ತೋವಿನಕೆರೆಯಲ್ಲಿ ಔಷಧಿ ಅಂಗಡಿ ಮುಂದೆ ಜನರು ತೋರಿದ ಸಾಮಾಜಿಕ ಅಂತರ ಪ್ರಶಂಸೆಗೆ ಪಾತ್ರವಾಗಿದೆ.
ತುರುವೇಕೆರೆ ಪ್ರಸಾದ್
ಕೊರೋನಾ ನಿಯಂತ್ರಣಕ್ಕಾಗಿ ನಮ್ಮ ಪ್ರಧಾನಮಂತ್ರಿಯವರೇ ಕೈಮುಗಿದು “ದಯವಿಟ್ಟು ಮನೆಯಲ್ಲಿರಿ” ಎಂದು ಕಳಕಳಿಯ ಮನವಿ ಮಾಡಿಕೊಂಡ ಮೇಲೂ ನಾವು ಗುಂಪು ಗುಂಪಾಗಿ ಸೇರುವ, ವಿನಾಕಾರಣ ಹೊರಗೆ ಸುತ್ತುವ ನಮ್ಮ ಚಾಳಿಯನ್ನು ಕಡಿಮೆ ಮಾಡಲಿಲ್ಲ. ದಿನಸಿ ಅಂಗಡಿಯ ಮುಂದೆ, ತರಕಾರಿ ಅಂಗಡಿಗಳ ಮುಂದೆ ಸಂಯಮದಿಂದ ಅಂತರ ಕಾಯ್ದುಕೊಂಡು ನಿಲ್ಲಲಿಲ್ಲ.
ಹಬ್ಬ,ಸಂತೆ, ಜಾತ್ರೆ ಬೇಡವೇ ಬೇಡ ಎಂದು ದೂರ ಉಳಿಯಲಿಲ್ಲ. ಪ್ರತಿದಿನ ನೂರಾರು ಜನರು ನಮ್ಮ ಕಣ್ಮಂದೇ ಹೆಣವಾಗುವುದನ್ನು ಟಿವಿಯಲ್ಲಿ ನೋಡುತ್ತಿದ್ದರೂ ನಾವು ತೀರಾ ನಿರ್ಲಕ್ಷ್ಯ ಹಾಗೂ ಬೇಜವಾಬ್ಧಾರಿಯಿಂದ ವರ್ತಿಸಿಬಿಟ್ಟೆವು.
ನಮ್ಮ ಜವಾಬ್ಧಾರಿಯುತ ಯುವಕರು ರಸ್ತೆಗಳಲ್ಲಿ ಕ್ರಿಕೆಟ್ ಆಡಿದರು. ಅದಕ್ಕೆ ಪೋಲೀಸರು ಬೆದರಿಕೆಯ ಮೂಲಕ, ಲಾಠಿ ಪ್ರಹಾರದ ಮೂಲಕ ಜನರನ್ನು ಚದುರಿಸಿ ಓಡಿಸಬೇಕಾಯಿತು. ಇದು ನಾವು ವಿದ್ಯಾವಂತರೂ, ವಿಚಾರಂತರೂ ಆದರೂ ಸಾಮಾಜಿಕ ಜವಾಬ್ಧಾರಿಯನ್ನು ನಿಭಾಯಿಸುವ ಯಾವ ನೈತಿಕ ಪ್ರಜ್ಞೆ, ವಿವೇಕ ಇಲ್ಲದ ಜನ ಎಂಬುದನ್ನು ನಿರೂಪಿಸಿದೆ.
ಸಾಕ್ರಟೀಸ್ ಹೇಳುವಂತೆ ಶಿಕ್ಷಣ ಜನರನ್ನು ನಾಗರಿಕರನ್ನಾಗಿಸಿ ಸಾರ್ವಜನಿಕ ಜವಾಬ್ಧಾರಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಹಾಗೆಯೇ, ಸಾಮಾಜಿಕ ಜವಾಬ್ಧಾರಿ ಎನ್ನುವುದು ಈ ಭೂಮಿ ಮತ್ತು ಅದರ ಮೇಲಿನ ಜೀವಿಗಳ ಸಾಮುದಾಯಿಕ ಹಿತಾಸಕ್ತಿ ಕಾಯುವ ಒಂದು ವೈಯಕ್ತಿಕ ಹಾಗೂ ಅಮೂಲ್ಯ ಕರ್ತವ್ಯ.
