ಸ್ಮಿತಾ ಕೆ ಆರ್
ಎಲ್ಲರಿಗೂ ನಮಸ್ಕಾರ
ಕೊರೊನಾ ನಮ್ಮ ದೈನಂದಿನ ದಿನಚರಿಯನ್ನೆ ಬದಲಿಸಿದೆ. ಗೃಹಿಣಿಯಾಗಿ ದಿನವೂ ಮುಂಜಾನೆ ಐದು ಗಂಟೆಯಾಗುತ್ತಿದ್ದಂತೆ ಎದ್ದು ಮನೆಯನ್ನು ಶುಚಿಗೊಳಿಸಿ ತಿಂಡಿ ಅಡುಗೆಯನ್ನು ಮಾಡಿ ಮಕ್ಕಳನ್ನು ಎಬ್ಬಿಸಿ ಅವರನ್ನು ಶಾಲೆಗೆ ಕಳುಹಿಸಿ ನಾನೂ ಕೆಲಸಕ್ಕೆ ಹೊರಡಲು ತಯಾರಿ ಮಾಡಿಕೊಂಡಳ್ಳುವುದು ನನ್ನ ಮೊದಲ ಜವಾಬ್ದಾರಿಯಾಗಿತ್ತು.
ನನ್ನ ಎರಡನೇ ಜವಾಬ್ದಾರಿ ಶಾಲೆಯ ಶಿಕ್ಷಕಿಯಾಗಿ ನಂತರ ಶುರುವಾಗುತ್ತದೆ.
ಮೊದಲ ಜವಾಬ್ದಾರಿ ಮುಗಿಸಿ ಒಂದೇ ಉಸಿರಿನಲ್ಲಿ ಶಾಲೆ ತಲುಪಿ ಅಲ್ಲಿರುವ ಮಕ್ಕಳಿಗೆ ನಗುನಗುತ್ತಾ ಪಾಠ ಹೇಳಿಕೊಟ್ಟು ಸುಸ್ತಾಗಿ ಮನೆಗೆ ಬಂದು ನಂತರ ಉಳಿದ ಮನೆಗೆಲಸವನ್ನು ಮಾಡಿ ತನ್ನ ಮಕ್ಕಳೊಂದಿಗೆ ಆಟವಾಡಿ ಮಲಗುವಾಗಲೂ ನಾಳೆಯ ಕೆಲಸದ ಬಗ್ಗೆ ಚಿಂತಿಸುತ್ತ ಸದಾ ಚುರುಕಾಗಿರುತ್ತಿದ್ದ ನನ್ನಂತಹ ಶಿಕ್ಷಕರನ್ನು ಕಣ್ಣಿಗೆ ಕಾಣದ ಹಿಡಿಯಲೂ ಸಿಗದ ಒಂದು ವೈರಸ್ ತೆಪ್ಪಗೆ ಮನೆಯಲ್ಲಿ ಕೂರುವಂತೆ ಮಾಡಿಬಿಟ್ಟಿದೆ.
ಮಕ್ಕಳು ಬರೀ ಪುಸ್ತಕದಿಂದ ಕಲಿಯುವುದಲ್ಲದೇ ಶಾಲೆಯ ವಾತಾವರಣ ಸಹಪಾಠಿಗಳು ಹಾಗೂ ಶಿಕ್ಷಕರನ್ನು ನೋಡಿಯು ಕಲಿಯುತ್ತಾರೆ.ಇಂತಹ ಶಾಲೆಗಳು ಈಗ ಶುರುವಾಗಬೇಕಾದ ಸಮಯ. ಮಕ್ಕಳು ಬೇಸಿಗೆ ರಜೆ ಕಳೆದು ಶಾಲೆಯಲ್ಲಿರಬೇಕಾದ ದಿನಗಳಿವು.
ಆದರೆ ನಾವು ಶಾಲೆಗೆ ಬಂದು ಪಾಠ ಮಾಡುತ್ತೇವೆ ಎಂದರೂ ಶಾಲೆಗಳನ್ನು ತೆರೆಯಲು ಆಗದೆ, ಮಕ್ಕಳನ್ನು ಕರೆಸಿಕೊಳ್ಳಲೂ ಆಗದೆ ಇರುವಂತಹ ಪರಿಸ್ಥಿತಿ ಬಂದುಬಿಟ್ಟಿದೆ.
ಇಂತಹ ಸಂಧರ್ಭದಲ್ಲಿ ಅನಿವಾರ್ಯ ಎಂಬಂತೆ ಆನ್ಲೈನ್ ತರಗತಿಗಳು ಶುರುವಾಗಿವೆ. ಶಾಲೆಯಲ್ಲಿ ದಿನವೂ ನೋಡುವ ಮಕ್ಕಳನ್ನು ಕಂಪ್ಯೂಟರ್ ತೆರೆಯ ಮೇಲೆ ನೋಡುವಂತಾಗಿದೆ.ಆನ್ಲೈನ್ ತರಗತಿಗಳು ಶಿಕ್ಷಕರಿಗೂ ಮಕ್ಕಳಿಗೂ ಹೊಸ ಅನುಭವ.
