ತುಮಕೂರು: ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜನವರಿ 2ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಲಕ್ಷ ರೈತರು ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸಿದ್ದಗಂಗಾ ಮಠ ಮತ್ತು ಕಾರ್ಯಕ್ರಮದ ಸ್ಥಳವನ್ನು ಪರೀಶೀಲನೆ ಮಾಡಿದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಸಮಾರಂಭ ನಡೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಬಿ.ಎಚ್.ರಸ್ತೆಯಲ್ಲಿ ಎಲ್.ಇ.ಡಿ ಪರದೆಗಳನ್ನು ಅಳವಡಿಸಿ ಜನರು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದರು.
ಜನವರಿ 2 ರಂದು ಮಧ್ಯಾಹ್ನ 2.15ಕ್ಕೆ ಸಿದ್ದಗಂಗಾ ಮಠಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ, ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಆನಂತರ 10 ನಿಮಿಷ ಮಠದ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆನಂತರ ತುಮಕೂರಿನಲ್ಲಿ ನಡೆಯಲಿರುವ ರೈತರ ಸಮಾವೇಶದಲ್ಲಿ ಭಾಷಣ ಮಾಡುವರು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮಣಿಪುರ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳು, ರಾಜ್ಯಪಾಲರೊಬ್ಬರು ಆಗಮಿಸಲಿದ್ದಾರೆ. ವೇದಿಕೆಯಲ್ಲಿ ಪ್ರಗತಿಪರ ಅರ್ಹ ಫಲಾನುಭವಿ ರೈತರಿಗೆ ಸರ್ಟಿಫಿಕೇಟ್ ಗಳನ್ನು ವಿತರಿಸಲಾಗುವುದು. 5.30ಕ್ಕೆ ಇಲ್ಲಿಂದ ಬೆಂಗಳೂರಿಗೆ ತೆರಳಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಡೀ ಬಿ.ಎಚ್.ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಟೌನ್ ಹಾಲ್ ನಿಂದ ಸ್ವಾಮೀಜಿ ಸರ್ಕಲ್ ವರೆಗೂ ಎಲ್.ಇ.ಡಿ. ಪರದೆಗಳನ್ನು ಅಳವಡಿಸಿ ಜನರು ಸಮಾರಂಭ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಮೂರು ಕಡೆಯಿಂದ ಬರುವ ಬಸ್ ಗಳನ್ನು ರಿಂಗ್ ರಸ್ತೆ, ಕ್ಯಾತ್ಸಂದ, ಸಿರಾ ಗೇಟ್ ನಲ್ಲಿಯೇ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುದ್ದಹನುಮೇಗೌಡರ ಪ್ರಶ್ನೆಗಳಿಗೆ ಆಮೇಲೆ ಉತ್ತರ ಹೇಳೋಣ. ಅದಕ್ಕೆ ಕಾಲ ಬರಲಿ ಎಂದು ವ್ಯಂಗ್ಯವಾಡಿದರು.