ಹೀಗಾಗಿ ಒಂದು ಸಮುದಾಯ ತನ್ನ ಮುಂದಿನ ಪೀಳಿಗೆಗೆ ಈ ಭೂಮಿ, ಇದರ ನೈಸರ್ಗಿಕ ಸಂಪನ್ಮೂಲ ಜೊತೆಗೆ ತನ್ನ ಮೌಲ್ಯಗಳು, ವಿಚಾರಗಳು, ಕೌಶಲಗಳು, ಸಾಂಸ್ಕøತಿಕ ಚಹರೆಗಳು ಇವನ್ನೆಲ್ಲಾ ವರ್ಗಾಯಿಸಬೇಕು. ಸಾಮಾಜಿಕ ಜವಾಬ್ಧಾರಿ ಇಲ್ಲದ ಸಮಾಜ ಇವಾವ ಮೌಲ್ಯಗಳನ್ನೂ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಿಲ್ಲ.ಏಕೆಂದರೆ ಅಂತಹ ಸಮುದಾಯವೇ ತನ್ನ ಬೇಜವಾಬ್ಧಾರಿ ವರ್ತನೆಯಿಂದ ತನಗೆ ತಾನೇ ಭಸ್ಮಾಸುರನಂತೆ ವರವನ್ನೇ ಶಾಪವಾಗಿಸಿಕೊಂಡು ನಾಶವಾಗಿ ಹೋಗುತ್ತದೆ.
ಹಾಗಾಗಿ ಈ ಸಾಮಾಜಿಕ ಜವಾಬ್ಧಾರಿ ಎನ್ನುವುದು ಅತ್ಯಂತ ಮಹತ್ವದ ಬದ್ಧತೆಯಾಗಿದೆ. ತನ್ನ ಮತ್ತು ಸಮುದಾಯದ ಹಿತರಕ್ಷಣೆ, ಸಾಮಾಜಿಕ ಹಕ್ಕುಗಳು, ಸಾಮಾಜಿಕ ಕರ್ತವ್ಯಗಳು, ಬುದ್ದಿವಂತಿಕೆಯ ನಡೆ, ಜ್ಞಾನ ಮತ್ತು ಅವಕಾಶ ಈ ಎಲ್ಲಾ ಅಂಶಗಳೂ ಸಾಮಾಜಿಕ ಜವಾಬ್ಧಾರಿಯಲ್ಲಿ ಸೇರುತ್ತವೆ.
ಇವೆಲ್ಲವನ್ನೂ ಒಂದು ಸಂಕಷ್ಟ ಸಮಯದಲ್ಲಿ ಮಿಳಿತಗೊಳಿಸಿ ವಿವೇಕದಿಂದ ವರ್ತಿಸಬೇಕಾಗುತ್ತದೆ.
ಆದರೆ ಇಂತಹ ವಿವೇಕಯುತ ಸಾಮಾಜಿಕ ಜವಾಬ್ಧಾರಿಯ ನಡವಳಿಕೆಯನ್ನು ಯಾರು ಯಾರಿಗೆ ಹೇಳಿಕೊಡಬೇಕು ಎಂಬುದೇ ಜಿಜ್ಞಾಸೆಯಾಗಿದೆ.
ವಿದ್ಯಾವಂತರು, ವಿಚಾರವಂತರೆನಿಸಕೊಂಡವರೇ ಪದೇ ಪದೇ ಸಾಮಾಜಿಕ ಜವಾಬ್ಧಾರಿ ಮರೆತು ಅವಿವೇಕದಿಂದ ವರ್ತಿಸುವುದನ್ನು ನೋಡುತ್ತಿದ್ದೇವೆ. ಹಾಗಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ಎಲ್ಲೋ ಗುರುತರವಾದ ಲೋಪವಿದೆ ಎನಿಸುತ್ತಿದೆ.
ನೈತಿಕ ಹಾಗೂ ಸಾಮಾಜಿಕ ಜವಾಬ್ಧಾರಿಯ ಶಿಕ್ಷಣದಿಂದ ನಾವು ವಂಚಿತರಾಗುತ್ತಿದ್ದೇವೆ. ಹೊರದೇಶಗಳಲ್ಲಿರುವಂತೆ ವಿದ್ಯಾರ್ಥಿದೆಸೆಯಲ್ಲೇ ನಮಗೆ ಇಂತಹ ಒಂದು ಶಿಕ್ಷಣದ ಅಗತ್ಯವಿದೆ.
