಸೂದೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವುದನ್ನು ವಿರೋಧಿಸಿ ಹಲವು ರೈತ ಸಂಘಟನೆಗಳು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದವು.
ಯಾವುದೇ ತಿದ್ದುಪಡಿ ಅಥವಾ ಕಾಯ್ದೆ ರೂಪಿಸಲು ಸಾರ್ವಜನಿಕರ ಒಳಿತು ಅದರಲ್ಲಿ ಅಡಕವಾಗಿರಬೇಕು. ಅದನ್ನು ಜನಸಮುದಾಯ ಒಪ್ಪುವಂತಿರಬೇಕು, ಅದು ಸಮರ್ಥನೀಯವಾಗಿರಬೇಕು. ಅಂತಹ ಕಾಯ್ದೆ ಅಥವಾ ತಿದ್ದುಪಡಿ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಇಂತಹ ಚರ್ಚೆಗೆ ಅವಕಾಶ ನೀಡದೆ ಸರ್ಕಾರ ತರಲು ಉದ್ದೇಶಿಸಿರುವ ಭೂಸುಧಾರಣಾ ಕಾಯ್ದೆ ಬಾಲಿಶವಾಗಿರುತ್ತವೆ ಎಂದು ಪ್ರತಿಭಟನಾಕಾರರು ದೂರಿದರು.
ಕಲಂಗಳನ್ನು ರದ್ದುಪಡಿಸಿದರೆ ಭೂಸುಧಾರಣಾ ಕಾಯ್ದೆಯ ಅಸ್ತಿತ್ವವೇ ಇರುವುದಿಲ್ಲ. ಕಾಯ್ದೆಯ ಮೂಲ ಉದ್ದೇಶ ಉಳುವವನೇ ಭೂಮಿಯ ಒಡೆಯ ಎಂಬ ಪರಿಕಲ್ಪನೆಗೆ ಈ ತಿದ್ದುಪಡಿ ತಿಲಾಂಜಲಿ ಇಡಲಿದೆ. ಉಳ್ಳವರು ಮಾತ್ರ ಭೂಮಿ ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಸಣ್ಣ ಹಿಡುವಳಿ ರೈತರೇ ಜಾಸ್ತಿ ಇದ್ದು ಅವರ ಸಂಪೂರ್ಣ ಬದುಕು ಬೀದಿಗೆ ಬೀಳಲಿದೆ. ರೈತರ ಅಸ್ತಿತ್ವವೇ ಇಲ್ಲವಾಗಲಿದೆ.. ಉದ್ಯೋಗಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ದಲಿತರು ಅತ್ಯಂತ ಸಂಕಷ್ಟಕ್ಕೆ ಈಡಾಗುತ್ತಾರೆ. ರೈತಾಪಿ ಕೃಷಿ ಸಂಸ್ಕೃತಿ ಮಾಯವಾಗಿ ಬಂಡವಾಳಿಗರ ಕೃಷಿ ಸಂಸ್ಕೃತಿ ಬೆಳೆಯುತ್ತದೆ ಮತ್ತು ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ ಎಂದು ಆರೋಪಿಸಿದರು.
ತಿದ್ದುಪಡಿಯಿಂದ ಆಹಾರ ಸಾರ್ವಭೌಮತ್ವಕ್ಕೆ ಪೆಟ್ಟು ಬಿದ್ದು ಆಹಾರ ಭದ್ರತೆಯ ಹಕ್ಕು ನಾಶವಾಗುತ್ತದೆ. ಆಹಾರಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗ್ರಾಹಕರ ಮೇಲೂ ಹೊಡೆತ ಬೀಳುತ್ತದೆ. ಬಂಡವಾಳಶಾಹಿಗಳು ಕುಲಾಂತರಿ ಬೀಜಗಳ ಬಳಕೆ, ರಾಸಾಯನಿಕ ಕೃಷಿ, ಮಾನೋಕಲ್ಚರ್‌ಗೆ ಒತ್ತು ನೀಡಿ ಇಡೀ ಪರಿಸರವೇ ನಾಶವಾಗುತ್ತದೆ. ಇದರಿಂದ ಆಹಾರ ಸಂಸ್ಕಂತಿಗೆ ಪೆಟ್ಟು ಬೀಳುತ್ತದೆ ಎಂದು ಆಪಾದಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ಎಐಕೆಎಸ್ ಸಿಸಿ, ಎಐಕೆಎಸ್, ದಲಿತ ಸಂಘರ್ಷ ಸಮಿತಿಗಳು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ರೈತ ಮುಖಂಡ ಅಹವಾಲುಗಳನ್ನು ಆಲಿಸಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ದು ಹೇಳಿ ಬೇಸರದಿಂದಲೇ ಅಲ್ಲಿಂದ ತೆರಳಿದರು. ಇದೇ ವೇಳೆ ಸಂಸದ ಅವರಿಗೂ ಮನವಿ ಸಲ್ಲಿಸಲಾಯಿತು. ಪಾರ್ಲಿಮೆಂಟ್ ನಲ್ಲಿ ಚರ್ಚಿಸುತ್ತೇನೆ. ಪ್ರಧಾನಿಗಳ ಗಮನ ಸೆಳೆಯುತ್ತೇನೆ ಎಂದು ಬಸವರಾಜು ರೈತ ಮುಖಂಡರಿಗೆ ಭರವಸೆ ನೀಡಿದರು.