ಮುಖ್ಯಮಂತ್ರಿ ಮಧ್ಯ ಪ್ರವೇಶಕ್ಕೆ ಅಗ್ರಹ
ಹೊಸ ಸಮಿತಿ ಬರ್ಖಾಸ್ತುಗೊಳಿಸಿ
ಹಳೆ ಪಠ್ಯವನ್ನೇ ಮುಂದುವರಿಸಿ
ಶಿಕ್ಷಣ ಸಚಿವರ ರಾಜೀನಾಮೆಗೆ ಅಗ್ರಹ
ublicstory
Tumakuru: ಹೊಸ ಪಠ್ಯಕ್ರಮಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತವರು ಕ್ಷೇತ್ರದಲ್ಲೇ ವಿರೋಧ ವ್ಯಕ್ತವಾಗಿದ್ದು, ಭಾನುವಾರ ನಗರದಲ್ಲಿ ನಡೆದ ಪೋಷಕರು, ಚಿಂತಕರ ಸಭೆಯಲ್ಲಿ ಹೊಸ ಪಠ್ಯ ಪುಸ್ತಕ ವಾಪಸ್ ಪಡೆಯುವಂತೆ, ಹಳೆಯ ಪಠ್ಯ ಪುಸ್ತಕ ಮುಂದುವರಿಸುವಂತೆ ಒತ್ತಾಯಿಸಿದರು.
ಶಿಕ್ಷಣ ಸಚಿವರ ನಡೆ, ನುಡಿ ಬಗ್ಗೆ ಆಕ್ರೋಶ, ಸಿಟ್ಟು ವ್ಯಕ್ತಪಡಿಸಿದ ಅನೇಕರು ಮಕ್ಕಳ ಮುಗ್ದ ಮನಸ್ಸಿನ ಮೇಲೆ ಅಟ ಆಡುವ ಕೆಲಸವನ್ನು ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ನಿವೃತ್ತ ಪ್ರಾಂಶುಪಾಲ ಎಂ.ಎಚ್.ನಾಗರಾಜ್ ಮಾತನಾಡಿ, ಯಾವುದೇ ಕಾರಣಕ್ಕೂ ಹೊಸ ಪಠ್ಯ ಒಪ್ಪಲು ಸಾಧ್ಯವಿಲ್ಲ. ಕೂಡಲೇ ಹೊಸ ಪಠ್ಯ ಪುಸ್ತಕ ವಾಪಸ್ ಪಡೆಯಬೇಕು. ಸಮಿತಿಯನ್ನು ಬರ್ಖಾಸ್ತುಗೊಳಿಸಬೇಕು ಎಂದರು.
ಹಿರಿಯ ವಕೀಲ, ಚಿಂತಕ ಎಸ್. ರಮೇಶ್ ಮಾತನಾಡಿ, ಮುಖ್ಯಮಂತ್ರಿ ಮೌನವನ್ನು ಖಂಡಿಸಿದರು. ಸಿಬಿ ಎಸ್ ಸಿ ಮಂಡಳಿಯು ಅನುಮೋದಿಸಿದರುವ ಪಠ್ಯವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ಹೊಸ ಪಠ್ಯ ಮಕ್ಕಳ ಮನಸ್ಸಿನ ಮೇಲೆ ಚೆಲ್ಲಾಟವಾಡುತ್ತಿದೆ. ಹೊಸ ಪಠ್ಯ ಸಂವಿಧಾನ ನಿಯಮಗಳನ್ನು ಗಾಳಿಗೆ ತೂರಿದೆ. ಸರ್ಕಾರ ತನ್ನ ಕಾರ್ಯಸೂಚಿಯನ್ನು ಜಾರಿ ಮಾಡಲು ಹೊರಟಿದೆ. ಇದನ್ನು ವಿರೋಧಿಸಬೇಕಾಗಿದೆ ಎಂದರು.
ಸರ್ಕಾರದ ನಡೆಯನ್ನು ಖಂಡಿಸಿ ಜನರು ಪತ್ರಚಳವಳಿ ನಡೆಸಬೇಕು ಎಂದರು.