ಸಾಂಪ್ರದಾಯಿಕ ಶಿಕ್ಷಣದ ಮೂಲಕ ಕೌಶಲ ಹಾಗೂ ಜ್ಞಾನಾರ್ಜನೆಯಾದರೆ ನೈತಿಕ ಶಿಕ್ಷಣದ ಮೂಲಕ ನಾವು ಈ ಸಾಮಾಜಿಕ ಜವಾಬ್ಧಾರಿಯ ಅರಿವು ಮತ್ತು ಜಾಗೃತಿ ಮೂಡಿಸಬಹುದಾಗಿದೆ.
ವಿಪರ್ಯಾಸವೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವೇ ಇಲ್ಲ. ಸಾಮಾಜಿಕ ಜವಾಬ್ಧಾರಿಯ ಅರಿವು ಮೂಡಿಸುವ ಶಿಕ್ಷಣವೂ ಇಲ್ಲ, ಅದಕ್ಕೆ ಸಮಯಾವಕಾಶವೂ ಇಲ್ಲ. ನಮ್ಮ ಶಿಕ್ಷಣ ಸಂಸ್ಥೆಗಳು ಕೇವಲ ಕೌಶಲ ಮತ್ತು ಉದ್ಯೋಗದತ್ತ ಧಾವಂತದಲ್ಲಿ ಓಡುವ ಕಣ್ಣುಕಟ್ಟಿದ ಕುದುರೆಗಳಾಗಿವೆ.ವಾಸ್ತವದಲ್ಲಿ ನಮ್ಮ ಧರ್ಮ, ಸಂಪ್ರದಾಯಗಳೇ ನಮಗೆ ಸಾಕಷ್ಟು ಸಾಮಾಜಿಕ ಜವಾಬ್ಧಾರಿಯ ತಿಳುವಳಿಕೆ ನೀಡುವ ಮೂಲ ಆಕರಗಳಾಗಿವೆ.
ನಮ್ಮ ವೇದ, ಪುರಾಣ ಶಾಸ್ತ್ರಗಳಲ್ಲಿ ಉದಾತ್ತ ಚಿಂತನೆ,ಲೋಕೋತ್ತರವಾದ ಆದರ್ಶನಡೆಗಳು ಮತ್ತು ಸಮಷ್ಟಿ ಹಿತದ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ನನ್ನನ್ನೂ ಒಳಗೊಂಡಂತೆ ಅಥವಾ ನನ್ನನ್ನು ಹೊರತುಪಡಿಸಿ ಇಡೀ ಜಗತ್ತು ಕ್ಷೇಮವಾಗಿರಬೇಕು,ಸುಸ್ಥಿರವಾಗಿರಬೇಕೆಂಬ ತತ್ವವೇ ವಿಶ್ವಮಾನವ ತತ್ವ.
ಇವೆಲ್ಲಾ ನಮಗೆ ಹೊಸದೇನಲ್ಲ.ಆದರೆ ಇಂತಹ ಸಾಮಾಜಿಕ ಜವಾಬ್ಧಾರಿಯ ಜ್ಞಾನ ನಮ್ಮ ಇಂದಿನ ಪೀಳಿಗೆಯ ಮಕ್ಕಳಿಗೆ ವರ್ಗಾವಣೆಯಾಗುತ್ತಿಲ್ಲ. ಸಮಷ್ಠಿ ಹಿತ, ಸರಳ ಜೀವನ, ಉದಾತ್ತ ಚಿಂತನೆಯ ತತ್ವ, ಮೌಲ್ಯಗಳು ಇಂದು ಸ್ವಾರ್ಥ, ಐಶರಾಮಿ ಬದುಕು ಹಾಗೂ ದಾಷ್ಟ್ಯ ವರ್ತನೆಗೆ ಪಲ್ಲಟಗೊಂಡಿದೆ.
ಮಕ್ಕಳಿಗೆ ತಾಯಿಯೇ ಮೊದಲ ಗುರು, ತಂದೆಯೇ ಎರಡನೇ ಗುರು- ಈ ಇಬ್ಬರೂ ಗುರುಗಳು ತಮ್ಮ ಬದುಕಿನ ಜಂಜಾಟದಲ್ಲಿ ಬಾಲ್ಯದಲ್ಲಿ ಮಕ್ಕಳಿಗೆ ನೀಡಬೇಕಾದ ನೈತಿಕ ಶಿಕ್ಷಣ, ಸಾಮಾಜಿಕ ಜವಾಬ್ಧಾರಿಯ ಶಿಕ್ಷಣದಿಂದ ಮಕ್ಕಳನ್ನು ವಂಚಿಸುತ್ತಿದ್ದಾರೆ.
