Publicstory.in
ಸಿರಾ: ತಾಲ್ಲೂಕಿನಾದ್ಯಂತ ಗುರುವಾರದಿಂದ ಪ್ರಾರಂಭವಾಗುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ನಿರ್ಭೀತಿಯಿಂದ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿದೆ.
ಈ ಕುರಿತು ಸಿರಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜ https://publicstory.in ಗೆ ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಾದ್ಯಂತ ಒಟ್ಟು 17 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಒಟ್ಟು 4292 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
ಎಲ್ಲಾ ಕೇಂದ್ರಗಳನ್ನೂ ಸ್ಯಾನಿಟೈಸರ್ ಮಾಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಒದಗಿಸಲಾಗಿದೆ.
ಪ್ರತಿ ಕೇಂದ್ರದಲ್ಲೂ ಸಿಸಿಟಿವಿ ಅಳವಡಿಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ ನಾಲ್ಕು ಮಾಸ್ಕ್ ವಿತರಣೆ, ಸ್ಥಳದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಯಾನಿಟೈಸರ್ ವಿತರಣೆ ಹಾಗೂ ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಆರೋಗ್ಯ ಸಿಬ್ಬಂದಿ ಹಾಜರಿದ್ದು, ಎಲ್ಲಾ ಮಕ್ಕಳಿಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಲಿದ್ದಾರೆ.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ದೈಹಿಕ ಶಿಕ್ಷಣ ಶಿಕ್ಷಕರನ್ನು ಹಾಗೂ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯಿಂದ ಸ್ವಯಂ ಸೇವಕರನ್ನು ನೇಮಿಸಿ, ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಪಾಡಲು ಕ್ರಮ ಕೈಗೊಳಮಾಡಲಾಗಿದೆ ಎಂದು ಹೇಳಿದರು.
ಯಾವ ವಿದ್ಯಾರ್ಥಿಯೂ ಸಾರಿಗೆ ಸೌಲಭ್ಯ ಇಲ್ಲವೆಂದು ಪರೀಕ್ಷೆಯಿಂದ ವಂಚಿತರಾಗಬಾರದೆಂಬ ಕಾರಣಕ್ಕ ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ತಮ್ಮ ಸ್ವಗ್ರಾಮದಿಂದ ಸಂಬಂಧಿಸಿದ ಪರೀಕ್ಷಾ ಕೇಂದ್ರಕ್ಕೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಒಂದು ಗಂಟೆ ಮೂವತ್ತು ನಿಮಿಷ ಮುಂಚಿತವಾಗಿ ಬಂದು ತಪಾಸಣೆಗೆ ಒಳಪಡುವುದು, ಆರೋಗ್ಯ ತಪಾಸಣೆಗೂ ಮುನ್ನ ವಿದ್ಯಾರ್ಥಿಗಳು ತಮ್ಮ ಕೈಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿಕೊಂಡು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ವಿವರಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಪರಸ್ಪರ ಒಂದು ಮೀಟರ್ ಅಂತರ ಕಾಪಾಡಿಕೊಂಡು, ಸರತಿ ಸಾಲಿನಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು.
ಕೆಮ್ಮುವಾಗ ಮತ್ತು ಸೀನುವಾಗ ಮೂಗು ಮತ್ತು ಬಾಯಿಗೆ ಕರವಸ್ತ್ರ ಉಪಯೋಗಿಸುವುದು. ಇತರೆ ಪರೀಕ್ಷಾರ್ಥಿಗಳೊಂದಿಗೆ ಕೈ ಕುಲುಕುವುದು, ಅಪ್ಪಿಕೊಳ್ಳುವುದು, ಮುಟ್ಟುವುದು ಮತ್ತು ಎಲ್ಲೆಂದರಲ್ಲಿ ಉಗುಳುವುದನ್ನು ಮಾಡುವಂತಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಗುವುದು ಎಂದು ಹೇಳಿದರು.
ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಮೇಲ್ವಿಚಾರಕರಿಗೆ ತಿಳಿಸುವುದು.
ವಿದ್ಯಾರ್ಥಿಗಳು ಮನೆಯಿಂದಲೇ ಪ್ರತ್ಯೇಕ ಬ್ಯಾಗಿನಲ್ಲಿ ನೀರಿನ ಬಾಟಲಿ, ಆಹಾರದ ಡಬ್ಬಿ ತರಬೇಕು ಎಂದರು.
ಪರೀಕ್ಷೆಗೆ ಅಗತ್ಯವಾದ ಪ್ರವೇಶಪತ್ರ ಹಾಗೂ ಇತರೆ ಸಲಕರಣೆಗಳನ್ನು ತರುವುದು.
ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಹಂತದಿಂದ ನಿರ್ಗಮಿಸುವ ಹಂತದವರೆಗೆ ದೈಹಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವುದು.
ಇತರೆ ಇಲಾಖೆಗಳ ಸಹಕಾರದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿ ಎಂಬುದೇ ಎಲ್ಲರ ಆಶಯವಾಗಿದೆ ಎಂದರು.