ಸಮಿತಿ ರದ್ದು ಮಾಡಬೇಕು. ಹೊಸ ಪಠ್ಯ ಪುಸ್ತಕಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಕೋವಿಡ್ ನಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಪಠ್ಯ ಪುಸ್ತಕ ವಿವಾದ ಮಕ್ಕಳನ್ನು ಮತ್ತಷ್ಟು ಘಾಸಿಗೊಳಿಸುತ್ತಿದೆ ಎಂದರು.
ವಿದ್ಯಾರ್ಥಿ ಸಮೂಹ, ಹಿಂದುಳಿದ ವರ್ಗಗಳು ಬೀದಿಗೆ ಇಳಿದು ಹೋರಾಟ ಮಾಡಬೇಕು ಎಂದು ಕುಣಿಹಳ್ಳಿ ಮಂಜುನಾಥ್ ಹೇಳಿದರು.
ತುಮಕೂರಿನಲ್ಲಿ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಡೆದ ಪೋಷಕರ ಸಭೆಯಲ್ಲಿ ಹೇಳಿದರು.
AAP ಪಕ್ಷದ ಮುಖಂಡ, ವಕೀಲರಾದ ಬಿ.ಜೆ.ಮಹಾವೀರ ಜೈನ್ ಮಾತನಾಡಿ, ಪಠ್ಯ ಸಮಿತಿ ಅಧ್ಯಕ್ಷನ ಶಿಕ್ಷಣದ ಬಗ್ಗೆಯೇ ಸರಿಯಾದ ಮಾಹಿತಿ ಶಿಕ್ಷಣ ಸಚಿವರಿಗಿಲ್ಲ. ಅವರೇ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಅರ್ ಎಸ್ ಎಸ್ ಎಸ್, ಬಜರಂಗದ ಕಾರ್ಯಸೂಚಿಯನ್ನು ಶಿಕ್ಷಣ ಪಠ್ಯದ ಮೂಲಕ ಜಾರಿ ಮಾಡಲು ಯತ್ನಿಸುತ್ತಿರುವ ಈ ಸರ್ಕಾರದ ಪ್ರಯತ್ನವನ್ನು ಎಲ್ಲರೂ ತಡೆಯಬೇಕು ಎಂದರು.
ಪೋಷಕರಾದ ಟಿ. ಓಬಯ್ಯ ಮಾತನಾಡಿ, ಮಕ್ಕಳ ಮನಸ್ಸಿನ ಮೇಲೆ ಈ ಸರ್ಕಾರ ದಾಳಿ ಮಾಡುತ್ತಿದೆ. ಬರಗೂರು ರಾಮಚಂದ್ರಪ್ಪ ಸಮಿತಿ ಮಕ್ಕಳ ಮನಸ್ಸನ್ನು ಅರಿತು ಪಠ್ಯ ಕ್ರಮ ರೂಪಿಸಿದೆ. ಅದೇ ಪಠ್ಯವನ್ನು ಸರ್ಕಾರ ಮುಂದುವರಿಸಬೇಕು. ಹೊಸ ಪಠ್ಯವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ನಮ್ಮ ಸಂವಿಧಾನಕ್ಕೂ ಇವರು ಕೈ ಹಾಕುತ್ತಾರೆ. ಈಗಲೇ ಎಚ್ಚರಿಕೆಯಿಂದ ಇರಬೇಕು ಎಂದರು.
ಎಚ್.ಜಿ.ರಮೇಶ್ ಕುಣಿಗಲ್, ಕುವೆಂಪು ರಚಿತ ನಾಡಗೀತೆಗೆ ಅವಮಾನ ಮಾಡಿದ ವ್ಯಕ್ತಿ ಪಠ್ಯಪುಸ್ತಕ ರಚನೆ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರವಲ್ಲ, ಮಾದ್ಯಮ ಕ್ಷೇತ್ರ ಸಹಿತ ಎಲ್ಲ ಕ್ಷೇತ್ರವನ್ನು ಕೆಡಿಸುವ ಹುನ್ನಾರ ನಡೆದಿದೆ. ಇಡೀ ರಾಜ್ಯದ ಜನರು ಹೋರಾಟಕ್ಕೆ ಸಿದ್ದರಾಗಬೇಕು ಎಂದರು.