ನಾವು ಹೇಳುವ ಪಾಠವನ್ನು ಮಕ್ಕಳೇ ಇಲ್ಲದ ಶಾಲೆಯಲ್ಲಿ ಮೊಬೈಲ್ ಇಲ್ಲ ಕಂಪ್ಯೂಟರ್‌ಗಳ ಮುಂದೆ ಹೇಳಬೇಕಾದ ಅನಿವಾರ್ಯತೆ.
ಶಿಕ್ಷಕರಿಗೆ ಮತ್ತೊಂದು ವಿಶೇಷ ಜ್ಞಾನ ಶಿಕ್ಷಕರಾದ ಕೂಡಲೇ ಬರುತ್ತದೆ.ಅದು ನಾವು ಮಾಡುವ ಪಾಠ ಯಾವ ವಿದ್ಯಾರ್ಥಿಗೆ ಎಷ್ಟು ತಿಳಿದಿದೆ ಎಂದು ಅವರ ಹಾವ–ಭಾವಗಳ ಮೂಲಕವೇ ಗುರುತಿಸುವುದು.ಆದರೆ ಈಗ ನಾವು ಹೇಳುವ ಪಾಠ ಈಗ ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳಿಗೆ ತಿಳಿಯುತ್ತಿದೆಯೋ ಗೊತ್ತಿಲ್ಲ.ಆದರೆ ಇದು ಮುಂದಿನ ದಿನಗಳಲ್ಲಿ ಆನ್ಲೈನ್ ತರಗತಿಗಳೇ ಅನಿವಾರ್ಯವಾಗಬಹುದು. ಅದಕ್ಕೆ ಪೀಠಿಕೆಯಾಗಿ ಈಗಿನ ವಾತಾವರಣ ನಿರ್ಮಾಣವಾಗಿದೆ.
ಪ್ರತಿಯೊಂದು ವಿಷಯದಲ್ಲೂ ಅನುಕೂಲ ಹಾಗೂ ಅನಾನುಕೂಲಗಳು ಇದ್ದೇ ಇರುತ್ತದೆ. ಆನ್ಲೈನ್ ತರಗತಿಗಳ ಮೂಲಕ ನಾವು ಮಾಡಿರುವ ಪಾಠದ ವಿಡಿಯೋ ಎಷ್ಟು ಭಾರಿ ಬೇಕಾದರು ತೆಗೆದು ನೋಡಬಹುದು.
ಆನ್ಲೈನ್ ಮೂಲಕ ಮಕ್ಕಳು ಶಿಕ್ಷಕರು ಮುಖಾಮುಖಿ ಮಾತನಾಡಬಹುದು ಆದರೆ ಒಮ್ಮೊಮ್ಮೆ ನೆಟ್ವರ್ಕ್ ನ ಸಮಸ್ಯೆ ಬರಬಹುದು ಪಾಠ ಪೂರ್ತಿಯಾಗಿ ಅರ್ಥವಾಗದೇ ಹೋಗಬಹುದು. ಆದರೆ ಶಾಲೆಯಲ್ಲಿ ತಿಳಿಸಿಕೊಟ್ಟಾಗ ತಿಳಿಯುವ ರೀತಿ ವಿಷಯಗಳು ಮಕ್ಕಳಿಗೆ ಅರ್ಥವಾಗುತ್ತಿದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ.
ಏನೆ ಆದರೂ ಮಕ್ಕಳು ಇಲ್ಲದೆ ಶಿಕ್ಷಕರಿಗೆ ಕೆಲಸವಿಲ್ಲ, ಶಿಕ್ಷಕರು ಇಲ್ಲದೆ ಶಾಲೆಗೆ ಅರ್ಥವೇ ಇಲ್ಲ. ಒಟ್ಟಿನಲ್ಲಿ ಶಿಕ್ಷಕರು, ಮಕ್ಕಳು ಹಾಗೂ ಶಾಲೆಯ ಬಂದರೇನೇ ಬಹಳ ಸೊಗಸು.
ಒಟ್ಟಿನಲ್ಲಿ ಈಗ ಕಂಪ್ಯೂಟರ್, ಮೋಬೈಲ್‌ಗಳೇ ಶಾಲೆಗಳಾಗಿ ಬದಲಾಗಿದ್ದು ಮಕ್ಕಳ ಮತ್ತು ಶಿಕ್ಷಕರ ನಡುವೇ ಸಂಪರ್ಕ ತಂದು ಕೊಟ್ಟಿದೆ.
ಆದಷ್ಟು ಬೇಗ ಈ ಕೊರೊನ ದಿಂದ ಮುಕ್ತಿ ಸಿಕ್ಕಿ ಮತ್ತೆ ಮಕ್ಕಳು ಶಾಲೆಗೆ ಬಂದು ಪಾಠ ಕಲಿತು ನಮ್ಮ ದೇಶದ ಸತ್ಪ್ರಜೆಗಳಾಗಿ ಬೆಳೆಯಲಿ ಎಂದು ಆಶಿಸುತ್ತೇನೆ.
ಸ್ಮಿತಾ ಅವರು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ಶಿಕ್ಷಕಿ.