Friday, November 22, 2024
Google search engine
Homeತುಮಕೂರು ಲೈವ್'ಸ್ವರ್ಗ'ದೊಳಗಿತ್ತು ನರಕ..

‘ಸ್ವರ್ಗ’ದೊಳಗಿತ್ತು ನರಕ..

ಜಿ.ಎನ್.ಮೋಹನ್


‘ಸ್ವರ್ಗಕ್ಕೆ ಬನ್ನಿ’-ಅಂತ ಡಾ ವೈ ಎಸ್ ಮೋಹನ್ ಕುಮಾರ್ ಕರೆ ಮಾಡಿದಾಗ ನನಗೆ ಆಶ್ಚರ್ಯವಾಗಿತ್ತು.

ಕಾಸರಗೋಡಿನ ಪಾತಾಳ ಎನ್ನಬಹುದಾದ ಊರೊಂದರಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಮೋಹನ್ ಕುಮಾರ್ ನನಗಾದ ಆಶ್ಚರ್ಯವನ್ನು ಕಂಡುಕೊಂಡರೇನೋ..?.

‘ಸ್ವರ್ಗ’ ಎನ್ನುವುದು ನಮ್ಮ ಊರಿನ ಹೆಸರು. ಖಂಡಿತಾ ಬನ್ನಿ ಎಂದರು.

ನಾನೂ ಹಾಗೂ ಕ್ಯಾಮೆರಾಮನ್ ಅಬ್ದುಲ್ ಹಮೀದ್, ಶ್ರೀಪಡ್ರೆಯವರೊಂದಿಗೆ ಕಾಡು ಕಣಿವೆ ಬೆಟ್ಟ ಗುಡ್ಡ ಏರುತ್ತಾ, ಇಳಿಯುತ್ತಾ ತಲುಪಿದ್ದು ‘ಸ್ವರ್ಗ’ವನ್ನು.

ಅದು ನಿಜಕ್ಕೂಸ್ವರ್ಗ.

ಎಲ್ಲೆಡೆ ಗೇರು ಹಣ್ಣಿನ ಮರಗಳು. ಇನ್ನೇನು ಆಕಾಶಕ್ಕೆ ಮುತ್ತಿಟ್ಟೆ ಎನ್ನುವಷ್ಟು ಎತ್ತರಕ್ಕೆ ಎದ್ದು ನಿಂತ ಬೆಟ್ಟಗಳು, ಇನ್ನೊಂದೆಡೆ ಪ್ರಪಾತ. ಅಲ್ಲಿಂದ ಎದ್ದೇಳುತ್ತಿರುವ ಹೊಗೆಯ ಮೋಡಗಳು ಅಲ್ಲೊಂದು ಊರಿದೆ ಎಂಬ ಕುರುಹನ್ನು ಬಿಟ್ಟುಕೊಡುತ್ತಿತ್ತು.

ಡಾ ಮೋಹನ್ ಕುಮಾರ್ ಕೈ ತೋರಿಸಿದ ಕಡೆಯೆಲ್ಲಾ ಹೊರಳುತ್ತಾ ನಾವು ತಲುಪಿಕೊಂಡಿದ್ದು ದಟ್ಟ ಗೇರು ತೋಟಗಳ ಊರನ್ನು.

ಆಗ ಬಿಚ್ಚಿಕೊಳ್ಳಲು ಆರಂಭಿಸಿದ್ದು ನರಕ.

ಗೇರು ತೋಟದ ನಡುವೆ ಇದ್ದ ಒಂದೊಂದೇ ಮನೆಯ ಬಾಗಿಲು ಬಡಿಯುತ್ತಾ ಹೋದಂತೆ ಇದು ‘ಹಸಿರಿಲ್ಲದ, ಉಸಿರಿಲ್ಲದ, ಹೆಸರಿಲ್ಲದ ನರಕ..’ ಎನ್ನುವಂತೆ ಆಯಿತು.