ಇನ್ನು ಮೂರನೆಯ ಹಾಗೂ ಮಹತ್ವದ ಗುರುವೆಂದರೆ ಶಾಲೆಯಲ್ಲಿನ ಶಿಕ್ಷಕರು. ಈ ಶಿಕ್ಷಕರೇ ತಂದೆ, ತಾಯಿಗಳ ಜವಾಬ್ಧಾರಿಯನ್ನೂ ಹೊತ್ತು ಅಕಾಡೆಮಿಕ್ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ಹಾಗೂ ಸಾಮಾಜಿಕ ಜವಾಬ್ಧಾರಿಯ ಶಿಕ್ಷಣವನ್ನೂ ಕೊಡಬೇಕಿದೆ.
ದುರದೃಷ್ಟವೆಂದರೆ ಬಹುತೇಕ ಶಿಕ್ಷಕರಿಗೇ ಈ ಎರಡೂ ಶಿಕ್ಷಣದ ಪರಿಕಲ್ಪನೆ ಇಲ್ಲದಿರುವುದು. ಬಹುತೇಕ ಶಿಕ್ಷಕರು ವಿಷಯಗಳನ್ನು ಉರು ಹೊಡೆಸಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದಷ್ಟೇ ತಮ್ಮ ಕೆಲಸ ಎಂದು ಭಾವಿಸಿದ್ದಾರೆ. ಅವರ ಸಾಮಾಜಿಕ ಕಳಕಳಿ ಮತ್ತು ನಾಗರಿಕತೆ ಪ್ರಜ್ಞೆ ಕೇವಲ ಗಣಪತಿ ಪೂಜೆ, ಸರಸ್ವತಿ ಪೂಜೆ, ರಾಷ್ಟ್ರೀಯ ಹಬ್ಬಗಳಲ್ಲಿನ ಶಾಲೆಯ ಎರಡು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿರುತ್ತದೆ.
ಹೋಂ ವರ್ಕ್ ಅಸೈನ್‍ಮೆಂಟ್‍ಗಳನ್ನು ನೀಡುವುದು, ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಬಿಟ್ಟು ಇವರು ಸ್ವಯಂ ಪ್ರೇರಣೆಯಿಂದ ವಿದ್ಯಾರ್ಥಿಗಳ ಸಾಮಥ್ರ್ಯದ ಆಂತರಿಕ ಮೌಲ್ಯಮಾಪನ ಮಾಡುವುದೇ ಇಲ್ಲ. ಶಿಕ್ಷಕರು ಪ್ರಕೃತಿ ಪರಿಸರದೊಂದಿಗಿನ ಮಾನವನ ಅವಲಂಬನೆ, ನೈಸರ್ಗಿಕ ಸಂಪನ್ಮೂಲಗಳ ಕನಿಷ್ಠ ಬಳಕೆ, ಪರಿಸರ ಸಂರಕ್ಷಣೆ, ವಿವಿಧ ಪ್ರಾಕೃತಿಕ ದುರಂತಗಳ ವಿರುದ್ಧ ಹೋರಾಡುವುದು ಹೇಗೆ ?
ಪರಿಸರವನ್ನು ಸ್ಚಚ್ಛವಾಗಿಟ್ಟುಕೊಳ್ಳುವುದು ಹೇಗೆ? ಇಂತಹ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವುದೇ ಇಲ್ಲ. ಶಿಕ್ಷಕರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳ ಮೇಲೆ ಹೇರದೆ ಅವರಿಗೆ ನಿಷ್ಪಕ್ಷಪಾತವಾಗಿ ಬೋಧನೆ ಮಾಡಬೇಕು.
