ತುಮಕೂರು: ತಾಲೂಕಿನ ಬುಗುಡನಹಳ್ಳಿ ಕೆರೆಯಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಸಂಸದ ಜಿ.ಎಸ್. ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಬುಗುಡನಹಳ್ಳಿ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ಬುಗುಡನಹಳ್ಳಿ ಕೆರೆಯ ನೀರು ಸಂಗ್ರಹ ಸಾಮರ್ಥ್ಯವು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಳೆಯ ದಾಖಲೆಗಳ ಪ್ರಕಾರ 240 ಎಂಸಿಎಫ್‍ಟಿ ಹಾಗೂ ಈಗಿನ ಸರ್ವೇ ಪ್ರಕಾರ 300 ಎಂಸಿಎಫ್‍ಟಿ, ಪಾಲಿಕೆ ದಾಖಲೆ ಪ್ರಕಾರ 308 ಎಂಸಿಎಫ್‍ಟಿ, ಹೇಮಾವತಿ ನಾಲಾ ಇಲಖೆ ಪ್ರಕಾರ 363 ಎಂಸಿಎಫ್‍ಟಿ ಇರುತ್ತದೆ. ಕೆರೆ ಸಾಮರ್ಥ್ಯದ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಮೂರು ಇಲಾಖೆಗಳು ಒದಗಿಸಿರುವ ಮಾಹಿತಿಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ ಎಂದರು.
ಹೇಮಾವತಿ ನಾಲೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಾಲಿಕೆಗಳ ನಡುವೆ ಸಮನ್ವಯತೆ ಇಲ್ಲದಿರುವುದರಿಂದ ಅಂಕಿ-ಅಂಶಗಳಲ್ಲಿ ಗೊಂದಲಗಳುಂಟಾಗಿವೆ. ಬರುವ ಬೇಸಿಗೆಯಲ್ಲಿ ನೀರು ಖಾಲಿಯಾದ ನಂತರ ಮತ್ತೊಮ್ಮೆ ಮೂರು ಇಲಾಖೆಗಳು ಒಡಗೂಡಿ ಹೊಸದಾಗಿ ಸರ್ವೆ ಕೈಗೊಂಡು ಕೆರೆ ಸಾಮರ್ಥ್ಯದ ಬಗ್ಗೆ ಪರಿಪೂರ್ಣ ದಾಖಲೆ ಒದಗಿಸುವವರೆಗೂ ಹೂಳೆತ್ತುವ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ನಗರದಲ್ಲಿರುವ ಗಂಗಸಂದ್ರ ಕೆರೆ, ಮರಳೂರು ಅಮಾನಿಕೆರೆಗೆ ಹೇಮಾತಿ ನೀರನ್ನು ತುಂಬಿಸಲು ಕಾರ್ಯಯೋಜನೆ ರೂಪಿಸಬೇಕು ಎಂದರಲ್ಲದೆ ಇಲಾಖಾಧಿಕಾರಿಗಳು ಯಾವುದೇ ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ಕೇಳಿದಾಗ ನೀಡುವ ಬೇಜವಾಬ್ದಾರಿ ಉತ್ತರವನ್ನು ನಾನು ಸಹಿಸುವುದಿಲ್ಲ. ಈ ಕಾರಣಕ್ಕಾಗಿಯೇ ಕುಡಿಯುವ ನೀರು ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಮಾಹಿತಿಯನ್ನು ಜಿಐಎಸ್ ಲೇಯರ್‍ವಾರು ಬೇಸ್‍ಮ್ಯಾಪ್-1ಗೆ ಅಪ್‍ಲೋಡ್ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದು ಎಂದು ಸ್ಪಷ್ಟವಾಗಿ ತಿಳಿಸಿದರು.
ನಗರ ವ್ಯಾಪ್ತಿಯ ಮರಳೂರು ಅಮಾನಿಕೆರೆ, ಗಂಗಸಂದ್ರ, ಕುಪ್ಪೂರು, ದೇವರಾಯಪಟ್ಟಣ, ಹೊನ್ನೇನಳ್ಳಿ ಕೆರೆಗಳಿಂದ ನಗರಕ್ಕೆ 24×7 ನೀರು ಸರಬರಾಜು ಮಾಡುವ ಯೋಜನೆಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ ಎಂದರು.
ಅದೇ ರೀತಿ ಬುಗುಡನಹಳ್ಳಿ ಕೆರೆ ಸೇರಿದಂತೆ ನಗರದ ಉಳಿದ ಕೆರೆಗಳ ಸರ್ವೇ ಕೈಗೊಂಡು ಮಾಹಿತಿಯನ್ನು ಬರುವ 15 ದಿನಗಳೊಳಗಾಗಿ ದಾಖಲೆ ಸಹಿತ ತಮಗೆ ಒದಗಿಸಬೇಕು. ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿರುವ ಮೊತ್ತ ಸೇರಿ ಶೇ.50ರಷ್ಟು ಮಾತ್ರ ಹಣ ಪಾವತಿ ಮಾಡಬೇಕು. ಸರ್ವೇ ಕಾರ್ಯ ಪೂರ್ಣಗೊಂಡ ನಂತರ ಬಾಕಿ ಹಣವನ್ನು ಪಾವತಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.