ನಡೆಯಲಾಗದ, ತೆವಳಲೂ ಆಗದ ಮಕ್ಕಳು ಶೂನ್ಯ ದೃಷ್ಟಿಯಿಂದ ನಮ್ಮೆಡೆಗೆ ನೋಡುತ್ತಿದ್ದರು.

ಇಪ್ಪತ್ತು ದಾಟಿದವರೂ ಸಹಾ ಇನ್ನೂ ಹಸುಗೂಸುಗಳಂತೆ ಅಮ್ಮನನ್ನು ಆತುಕೊಂಡಿದ್ದರು.

ಮುಖದ ಆಕಾರವೇ ಬದಲಾದ ಮಕ್ಕಳು ಉಸಿರು ಎಳೆದುಕೊಳ್ಳಲೂ ಸಂಕಟಪಡುತ್ತಿದ್ದರು.

ಶಾಲೆಯ ಬಾಗಿಲು ಮುಟ್ಟಲಾಗದ ಮಕ್ಕಳು ಅಸಹಾಯಕರಾಗಿ ನಮ್ಮನ್ನು ನೋಡುತ್ತಿದ್ದರೆ, ಶಾಲೆಯತ್ತ ಹೆಜ್ಜೆ ಹಾಕುವ ಅದೃಷ್ಟ ಪಡೆದ ಎಷ್ಟೋ ಮಕ್ಕಳ ಮೈಯಲ್ಲಿ ಬೊಬ್ಬೆಗಳಿದ್ದವು. ಚರ್ಮಸುಟ್ಟು ಮುದುಕರಂತೆ ಕಾಣುತ್ತಿದ್ದರು. ಕೈ, ಕಾಲಲ್ಲಿನ ಬೆರಳುಗಳು ವಿಕಾರ ರೂಪು ಪಡೆದಿದ್ದವು.

ಅದು 2001. ಪುಟ್ಟ ಗ್ರಾಮದಲ್ಲಿ ವೈದ್ಯ ಮಾಡುತ್ತಿದ್ದ ಮೋಹನ್ ಕುಮಾರ್ ಅವರಿಗೆ ಇದ್ದಕ್ಕಿದ್ದಂತೆ ಯಾಕೋ ಎಲ್ಲವೂ ಸರಿ ಇಲ್ಲ ಎನಿಸಲು ಆರಂಭಿಸಿತು.

ಅವರ ಬಳಿ ಬರುತ್ತಿದ್ದ ರೋಗಿಗಳ ಸಂಖ್ಯೆ ಧಿಡೀರನೆ ಹೆಚ್ಚಾಗಿತ್ತು, ಮಾನಸಿಕ ಅಸ್ವಸ್ಥತೆ, ಅಂಗವಿಕಲತೆ, ಗರ್ಭ ಧರಿಸದಿರುವಿಕೆ ಹೀಗೆ ರೋಗಗಳ ಸರಮಾಲೆಯೇ ಕಾಣಿಸಿಕೊಳ್ಳತೊಡಗಿತ್ತು.

ಮೋಹನ್ ಕುಮಾರ್ ಸುಮ್ಮನೆ ಕೂರಲಿಲ್ಲ. ವೈದ್ಯಕೀಯ ಪ್ರಕರಣಗಳನ್ನು ತಿರುವಿ ಹಾಕತೊಡಗಿದರು. ಕ್ರಿಮಿನಾಶಕದ ಪರಿಣಾಮವಾಗಿ ಬೇರೆಡೆ ಆಗಿರುವ ಪರಿಣಾಮಕ್ಕೂ ಇಲ್ಲಿನ ರೋಗದ ರೀತಿಗೂ ತಾಳೆಯಾಯಿತು.

ಈ ರೋಗದ ಹಿಂದೆ ಇರುವುದು ಎಂಡೋಸಲ್ಫಾನ್ ಎನ್ನುವುದು ಗೊತ್ತಾಗಿ ಹೋಯಿತು.

ಪರಿಸರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಶ್ರೀಪಡ್ರೆ ಅವರೊಂದಿಗೆ ವಿಷಯ ಹಂಚಿಕೊಂಡರು.

