ತುಮಕೂರು: ಶಿರಾ ಉಪ ಚುನಾವಣೆಯಲ್ಲಿ ವಿಚಿತ್ರ ಪರಿಸ್ಥಿತಿಗೆ ಸಿಲುಕಿರುವ ಜೆಡಿಎಸ್ ಗೆ ಕಾರ್ಯಕರ್ತರೇ ಮುಖಂಡರಂತೆ ಆಂತರ್ಯದಲ್ಲಿ ಕೆಲಸ ಮಾಡುತ್ತಾರೆಯೇ ಎಂಬ ಅನುಮಾನ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಕಾಡುತ್ತಿದೆ.
ಕ್ಷೇತ್ರದಲ್ಲಿ ಜೆಡಿಎಸ್ ಹಲವು ಮುಖಂಡರ ಭಾರದಿಂದ ನಲುಗುತ್ತಿತ್ತು. ಶಾಸಕರಾಗಿದ್ದ ದಿವಂಗತ ಸತ್ಯನಾರಾಯಣ್ ಅವರ ನಂತರ ಅನೇಕರು ಟಿಕೆಟ್ ಮೇಲೆ ಆಸೆ ಇಟ್ಟುಕೊಂಡಿದ್ದರು.
ಸೋತು ಸುಣ್ಣವಾಗಿದ್ದ ಸತ್ಯನಾರಾಯಣ ಅವರಿಗೆ ಈ ಸಲದ ಚುನಾವಣೆಯಲ್ಲೇ ಟಿಕೆಟ್ ತಪ್ಪಿಸಿ ತಾವು ಪಡೆಯುವ ಸಾಹಸವನ್ನು ಈ ಮುಖಂಡರು ಮಾಡಿದ್ದರು. ಇದಕ್ಕೆ ಸತ್ಯನಾರಾಯಣ್ ಬಳಿ ಹಣ ಇರಲಿಲ್ಲ ಎಂಬ ಕಾರಣವೂ ಒಂದಾಗಿತ್ತು. ಆದರೆ ದೇವೇಗೌಡರು ಈ ಮಾತಿಗೆ ಕಿಮ್ಮತ್ತು ನೀಡಿರಲಿಲ್ಲ. ಸತ್ಯನಾರಾಯಣ್ ಅವರಿಗೇನೆ ಟಿಕೆಟ್ ನೀಡಿದ್ದರು. ಕೊನೆಗು ಅವರು ಗೆಲವು ಸಾಧಿಸಿದರು.
ಮುಖಂಡರ ಭಾರದಲ್ಲಿ ಮುಳುಗುತ್ತಿದ್ದ ಜೆಡಿಎಸ್ ನ ಒಬ್ಬೊಬ್ಬರೇ ಮುಖಂಡರು ಬಿಜೆಪಿ ಕಡೆ ಮುಖ ಮಾಡಿದರು. ಸತ್ಯನಾರಾಯಣ್ ನಿಧನದ ಬಳಿಕ ಈ ವಲಸೆ ಹೋಗುವುದು ಹೆಚ್ಚಿದೆ.
ಈಗ ಜೆಡಿಎಸ್ ನಾವಿಕನಿಲ್ಲದ ದೋಣಿಯಂತೆ ಕಾಣುತ್ತಿರುವುದು ನಿಚ್ಚಳವಾಗಿದೆ. ಶಿರಾದಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲೆ ಕೂಡ ಅದಕ್ಕೆ ಒಳ್ಳೆಯ ನಾವಿಕ ಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಯಾರೋರೊ ಒಳಿ ಮಾತನಾಡುತ್ತಿರುವುದು ಸಹ ಸಮ್ಮನೇನಲ್ಲ . ಅವರು ಜಿಲ್ಲೆಯಲ್ಲಿ ರಾಜಕೀಯ ದಾಳ ಉರುಳಿಸುವ ಸಲುವಾಗಿ ಕಾಯುತ್ತಿದ್ದಾರಷ್ಟೇ.
