ಆಧುನಿಕ ಯುಗದಲ್ಲಿ ಹಳೆಗನ್ನಡದ ಓದು ಕಡಿಮೆಯಾಗಿದ್ದರೂ ಅದು ಇನ್ನೂ ನಿಂತಿಲ್ಲ. ಮನೆಮನೆಗಳಲ್ಲಿ ಹಳಗನ್ನಡ ಓದುವ ಸಂಸ್ಕೃತಿ ಬೆಳೆಯಬೇಕಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಭೀಮಸೇನ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಮಾರವ್ಯಾಸ ಅಧ್ಯಯನ ಪೀಠ ಹಾಗೂ ಮಂಗಳೂರು ವಿವಿಯ ರತ್ನಾಕರವರ್ಣಿ ಅಧ್ಯಯನ ಪೀಠ ಸಹಯೋಗದಲ್ಲಿ ಏರ್ಪಡಿಸಿದ್ದ ಹಳೆಗನ್ನಡ ಕಾವ್ಯಗಳ ಓದು ಮತ್ತು ವ್ಯಾಖ್ಯಾನ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಗೂಗಲ್ ಓದುವಿನೊಂದಿಗೆ ಗ್ರಂಥಾಲಯ ಓದು ಕೂಡ ಆರಂಭವಾಗಿದೆ.ಹಳಗನ್ನಡ ಓದು ಪ್ರತೀ ಮನೆಯಲ್ಲೂ ಬೆಳೆಯಬೇಕಿದೆ. ತುಮಕೂರು ನಾಟಕ ಕಲೆಗೆ ಹೆಸರಾಗಿದ್ದು, ನಾಟಕ ರಂಗದಲ್ಲಿ ಆಗುವ ತಪ್ಪುಗಳನ್ನು ಗುರುತಿಸುವ ಜ್ಞಾನ ಇಲ್ಲಿನ ಸಾಮಾನ್ಯ ಪ್ರೇಕ್ಷಕನಲ್ಲಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ವೈ.ಎಸ್ ಸಿದ್ದೇಗೌಡ ಮಾತನಾಡಿ, ಹಳೆಗನ್ನಡ ಬೇರಿನಲ್ಲಿ ಹೊಸಗನ್ನಡದ ಚಿಗುರು ಇದೆ.
ಯಾವುದೇ ಭಾಷೆ ಅಲ್ಲಿನ ಭೌಗೋಳಿಕ ಪ್ರದೇಶ, ಜನಜೀವನ ಹಾಗೂ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ಪ್ರತಿಬಿಂಬವಾಗಿರುತ್ತದೆ ಎಂದು ಹೇಳಿದರು.
ಪ್ರೌಢರಾದಂತೆ ಓದುವ ಕೌಶಲ್ಯ, ಜ್ಞಾನ, ವಿವೇಕ ಬೆಳೆಯಬೇಕು. ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದರ ಕುರಿತ ತಿಳುವಳಿಕೆ ಓದಿಗೆ ಮಾತ್ರ ಸೀಮಿತವಾಗದೆ, ಅವರ ಜೀವನ ಕ್ರಮ ಅನುಸರಿಸಬೇಕು, ನಮಲ್ಲಿ ಸಂಪದ್ಭರಿತ ಇತಿಹಾಸವಿದೆ. ನಾವು ಐತಿಹಾಸಿಕ ವ್ಯಕ್ತಿಗಳ ಆದರ್ಶಗಳನ್ನು ಅಳವಡಿಸಿಕೊಳ್ಳವುದರ ಮೂಲಕ ಜೀವನದಲ್ಲಿ ಮುಂದುವರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಮೈಸೂರು ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ. ಮಳಲಿ ವಸಂತ್ ಕುಮಾರ್, ತುಮಕೂರು ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ಡಿ.ವಿ. ಪರಮಶಿವಮೂರ್ತಿ, ಕುಮಾರವ್ಯಾಸಪೀಠದ ಸಂಯೋಜಕ ಡಾ. ಪಿ. ಎಂ. ಗಂಗಾಧರಯ್ಯ, ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಸೋಮಣ್ಣ ಉಪಸ್ಥಿತರಿದ್ದರು.