ಎನ್.ನಾಗಪ್ಪ ಮಾತನಾಡಿ, ಪಠ್ಯ ಶಿಕ್ಷಣ ಸಮಿತಿ ಅಧ್ಯಕ್ಷ ಶಿಕ್ಷಣ ತಜ್ಜ ಅಲ್ಲ. ನಾನು ಸಹ ಶಿಕ್ಷಣ ಸಮಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಈಗ ರಚಿಸಿರುವ ಸಮಿತಿ ಒಂದು ಪಕ್ಚ, ಜಾತಿಗೆ ಸೀಮಿತವಾದಂತಿದೆ. ಸಾರಸಟ್ಟಾಗಿ ಹೊಸ ಪಠ್ಯ ಸಮಿತಿಯನ್ನು ಬರ್ಖಾಸ್ತು ಮಾಡಬೇಕು. ಪಠ್ಯ ಪುಸ್ತಕಗಳನ್ನು ತಿರಸ್ಕರಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಎನ್.ನಾಗಪ್ಪ ಹೇಳಿದರು.
ಬಾ.ಹ.ರಮಾಕುಮಾರಿ ಮಾತನಾಡಿ, ಹೊಸ ಪಠ್ಯ ಬೇಡ. ಸಮಿತಿಯನ್ನು ರದ್ದು ಮಾಡಬೇಕು. ಮಕ್ಕಳಿಗೆ ಉಪಯೋಗ ಅಗುವಂತಿರಬೇಕು ಎಂದರು.
ಕೊಳೆಗೇರಿ ಸಮಿತಿಯ ಎ.ನರಸಿಂಹಮೂರ್ತಿ, ಇನ್ನು ಮಕ್ಕಳಿಗೆ ಪಠ್ಯ ಪುಸ್ತಕ ಕೈ ಸೇರಿಲ್ಲ. ಸರ್ಕಾರ ಏನ್ ಮಾಡಲು ಹೊರಟಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇದು ಇಡೀ ಮಕ್ಕಳ ಮನಸ್ಸನ್ನು ಕೆಡಿಸುವ ಉದ್ದೇಶ ಇದರ ಹಿಂದೆ ಅಡಗಿದೆ. ಪಠ್ಯ ಸಮಿತಿ ಅಧ್ಯಕ್ಷರಿಗೆ ಬರಹಗಳ ಗಂಧವೇ ಗೊತ್ತಾಗಿಲ್ಲ. ಸರ್ಕಾರ ಅಹಃಕಾರದಿಂದ ನಡೆದುಕೊಳ್ಳುತ್ತಿದೆ. ಕೂಡಲೇ ಹೊಸ ಪಠ್ಯಕ್ರಮ ರಚಿಸಬೇಕು ಎಂದರು.
ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಅವರು ಬ್ರಾಹ್ಮಣ್ಯದ ಪೌರೋಹಿತ್ಯ ವಹಿಸಿದ್ದಾರೆ ಎಂದು ಕಿಡಿಕಾರಿದರು.
ಹಿರಿಯ ಶಿಕ್ಷಣ ತಜ್ಜ ಕೆ. ದೊರೈರಾಜ್ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಎಸ್.ರಾಘವೇಂದ್ರ ಹೋರಾಟದ ರೂಪುರೇಷೆ ಕುರಿತು ಮಾತನಾಡಿದರು.
ಎಚ್. ಗೋವಿಂದಯ್ಯ, ಕೊಳೆಗೇರಿ ಸಮಿತಿ ಎ.ನರಸಿಂಹಮೂರ್ತಿ, ನಟರಾಜಪ್ಪ, ಕನ್ನಡ ಪ್ರಾಧ್ಯಾಪಕ ಡಾ. ಓ.ನಾಗರಾಜ್, ಜವಾಹರ್, ಸ್ವಾಮಿ, ಪತ್ರಕರ್ತರಾದ ಎಂ.ವಿ.ವೆಂಕಟಾಚಲ, ಆಲದಗೆರೆ ನಾಗೇಂದ್ರ, ಕೆ.ಇ. ಸಿದ್ದಯ್ಯ, ವಕೀಲರಾದ ಕರಿಬಸವಯ್ಯ, ತಾಜುದ್ದೀನ್ ಇತರರು ಇದ್ದರು.