ಎಚ್.ಡಿ.ದೇವೇಗೌಡರನ್ನು ಕರೆತಂದು ಸೋಲಿಸಿದ ಬಳಿಕ ಜಿಲ್ಲೆಯ ಜೆಡಿಎಸ್ ನಾಯಕ ದೊಡ್ಡ ದನಿ ತೆಗೆಯದಷ್ಟು ಸಣ್ಣಗಾಗಿದ್ದಾರೆ. ಗುಬ್ಬಿ ಶಾಸಕರು, ಚಿಕ್ಕನಾಯಕನಹಳ್ಳಿ ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹದ ಅಲೆಗಳು ಜೋರಾಗಿಯೇ ಬೀಸುತ್ತಿವೆ. ಇದಕ್ಕೆ ಬೆಂಬಲ ನೀಡಿದಂತೆ ಈ ಮುಖಂಡರು ಪಕ್ಷ ಕಟ್ಟುವಲ್ಲಿ ತೋರದ ಉತ್ಸಾಹ ಹಲವು ಚರ್ಚೆಗಳಿಗೆ ನಾಂದಿಯಾಡಿದೆ.
ಮುಂದಿನ ಚುನಾವಣೆ ವೇಳೆಗೆ ಏನಾಗುತ್ತದೋ ಕಾದುನೋಡಬೇಕು. ಇವೆಲ್ಲ ಕಾರಣಗಳ ಹಿನ್ನೆಲೆಯಲ್ಲಿ ಶಿರಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಕಾಣಿಸಿಕೊಳ್ಳದೇ ಇರುವುದು ಆ ಪಕ್ಷ ಮಂಕಾದಂತೆ ಕಾಣುತ್ತಿದೆ.
ಸಂಪನ್ಮೂಲದ ಕೊರತೆ ಕಾರಣವೂ ಪ್ರಚಾರದಲ್ಲಿ ಜೆಡಿಎಸ್ ಹಿಂದೆ ಇರಲು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಭ್ಯರ್ಥಿ ಅಮ್ಮಾಜಮ್ಮ ಅವರು ಕೊರೊನಾ ಸೋಂಕಿನ ಕಾರಣ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಅಭ್ಯರ್ಥಿ ಇಲ್ಲದೇ ಚುನಾವಣೆಯ ಎದುರಿಸುವ ಇಕ್ಕಟ್ಟಿಗೆ ಆ ಪಕ್ಷ ಸಿಲುಕಿದೆ.
ಆದರೆ ಫೇಸ್ ಬುಕ್ ನಲ್ಲಿ ಹಲವರು ಕೈಗೊಂಡಿರುವ ನಿಮ್ಮ ಮತ ಯಾರಿಗೆ ಅಭಿಯಾನದಲ್ಲಿ ಅಮ್ಮಾಜಮ್ಮ ಹಿಂದೆ ಬಿದ್ದಿಲ್ಲ ಎಂಬುದೇ ಅಚ್ಚರಿಗೆ ಕಾರಣವಾಗಿದೆ.
ಸಾವಿಗೀಡಾದ ತಮ್ಮ ನಾಯಕನ ಕುಟುಂಬವನ್ನು ನಡು ನೀರಿನಲ್ಲಿ ಕೈ ಬಿಟ್ಟ ಮುಖಂಡರಿಗೆ ಪಾಠ ಕಲಿಸಲೆಂಬಂತೆ ಕಾರ್ಯಕರ್ತರೇ ಮುಖಂಡರಾಗಿ ಕೆಲಸ ನಿರ್ವಹಿಸಿದರೆ ಜೆಡಿಎಸ್ ಕಟ್ಟಿ ಹಾಕಲು ಸಾಧ್ಯವಾಗುವುದಿಲ್ಲ.
ಇಂತಹ ಪರಿಸ್ಥಿತಿ ನಿರ್ಮಾಣವಾಗಲಿದೆಯೇ ಎಂಬುದನ್ನು ಅರಿಯಲು ಇನ್ನೂ ಹತ್ತು ಹನ್ನೆರಡು ದಿನ ಕಾಯಬೇಕಾಗಿದೆ. ಕೊನೆ ದಿನಗಳಲ್ಲಿ ಅನುಕಂಪ ಯಾರ ಕೊರಳಿಗೆ ಒಂದು ಬೀಳಲಿದೆ ಎಂಬುದನ್ನು ಯಾರು ಬಲ್ಲರು ? ಅದು ಮತದಾರರಿಗಷ್ಟೇ ಗೊತ್ತು.