ಸಮಾರಂಭವನ್ನು ಪ್ರೊ. ಚಿದಾನಂದ ಗೌಡ ಉದ್ಘಾಟಿಸಿದರು. ಕುಲಪತಿ ಪ್ರೊ.ಸಿದ್ದೇಗೌಡ, ಗೀತಾ ವಸಂತ ಇದ್ದಾರೆ
ತುಮಕೂರು: ಕುವೆಂಪು ವಿಶ್ವ ಮಾನವ ಸಂದೇಶವನ್ನು ಲೋಕಕ್ಕೆ ಸಾರಿದರು. ಅದರಲ್ಲಿ ಸಮಾಜದ ಭವಿಷ್ಯ ಅಡಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಚಿದಾನಂದ ಗೌಡ ತಿಳಿಸಿದರು.
ತುಮಕೂರುವಿಶ್ವ ವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯದ ವತಿಯಿಂದ ತುಮಕೂರು ವಿವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕುವೆಂಪು ಜನ್ಮದಿನಾಚರಣೆ ಹಾಗೂ ಕುವೆಂಪು ಓದು ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಮಾನವ ಸಂದೇಶದಲ್ಲಿ ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯತೆ, ಪೂರ್ಣದೃಷ್ಟಿಗಳ ಮಂತ್ರ ಇದೆ. ಅದನ್ನು ಆಧುನಿಕ ಸಮಾಜ ಮರೆಯಬಾರದು ಎಂದರು.
ಕುವೆಂಪು ಕನ್ನಡ ಸಾಹಿತ್ಯ ಕ್ಷೇತ್ರದ ಕಥೆ, ಕವನ, ಕಾದಂಬರಿ, ಲೇಖನ ಇತ್ಯಾದಿ 32 ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕನ್ನಡ ಪ್ರೀತಿ, ಪ್ರಕೃತಿ, ಅಧ್ಯಾತ್ಮ, ವಿಜ್ಞಾನ ಹಾಗೂ ವಿಶ್ವ ಮಾನವ ಸಂದೇಶದ ವಿವಿಧ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.
ಕುವೆಂಪುರವರ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಎಂಬ ಭಾಷಣ ಇಂದಿನ ವಿದ್ಯಾರ್ಥಿಗಳ ಆತ್ಮದ ಸಂಪತ್ತನ್ನು ಹೆಚ್ಚಿಸುತ್ತದೆ. ಕುವೆಂಪು ಓದು ಇದಕ್ಕೆ ಸಹಕಾರಿಯಾಗಿದೆ ಎಂದರು.
ಕುವೆಂಪುರವರ ಪುತ್ರಿ ಹಾಗೂ ‘ಮಗಳು ಕಂಡ ಕುವೆಂಪು’ ಕೃತಿಯ ಲೇಖಕಿ ತಾರಿಣಿ ಚಿದಾನಂದ ಮಾತನಾಡಿ ಕುವೆಂಪು ಯಾವುದೇ ಕಾದಂಬರಿಯನ್ನು ಬರೆಯುವಾಗ ಮೊದಲು ಮ್ಯಾಪ್ ಅನ್ನು ತಯಾರಿಸಿಕೊಳ್ಳುತ್ತಿದ್ದರು ಎಂದು ಕುವೆಂಪು ಬರವಣಿಗೆಯ ಶೈಲಿಯನ್ನು ವಿವರಿಸಿದರು. ಹೀಗೆ ಕುವೆಂಪು ಕಾಲದ ಸಾಹಿತ್ಯ ಸೊರಗುತ್ತಿದ್ದ ಬಗೆ ಮತ್ತು ಅದರಲ್ಲಿಯೂ ಕುವೆಂಪುರವರ ಬೆಳವಣಿಗೆಯನ್ನು ಸವಿಸ್ತಾರವಾಗಿ ತಿಳಿಸಿದರು.
ಬದ್ಧತೆಯದೇ ಕೊರತೆ
ಕುಲಪತಿ ಎಸ್. ಸಿದ್ದೇಗೌಡ ಮಾತನಾಡಿದರು
ತುಮಕೂರು ವಿವಿಯ ಕುಲಪತಿ ಪ್ರೊ ವೈ ಎಸ್ ಸಿದ್ದೇ ಗೌಡ ಮಾತನಾಡಿ ಕುವೆಂಪುರವರ ವೈಚಾರಿಕ ಚಿಂತನೆಯನ್ನು ಎಲ್ಲರು ಓದುತ್ತಾರೆ. ಆದರೆ ಅವುಗಳ ಆಚರಣೆಗೆ ತರುವ ಬದ್ದತೆಯ ಕೊರತೆ ನಮ್ಮಲ್ಲಿದೆ. ವಿದ್ಯಾರ್ಥಿಗಳಲ್ಲಿನ ಹೃದಯ ಶ್ರೀಮಂತಿಕೆಯನ್ನು ಆತ್ಮಶ್ರೀ ಲೇಖನ ಹೆಚ್ಚಿಸಿದೆ ಎಂದರು.
ಕುವೆಂಪು ಓದಿನಿಂದ ನಮ್ಮ ಭಾವನೆಗಳು ಸದ್ಭಾವನೆಗಳೆಡೆಗೆ ಹೊರಳುತ್ತವೆ. ಕಾರಣ ಕುವೆಂಪುರವರ ವೈಚಾರಿಕ ಚಿಂತನೆಯೇ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ ಕೆ ಎನ್ ಗಂಗಾನಾಯಕ್, ಜಿಲ್ಲಾ ಕಸಾಪ ಅಧ್ಯಕ್ಷೆ ಬಾ ಹ ರಮಾಕುಮಾರಿ, ಕುವೆಂಪು ಅಧ್ಯಯನ ಪೀಠದ ನಿರ್ದೇಶಕಿ ಡಾ. ಗೀತಾ ವಸಂತ, ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯದ ಮಲ್ಲಿಕಾ ಬಸವರಾಜು ಉಪಸ್ಥಿತರಿದ್ದರು. ಕುವೆಂಪು ಅವರ ಗೀತೆಗಳ ಗಾಯನ ನಡೆಯಿತು.