ಎಂಡೋಸಲ್ಫಾನ್ ಕೇವಲ ಕ್ರಿಮಿ ಕೀಟಗಳನ್ನಲ್ಲ, ಜನರನ್ನೂ ಹೊಸಗಿ ಹಾಕುವ ರಕ್ಕಸ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಕೆಲಸ ಆರಂಭವಾಯಿತು.

ಅದಾಗಿ ಇನ್ನೂ ಸ್ವಲ್ಪ ದಿನವೂ ಆಗಿರಲಿಲ್ಲ. ಮತ್ತೆ ಶ್ರೀಪಡ್ರೆ ಫೋನಾಯಿಸಿದರು.

ಎಂಡೋಸಲ್ಫಾನ್ ಕಾಸರಗೋಡು ಗಡಿಯನ್ನೂ ದಾಟಿ ಕರ್ನಾಟಕದಲ್ಲೂ ರುದ್ರ ನರ್ತನ ಆರಂಭಿಸಿಬಿಟ್ಟಿತ್ತು.

ನಿಡ್ಲೆ, ಕೊಕ್ಕಡ, ಪಟ್ರಮೆಯಲ್ಲಿ ಕಂಡ ದೃಶ್ಯ ಕರುಳು ಕತ್ತರಿಸುವಂತಿತ್ತು.

ಅಲ್ಲಿನ ಅಮ್ಮಂದಿರ ಕಣ್ಣಲ್ಲಿ ಇದ್ದ ಮೂಕವೇದನೆ, ಮಕ್ಕಳು ಅನುಭವಿಸುತ್ತಿದ್ದ ಯಾತನೆ ಎರಡೂ ತತ್ತರಿಸುವಂತೆ ಮಾಡಿತ್ತು. ಕೇರಳದಲ್ಲಿ ಮಾತ್ರ ಎಂದುಕೊಂಡಿದ್ದ ಎಂಡೋಸಲ್ಫಾನ್ ಉರಿ ಮಾರಿ ಪುತ್ತೂರು, ಸುಳ್ಯ, ಬಂಟ್ವಾಳ, ಭಟ್ಕಳ ಎಲ್ಲೆಡೆ ಕಾಣಿಸಿಕೊಂಡಿತು.

ಅದಾಗಿ 11 ವರ್ಷಗಳು ಕಳೆದುಹೋಗಿದೆ. ಈ ಮಧ್ಯೆ ಸುಮಾರು ೧೬೦ ಸತ್ಯಶೋಧಕ ವರದಿಗಳು ಬಂದಿವೆ. ಸಾವಿರಾರು ಪ್ರತಿಭಟನೆಗಳು ಜರುಗಿವೆ. ಹಲವರು ಸಾವನ್ನಪ್ಪಿದ್ದಾರೆ. ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಅದರ ಹೊಡೆತದಿಂದ ನರಳುತ್ತಿದ್ದಾರೆ.

ಆದರೂ ಎಂಡೋಸಲ್ಫಾನ್ ರುದ್ರನರ್ತನ ಮಾತ್ರ ನಿಂತಿಲ್ಲ.

‘ ನಮಗೆ ಪರಿಹಾರ ನೀಡಿ ಇಲ್ಲವೇ ದಯಾ ಮರಣ ಕೊಟ್ಟುಬಿಡಿ’ ಎಂದು ಸಂತ್ರಸ್ತರು ಬರೆದ ಸಾವಿರಾರು ಅಂಚೆ ಕಾರ್ಡುಗಳು ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಗಳನ್ನು ಹುಡುಕುತ್ತಲೇ ಇವೆ.

‘ಡರ್ಟಿ ಡಜನ್’ಎಂದು ಜಗತ್ತಿನ ಎಲ್ಲೆಡೆ ಮೂದಲಿಕೆಗೆ ಒಳಗಾದ ವಿಷ ಕುಟುಂಬದ ಸದಸ್ಯ ಈ ಎಂಡೋಸಲ್ಫಾನ್.