ರಾಜಕೀಯ ಮತ್ತು ಧರ್ಮಗಳಿಗೆ ಸಂಬಂಧಿಸಿದಂತೆ ಅವಶ್ಯಕತೆಗೆ ತಕ್ಕಷ್ಟೇ ಸಾಮಾನ್ಯ ಅಂಶಗಳನ್ನು ಮಾತ್ರ ಚರ್ಚಿಸಬೇಕು. ತನ್ನ ವೈಯಕ್ತಿಕ ನಂಬಿಕೆಗಳಿಗಾಗಿ ಪಠ್ಯವನ್ನು, ಬೋಧನೆಯನ್ನು ತಿರುಚಿ ವಿದ್ಯಾರ್ಥಿಗಳ ಮೇಲೆ ಹೇರಬಾರದು ಎಂಬುದು ಒಂದು ಆದರ್ಶ ಮತ್ತು ಎಲ್ಲರೂ ಒಪ್ಪುವ ಸಿದ್ದಾಂತ. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮತ್ತು ಸ್ವತಂತ್ರವಾಗಿ ತಮಗೆ ಬೇಕಾದ ಮಾರ್ಗ ಹಾಗೂ ತತ್ವಗಳನ್ನು ಅಳವಡಿಸಿಕೊಳ್ಳುವ ಮುಕ್ತ ಅವಕಾಶಗಳನ್ನು ಶಿಕ್ಷಕರು ನೀಡಬೇಕು.ಆದರೆ ಈಗ ಆಗುತ್ತಿರುವುದೇನು? ಜೆಎನ್‍ಯು ಮಾದರಿಯ ಹಲವು ವಿಶ್ವವಿದ್ಯಾಲಯಗಳಲ್ಲಿ ಇದಕ್ಕೆ ವಿರುದ್ಧ ಪ್ರಕ್ರಿಯೆ ನಡೆಯುತ್ತದೆ. ಅಧ್ಯಾಪಕರು ಬೋಧನೆಯ ನೆಪದಲ್ಲಿ ವಿಚಾರವಂತಿಕೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಮೇಲೆ ತಮ್ಮ ಸಿದ್ಧಾಂತಗಳನ್ನು ಹೇರುತ್ತಿದ್ದಾರೆ.
ನೈತಿಕತೆಯ ಮಾರ್ಗಗಳಿಗೆಲ್ಲಾ ಕೇಸರೀಕರಣ ಎಂದು ಲೇಬಲ್ ಅಂಟಿಸಿ ವಿದ್ಯಾರ್ಥಿಗಳ ದಿಕ್ಕುತಪ್ಪಿಸಲಾಗುತ್ತಿದೆ. ನೈತಿಕ ಶಿಕ್ಷಣವೇ ಇಲ್ಲದೆಡೆ ಸಾಮಾಜಿಕ ಜವಾಬ್ಧಾರಿಯನ್ನು ನಿರೀಕ್ಷಿಸುವುದಾದರೂ ಹೇಗೆ ? ಅದನ್ನು ರೂಢಿಸುವುದಾದರೂ ಹೇಗೆ ಎಂಬುದೇ ಸವಾಲಿನ ವಿಷಯವಾಗಿದೆ.
ಮಕ್ಕಳಿಗೆ ಮನೆಯಿಂದಲೇ ಈ ಸಾಮಾಜಿಕ ಜವಾಬ್ಧಾರಿಯ ಅರಿವು ಮೂಡಿಸುವ ಪ್ರಯತ್ನ ಪ್ರಾರಂಭವಾಗಬೇಕು. ತಂದೆ ತಾಯಿಯರೂ ಕೂಡ ಈ ಜವಾಬ್ಧಾರಿಯನ್ನು ಕಠಿಣ ಬದ್ಧತೆಯಾಗಿ ಸ್ವೀಕರಿಸಬೇಕು. ತನ್ನನ್ನು ತಾನು ಮೊದಲು ಸ್ವಚ್ಚವಾಗಿಟ್ಟುಕೊಳ್ಳುವ ಪಾಠ ಶುರುವಾಗಬೇಕು.
ಎಲ್ಲಂದರಲ್ಲಿ ಗುಟ್ಕಾ ತಿಂದು ಉಗುಳುವುದು, ಮಲಮೂತ್ರ ವಿಸರ್ಜಿಸುವುದು, ಪರಿಸರ ಹಾಳುಗೆಡವುವುದು ಅನುವಂಶೀಯ ಎನ್ನುವಷ್ಟರ ಮಟ್ಟಿಗೆ ನಮ್ಮಲ್ಲಿ ಹಾಸು ಹೊಕ್ಕಾಗಿದೆ. ಇದರಿಂದ ಬಿಡುಗಡೆ ಸಿಗಬೇಕು. ಪ್ರಾಥಮಿಕ ಹಂತದಲ್ಲೇ ಪಠ್ಯದಲ್ಲಿ ನೈತಿಕ ಹಾಗೂ ಸಮುದಾಯದ ಜವಾಬ್ಧಾರಿಯ ಕುರಿತ ಶಿಕ್ಷಣ ನೀಡಬೇಕು. ಬೇರೆ ವಿಷಯಗಳಿಗಿರುವಂತೆಯೇ ಅವಕ್ಕೂ ಪಠ್ಯ ಪುಸ್ತಕ ಇರಬೇಕು.
