ತುಮಕೂರು:ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯದವರ ಸ್ಮಶಾನ ಭೂಮಿ ಗುರುತಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಇಂದು ನಡೆದ ಪರಿಶಿಷ್ಟರ ಕುಂದುಕೊರತೆ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಭರವಸೆ ನೀಡಿದರು.
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿರುವ ಪರಿಶಿಷ್ಟ ಜಾತಿ/ವರ್ಗದ ಜನಾಂದವರಿಗೆ ಸ್ಮಶಾನ ಭೂಮಿ ಒದಗಿಸುವುದು ಮೊದಲ ಆದ್ಯತೆ. ಸುಮಾರು 75 ಗ್ರಾಮಗಳಲ್ಲಿ ಸ್ಮಶಾನ ಭೂಮಿಗಳಿಲ್ಲ. ಭೂ-ಲಭ್ಯತೆ ಪಟ್ಟಿ ಆಧಾರದ ಮೇಲೆ ಭೂಮಿ ನೀಡಲಾಗುವುದು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗೀ ಜಮೀನನ್ನು ಖರೀದಿ ಮಾಡಿ ಜಾಗ ನೀಡಲಾಗುವುದು.
ಗೂಳೂರು, ಹೆಗ್ಗೆರೆ, ಹರಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಿಡುಗಡೆಯಾಗುವ ಅನುದಾನ ಪರಿಶಿಷ್ಟ ಜಾತಿ/ವರ್ಗಗಳ ಕಾಮಗಾರಿ ಯೋಜನೆಗೆ ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಆರೋಪಕ್ಕೆ ತನಿಖೆ ನಡೆಸುವ ಭರವಸೆ ನೀಡಿದರು.
ಪಾವಗಡ ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ಮಶಾನದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ಕೂಡಲೇ ಆಯಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರ್ಗಳು ಸ್ಥಳ ಹಾಗೂ ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.
ಮಧುಗಿರಿ ನಗರದಲ್ಲಿ ನಗರಸಭೆಯ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದಿಲ್ಲ.
ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ಸಭೆಯಲ್ಲಿಯೇ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿ, ದಲಿತ ಸಮುದಾಯಕ್ಕೆಂದು ಮೀಸಲಿರುವ ಅಂಗಡಿಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ಮಶಾನ ಅಭಿವೃದ್ಧಿಗಾಗಿ 200 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಸ್ಮಶಾನ ಅಭಿವೃದ್ಧಿಯಾಗದೇ ಇರುವ ಗ್ರಾಮಗಳಲ್ಲಿ ಕೂಡಲೇ ಕಾಮಗಾರಿ ಆರಂಭ ಮಾಡುವಂತೆ ಸೂಚಿಸಿದರು.
ಗುಬ್ಬಿ ತಾಲೂಕಿನ ಸಿ.ಎಸ್ ಪುರ, ಕಲ್ಲೂರು ಹಾಗೂ ನಂದಿಹಳ್ಳಿ ಗ್ರಾಮದಲ್ಲಿ ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಉಪವಿಭಾಗಾಧಿಕಾರಿಗಳಾದ ಶಿವಕುಮಾರ್, ಕೆ.ಆರ್.ನಂದಿನಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮ್ನಾಥ್ ಸೇರಿದಂತೆ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಹಾಜರಿದ್ದರು.