ನಮಗೆ ಗೊತ್ತಿರುವುದು ಎಂಡೋಸಲ್ಫಾನ್ ಎಂಬ ಹೆಸರು ಮಾತ್ರ. ಆದರೆ ಈ ಕ್ರಿಮಿನಾಶಕಕ್ಕೆ ನೂರೆಂಟು ಹೆಸರಿದೆ. 1950ರ ದಶಕದ ಆರಂಭದಲ್ಲಿ ಅಮೇರಿಕಾ ಹುಟ್ಟುಹಾಕಿದ ಈ ಕ್ರಿಮಿನಾಶಕವನ್ನು 1955ರಲ್ಲಿ ಬೇಯರ್ ಕ್ರಾಪ್ ಸೈನ್ಸ್ ಕಂಪನಿ ಕೈಗೆತ್ತಿಕೊಂಡದ್ದೇ ತಡ ಜಗತ್ತಿನ ಎಲ್ಲೆಡೆ ವ್ಯಾಪಿಸಿತು. ಕೃಷಿಕರು ಎಲ್ಲೆಲ್ಲಿದ್ದಾರೋ ಅಲ್ಲೆಲ್ಲಾ ಎಂಡೋಸಲ್ಫಾನ್ ಅತಿ ಬೇಗ ಪ್ರಚಾರಕ್ಕೆ ಬಂತು.

ಇದಕ್ಕೆ ಕಾರಣವೂ ಇದೆ. ಯಾಕೆಂದರೆ ಎಂಡೋಸಲ್ಫಾನ್ ಅತಿ ಸುಲಭ ಬೆಲೆಯಲ್ಲಿ ಕೈಗೆಟುಕುತ್ತದೆ. ಆದರೆ ಯಾವಾಗ ಕಾಸರಗೋಡಿನ ‘ಸ್ವರ್ಗ’ ತನ್ನೊಳಗಿನ ನರಕವನ್ನು ಬಿಚ್ಚಿಟ್ಟಿತೋ ಅಲ್ಲಿಂದ ಎಂಡೋಸಲ್ಫಾನ್ ನ್ನು ಕಟಕಟೆಯಲ್ಲಿ ನಿಲ್ಲಿಸುವ ಕೆಲಸ ಅಲ್ಲಿಂದ ಆರಂಭವಾಯಿತು.

ಗೇರು ತೋಟವನ್ನು ಕಾಡುತ್ತಿದ್ದ ಸೊಳ್ಳೆಗಳನ್ನು ಇಲ್ಲವಾಗಿಸಲು ಬಂದಿಳಿದದ್ದು ಎಂಡೋಸಲ್ಫಾನ್.

ಎಂಡೋಸಲ್ಫಾನ್ ಸರ್ವಂತರ್ಯಾಮಿಯಂತೆ ತೂಗಾಡುವ ಗೇರು ಹಣ್ಣಿನಿಂದ ಹಿಡಿದು ಊಟದ ಬಟ್ಟಲಿನವರೆಗೆ ಬಂದು ನಿಂತಿತು. ಕಾಫಿ, ಟೀ, ಹಣ್ಣು, ತರಕಾರಿ, ಹೂವು ಮಾತ್ರವಲ್ಲದೆ ಹತ್ತಿ, ತಂಬಾಕು ಹೀಗೆ ಎಲ್ಲೆಡೆ ಎಂಡೋಸಲ್ಫಾನ್ ತನ್ನ ಗುರುತು ಬಿಟ್ಟುಕೊಟ್ಟಿತ್ತು.

ಇದು ಜನರ ಮೇಲೆ ಮಾತ್ರವಲ್ಲದೆ ದಟ್ಟ ಅರಣ್ಯದಲ್ಲಿ ವನ್ಯಜೀವಿಗಳ ಮೇಲೆ, ಸಾಗರ ಹೊಕ್ಕು ಅಲ್ಲಿನ ಜಲರಾಶಿಯ ಮೇಲೆ ಪರಿಣಾಮ ಬೀರಲು ಆರಂಭಿಸಿತು.