ಪ್ರವಾಹ, ಕಾಳ್ಗಿಚ್ಚು, ಸಾಂಕ್ರಾಮಿಕ ರೋಗ ಭೀತಿಯ ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಅನುಸರಿಸಬೇಕಾದ ಸಾಮಾಜಿಕ ಜವಾಬ್ಧಾರಿಯ ಕುರಿತು ವಿಶೇಷ ತರಬೇತಿ ನೀಡಬೇಕು.ಸಾಮಾಜಿಕ ಜವಾಬ್ಧಾರಿ ಭಾರತೀಯರ ಅನುವಂಶೀಯ ಮಾದರಿ ಎಂದು ಹೆಮ್ಮೆ ಪಡುವಂತಾಗಬೇಕು.
ಮನುಷ್ಯನ ಅಸ್ತಿತ್ವ ಕರುಣೆ ಮತ್ತು ಕುತೂಹಲದ ಮೇಲೆ ನಿಂತಿದೆ. ಇವರೆಡೂ ಮನುಷ್ಯನನ್ನು ಜ್ಞಾನದೆಡೆ ಕೊಂಡೊಯ್ಯುತ್ತವೆ. ಕೇವಲ ಕರುಣೆ ಇಲ್ಲದ ಕುತೂಹಲ ಮತ್ತು ಜ್ಞಾನದ ಮೇಲೆ ನಿಂತ ಅಸ್ತಿತ್ವ ಅಮಾನವೀಯವಾದುದು, ಹಾಗೇ ಕುತೂಹಲ ಮತ್ತು ಜ್ಞಾನ ಇಲ್ಲದ ಕರುಣೆ ನಿಷ್ಪ್ರಯೋಜಕ ಎಂದು ಅಣುಭೌತವಿಜ್ಞಾನಿ ವಿಕ್ಟರ್ ವೆಯಿಸ್‍ಕಾಫ್ ಹೇಳುತ್ತಾರೆ.
ಸಮುದಾಯದ ಅಥವಾ ಸಾಮಾಜಿಕ ಜವಾಬ್ಧಾರಿಗೆ ಹಲವು ಸಂದರ್ಭಗಳಲ್ಲಿ ಕರುಣೆ ಅಥವಾ ಅನುಕಂಪವೇ ಮೂಲದ್ಯವ್ಯವಾಗಿರುತ್ತದೆ. ಕೆಟ್ಟ ಕುತೂಹಲ ಹಾಗೂ ಅಜ್ಞಾನ ಪ್ರದರ್ಶನದ ಸಂದರ್ಭಗಳಲ್ಲಿ ಅನುಕಂಪವನ್ನು ಅಂತರಂಗದ ಭಾವವಾಗಿಟ್ಟುಕೊಂಡೇ ನಿಷ್ಠುರತೆ ಪ್ರದರ್ಶಿಸಬೇಕಾಗುತ್ತದೆ. ಅದನ್ನೇ ಈಗ ನಮ್ಮ ಆಡಳಿತ ಹಾಗೂ ಪೋಲೀಸರು ಲಾಠಿ ಬೀಸಿ ಮಾಡುತ್ತಿರುವುದು.
ಇದು ಬೇಸರದ ಸಂಗತಿಯಾದರೂ ಅನಿವಾರ್ಯವಾಗಿದೆ. ಸಾಮಾಜಿಕ ಜವಾಬ್ಧಾರಿ ಮರೆತು ಆ ಮಟ್ಟಕ್ಕಿಳಿದ ನಾವೂ ನಮ್ಮ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕಿದೆ.
ಲೇಖಕರು ಹಿರಿಯ ಪತ್ರಕರ್ತರು ಹಾಗೂ ಸಾಹಿತಿ. ಇಲ್ಲಿಯ ಅಭಿಪ್ರಾಯಗಳೆಲ್ಲವೂ ಲೇಖಕರವು.