ಮಹಾರಾಷ್ಟ್ರ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನಿಸಿರುವ ಪತ್ರ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ನೀಡಿರುವ ಶಾಸಕರ ಬೆಂಬಲ ಪತ್ರಗಳನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಾಲಿಸಿಟರ್ ಜನರಲ್ ತುಷಾರ ಮೆಹ್ವಾ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಶಿವಸೇನೆ, ಎನ್.ಸಿ.ಪಿ ಮತ್ತು ಶಿವಸೇನೆ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ನಡೆಸಿಸ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಸೋಮವಾರ 10.30ಕ್ಕೆ ಸರ್ಕಾರ ರಚನೆಗೆ ಆಹ್ವಾನಿಸಿರುವ ರಾಜ್ಯಪಾಲರ ಪತ್ರ ಮತ್ತು ಬೆಂಬಲ ಪತ್ರ ಎರಡನ್ನೂ ಹಾಜರುಪಡಿಸಿ ಎಂದು ಆದೇಶ ನೀಡಿದೆ.
ಇದೇ ವೇಳೆ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಸುಪ್ರೀಂಕೋರ್ಟ್ ನೋಟೀಸ್ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎನ್.ಸಿ.ಪಿ. ಮುಖಂಡ ನವಾಜ್ ಮಲ್ಲಿಕ್, ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಪಕ್ಷದ ಶಾಸಕರು ವಾಪಸ್ ಬಂದಿದ್ದಾರೆ. ಶರದ್ ಪವಾರ್ ಶಾಸಕರನ್ನು ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅಲ್ಪಮತದ ಸರ್ಕಾರವೆಂಬ ವಾಸ್ತವನ್ನು ಅರ್ಥ ಮಾಡಿಕೊಳ್ಳಬೇಕು. ಗೌರವಯುತವಾಗಿ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ನಾಪತ್ತೆಯಾಗಿದ್ದ ಶಾಸಕ ದೌಲತ್ ದರೋಡ ಪತ್ತಯಾಗಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ. ಎನ್.ಸಿ.ಪಿ ;ಪಕ್ಷದ ಗಡಿಯಾರದ ಗುರುತಿನ ಮೇಲೆ ಗೆದ್ದು ಬಂದು ಶಾಸಕನಾಗಿದ್ದೇನೆ. ಪಕ್ಷವನ್ನು ಬದಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಏನೇ ನಿರ್ಧಾರ ತೆಗೆದುಕೊಂಡರೂ ಅವರ ಜೊತೆ ಇರುತ್ತೇನೆ. ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.