ಎಂಡೋಸಲ್ಫಾನ್ ಗುಣವೇ ಅಂತಹದ್ದು. ಅದು ಎಲ್ಲೆಂದರಲ್ಲಿ ಮನೆಯ ನೆಂಟನಂತೆ ಹೊಂದಿಕೊಂಡುಬಿಡುತ್ತದೆ, ಭೂಮಿಯಲ್ಲಿ ಸಲೀಸಾಗಿ ಹಿಂಗುತ್ತದೆ. ನೀರಿನಲ್ಲಿ ಸೇರಿಹೋಗುತ್ತದೆ. ಗಾಳಿಯಲ್ಲಿ ಆರಾಮವಾಗಿ ತೇಲುತ್ತದೆ.

ದೂರದಲ್ಲಿ ಬರುವ ಮಳೆ ಮೋಡಗಳನ್ನು ಹೇಗೆ ರೈತರು ಕಂಡುಹಿಡಿದುಬಿಡುತ್ತಾರೋ ಹಾಗೆಯೇ ಚಿಟ್ಟೆಗಳು ಪಟ ಪಟನೆ ಸಾಯುತ್ತಿದ್ದಂತೆ ಎಂಡೋ ಇಲ್ಲಿ ಕಾಲೂರಿ ನಿಂತಿದೆ ಎನ್ನುವುದನ್ನು ಕಂಡುಕೊಳ್ಳುತ್ತಾರೆ.

ಇಂದು ಕಾಸರಗೋಡಿನಲ್ಲಿ ಚಿಟ್ಟೆಗಳು ಇಲ್ಲ, ಕಾಸರಗೋಡು ಒಂದು ಪುಟ್ಟ ಚಿಟ್ಟೆಯಂತೆ ಪತರಗುಟ್ಟಲು ಆರಂಭವಾದದ್ದೇ ತಡ ಜಗತ್ತು ಎಚ್ಚೆತ್ತುಕೊಂಡಿತು. .

ಎಂಡೋಸಲ್ಫಾನ್ ಜಗತ್ತಿನಾದ್ಯಂತ ಬಳಕೆಯಲ್ಲಿದ್ದರೂ, ಭಾರತದಲ್ಲಿಯೂ ಸಾಕಷ್ಟು ವರ್ಷಗಳಿಂದ ಇದ್ದರೂ ಇದ್ದಕ್ಕಿದ್ದಂತೆ ಅದರ ಪರಿಣಾಮ ಕಾಸರಗೋಡು ಹಾಗೂ ಅಂತಹ ಪ್ರದೇಶಗಳಲ್ಲಿ ತೀವ್ರವಾಗಿ ಕಾಣಿಸಿಕೊಂಡ ಬಗ್ಗೆಯೂ ಸಾಕಷ್ಟು ಅಧ್ಯಯನಗಳು ಜರುಗಿದೆ.

ಬಯಲ ಪ್ರದೇಶದಲ್ಲಿ ಎಂಡೋ ಸಿಂಪಡಿಸುವ ಕಡೆ ಇದು ನಿಧಾನ ವಿಷವಾದರೆ, ಒಂದು ಬಟ್ಟಲಿನಂತೆ ಇರುವ ಪಶ್ಚಿಮ ಘಟ್ಟಗಳ ಪ್ರಾಕೃತಿಕ ಸ್ವರೂಪವೇ ಎಂಡೋ ತಕ್ಷಣದ ಕೊಲೆಗಾರನಂತೆ ಕಾಣಲು ಕಾರಣವಾಗಿದೆ.

ಇಲ್ಲಿ ಸಿಂಪಡಿಸುವ ಕ್ರಿಮಿನಾಶಕ ಚದುರಿ ಹಂಚಿಹೋಗುವುದಿಲ್ಲ ಬದಲಿಗೆ ಘನೀಕರಿಸಿ ಕುಳಿತುಕೊಳ್ಳುತ್ತದೆ. ಎಂಡೋಸಲ್ಫಾನ್ ಬಗ್ಗೆ ಕೇರಳ, ಕರ್ನಾಟಕದಲ್ಲಿ ಬಂದಷ್ಟು ವ್ಯಾಪಕ ವಿರೋಧ ಇತರ ಕಡೆ ಬಾರದೆ ಇರುವುದಕ್ಕೂ ಇದು ಕಾರಣ.

