Publicstory. in
Tumukuru: ಗ್ಯಾಸ್ ಪೈಪ್ ಲೈನ್ ಗಾಗಿ ಭೂಮಿ ಅಗೆಯಲು ಮುಂದಾಗುತ್ತಿದ್ದಂತೆಯೇ ವಿದ್ಯುತ್ ಪ್ರವಹಿಸಿ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ತುಮಕೂರು ನಗರದಲ್ಲಿ ಗುರುವಾರ ನಡೆದಿದೆ.
ಬೆಳಗ್ಗೆ 11.30ರ ಸುಮಾರಿನಲ್ಲಿ ದೇವರಾಯಪಟ್ನದ ಶ್ರೀನಗರದಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆದಾರರು ಪೈಪ್ ಲೈನ್ ಗೆ ಆಳವಾಗಿ ಗುಂಡಿ ತೆಗೆಯುವಂತೆ ಹೇಳಿ ಹೋಗಿದ್ದಾರೆ. ಕೂಲಿ ಕಾರ್ಮಿಕ ಮಂಜುನಾಥ್ ಹಾರೆ ತೆಗೆದುಕೊಂಡು ಭೂಮಿಗೆ ಹಾಕುತ್ತಿದ್ದಂತೆಯೇ ವಿದ್ಯುತ್ ಪ್ರವಹಿಸಿದೆ.
ವಿದ್ಯುತ್ ಕಂಬದಿಂದ ನೆಲದಲ್ಲಿ ತ್ರಿಪೇಸ್ ಪೇಸ್ ವೈರ್ ಹಾಕಲಾಗಿತ್ತು. ಇದು ಗೊತ್ತಿಲ್ಲದ ಕೂಲಿ ಕಾರ್ಮಿಕ ಮಂಜುನಾಥ್ ಹಾರೆ ನೆಲದೊಳಕ್ಕೆ ಹಾಕುತ್ತಿದ್ದಂತೆಯೇ ನೆಲದಲ್ಲಿದ್ದ ವೈರ್ ನಿಂದ ವಿದ್ಯುತ್ ಹಾರೆಯ ಮೂಲಕ ಹರಿದು ಮಂಜುನಾಥ್ ಒದ್ದಾಡತೊಡಗಿದ್ದಾನೆ. ಕೂಡಲೇ ಆತನ ಮಾವ ಪಂಚೆ ಬಟ್ಟೆಯನ್ನು ಬಿಚ್ಚಿ ಬಿಡಿಸಲು ಪ್ರಯತ್ನಿಸಿದ್ದಾರೆ.
ಅವರಿಗೂ ವಿದ್ಯುತ್ ಸ್ವಲ್ಪ ಹರಿದಿದೆ. ಆದರೂ ಬಿಡದೆ ಅಳಿಯ ಮಂಜುನಾಥ್ ನನ್ನು ಬಿಡಿಸಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅಲ್ಲಿಯೇ ಮೃತಪಟ್ಟಿದ್ದಾರೆ.
ಶ್ರೀನಗರದಲ್ಲೇ ಸುಮಾರು 100 ಕ್ಕೂ ಹೆಚ್ಚು ಮಂದಿ ಟೆಂಟ್ ಹಾಕಿಕೊಂಡು ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕಾರ್ಮಿಕರು ಶಿರಾ ತಾಲೂಕು ಹುಯಿಲುದೊರೆಯವರು ಎಂದು ತಿಳಿದುಬಂದಿದೆ.
ಕೆಲಸ ಮಾಡಿಸುತ್ತಿದ್ದ ಇಂಜಿನಿಯರ್ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ದುರಂತ ನಡೆದಿದೆ. ಈ ಹಿನ್ನೆಲೆಯಲ್ಲಿ ದುರಂತಕ್ಕೆ ಕಾರಣರಾಗಿರುವ ಇಂಜಿನಿಯರ್ ಮತ್ತು ಗುತ್ತಿಗೆ ದಾರರನ್ನು ಬಂಧಿಸಬೇಕು. ಮೃತ ಮಂಜುನಾಥ್ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಸಿಐಟಿಯು ಮುಖಂಡ ಎನ್.ಕೆ.ಸುಬ್ರಮಣ್ಯ ಮತ್ತು ಪ್ರಗತಿಪರ ಸಂಘಟನೆಯ ಶ್ರೀಧರ್ ಒತ್ತಾಯಿಸಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದರೂ ರಾತ್ರಿ 8 ಗಂಟೆಯಾದರೂ ಪೊಲೀಸರು ಪ್ರಕರಣ ದಾಖಲಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.