ನಿಧಾನವಾಗಿ ಹೆಜ್ಜೆ ಹಾಕುತ್ತಿರುವ ಕೊಲೆಗಾರ ಜನರ ಕಣ್ಣಿಗೆ ಕಾಣುತ್ತಿಲ್ಲ ಎಂಬ ಆತಂಕ ಈ ಚಳವಳಿಯಲ್ಲಿದೆ.

ಎಂಡೋಸಲ್ಫಾನ್ ದೊಡ್ಡ ಪೆಟ್ಟು ನೀಡಿರುವುದು ಭಾರತಕ್ಕೆ.
ವ್ಯಂಗ್ಯವೆಂದರೆ ಎಂಡೋಸಲ್ಫಾನ್ ಗೆ ಜಾಗತಿಕ ನಿಷೇಧ ಹೇರಲು ಸಜ್ಜಾದಾಗ ಅದನ್ನು ವಿರೋಧಿಸಿದ್ದು ಭಾರತವೇ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 90ರ ದಶಕದ ವೇಳೆಗೆ ಇಡೀ ಜಗತ್ತು ವರ್ಷಕ್ಕೆ 12,800 ಮೆಟ್ರಿಕ್ ಟನ್ ನ್ನಷ್ಟುಎಂಡೋಸಲ್ಫಾನ್ ಅನ್ನು ಕಬಳಿಸುತ್ತಿದೆ.

ಕೃಷಿ ರಾಸಾಯನಿಕ ಕ್ಷೇತ್ರದಲ್ಲಿ ಎಂಡೋಸಲ್ಫಾನ್ ಜಗತ್ತಿನ ಏಳನೆಯ ಅತಿ ದೊಡ್ಡ ಕ್ರಿಮಿನಾಶಕ, ಇಡೀ ಜಗತ್ತು ಇದನ್ನು ಭಯಂಕರ ಕ್ರಿಮಿನಾಶಕ ಎಂದು ಬಣ್ಣಿಸಿ ಹೊರದೂಡಲು ಯತ್ನಿಸಿದಾಗ 80 ದೇಶಗಳು ಇದಕ್ಕೆ ಸಮ್ಮತಿ ಸೂಚಿಸಿದ್ದವು.

2011 ರ ಏಪ್ರಿಲ್ ನಲ್ಲಿ ನಡೆದ ಸ್ಟಾಕ್ ಹೋಂ ಸಮಾವೇಶ ಎಂಡೋಸಲ್ಫಾನ್ ನ ಮೇಲೆ ಜಾಗತಿಕ ನಿಷೇದ ಹೇರಲು ಸಜ್ಜಾಯಿತು. ಆದರೆ ಇಲ್ಲಿ ವಿರೋಧ ವ್ಯಕ್ತವಾದದ್ದು ಭಾರತ ಮತ್ತು ಚೀನಾದಿಂದ.

ಇದಕ್ಕೆ ಕಾರಣ ಈಗ ಎಂಡೋಸಲ್ಫಾನ್ ಕಂಪನಿಯ ಮಾಲೀಕತ್ವ ಇರುವುದು ಚೀನಾದ ಕೈನಲ್ಲಿ.

ಭಾರತ ಎಂಡೋಸಲ್ಫಾನ್ ಅನ್ನು ಅತಿ ಹೆಚ್ಚು ಉತ್ಪಾದಿಸುತ್ತಿರುವ, ರಫ್ತು ಮಾಡುತ್ತಿರುವ ದೇಶ ಸಹಾ.

ಹಾಗಾಗಿಯೇ ಸಂಸತ್ತಿನಲ್ಲಿ ಎಂಡೋಸಲ್ಫಾನ್ ನಿಷೇದಿಸಬೇಕು ಎಂಬ ಕೂಗೆದ್ದಾಗ ಹಲವು ರಾಜ್ಯಗಳು ಈ ನಿಷೇದಕ್ಕೆ ಒಪ್ಪಿಗೆ ಕೊಟ್ಟಿಲ್ಲ ಎಂಬ ಕಾರಣವನ್ನು ಶರದ್ ಪವಾರ್ ಮುಂದುಮಾಡಿದರು.

ಆದರೆ ಆರ್ ಟಿ ಐ ದಾಖಲೆಗಳು ಹೇಳಿದ್ದು ಬೇರೆಯದ್ದೇ ಕಥೆ. ಯಾವೊಂದು ರಾಜ್ಯವೂ ವಿರೋಧ ವ್ಯಕ್ತಪಡಿಸಿಲ್ಲ ಎನ್ನುವ ಅಂಶ ಹೊರಬಿತ್ತು. ಭಾರತ ಕ್ರಿಮಿನಾಶಕ ಲಾಬಿಗೆ ಮಣಿದಿದೆ ಎನ್ನುವುದು ಸುಸ್ಪಷ್ಟ.

ಎಂಡೋಸಲ್ಫಾನ್ ಗೆ ಉರುಳುತ್ತಿರುವ ಜೀವಗಳನ್ನು ಶರದ್ ಪವಾರ್ ಅವರು ಕ್ರಿಕೆಟ್ ಅಂಕಣದಲ್ಲಿ ಬೀಳುತ್ತಿರುವ ವಿಕೆಟ್ ಗಳೇನೋ ಎನ್ನುವ ಸಂಭ್ರಮದಿಂದ ನೋಡುತ್ತಿರುವಾಗಲೇ ‘ಹಿರೋಶಿಮಾ ಸಿಂಡ್ರೋಮ್’ ತಲೆ ಎತ್ತಿದೆ.

ಎಲ್ಲಿ ನಮಗೆ ಹುಟ್ಟುವ ಮಗು ಅಂಗವೈಕಲ್ಯ ಹೊಂದುತ್ತದೋ ಎನ್ನುವ ಕಾರಣಕ್ಕೇ ಗರ್ಭಪಾತ ಮಾಡಿಸಿಕೊಳ್ಳುವವರ ಸಂಖ್ಯೆ ಇನ್ನಿಲ್ಲದಂತೆ ಹೆಚ್ಚುತ್ತಿದೆ.

ಎಂಡೋ ಪೀಡಿತ ಗ್ರಾಮಗಳ ಹೆಣ್ಣು ಮಕ್ಕಳಿಗೆ ಮದುವೆಯಾಗುತ್ತಿಲ್ಲ. ಮದುವೆಯಾದ ಅನೇಕರಿಗೆ ಗರ್ಭ ನಿಲ್ಲುತ್ತಿಲ್ಲ. ಮಕ್ಕಳಾದರೂ ಅವರ ಬದುಕಿನಲ್ಲಿ ಬೆಳಕು ಮಿನುಗುತ್ತಿಲ್ಲ.

‘ಸ್ವರ್ಗ’ದ ಈ ಎಲ್ಲಾ ನರಕವನ್ನೂ ನೋಡಿ ಘಟ್ಟ ಏರಿ ವಾಪಸಾಗುತ್ತಿದ್ದಾಗ ತೂಗಾಡುತ್ತಿದ್ದ ಗೇರು ಹಣ್ಣನ್ನು ತೋರಿಸಿ ಶ್ರೀಪಡ್ರೆ ‘ತಿನ್ನಿ’ ಎಂದರು.

ಹಣ್ಣಿಗೆ ಕೈಹಾಕಿದ್ದ ನಾನು ಹಾಗೇ ಹಿಂದೆ ಸರಿದೆ.

ಪಶ್ಚಿಮ ಘಟ್ಟದಲ್ಲಿ ಪಟ ಪಟನೆ ಸಾಯುತ್ತಿರುವ ಚಿಟ್ಟೆಗಳು ನೆನಪಾದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?