ಇಟ್ಟರೆ ಸಗಣಿಯಾದೆ
ತಟ್ಟಿದರೆ ಬೆರಣಿಯಾದೆ
ನೀನಾರಿಗಾದೆಯೋ ಎಲೆ ಮಾನವಈ ಪದ್ಯವನ್ನು ಎಲ್ಲರೂ ಕೇಳಿರಬಹುದು. ಹಾಡಿರಲುಬಹುದು. ಹಸುವಿನ ಹಾಲು, ಸಗಣಿಯ ಮಹತ್ವ ವಿವರಿಸಿರಲೂಬಹುದು. ಇದು ಸಾಮಾನ್ಯ. ದನ ಸಾಕಿದವರು ನಿತ್ಯವೂ ಸಗಣಿಯನ್ನು ತಿಪ್ಪೆಗೆ ಹಾಕಿ ವರ್ಷಕ್ಕೊಮ್ಮೆ ಮಾರಾಟ ಮಾಡಿಯೂ ಇದ್ದಾರೆ. ಆದರೆ ಹಸಿ ಸಗಣಿ ಮಾರಾಟ ಮಾಡಿದ್ದನ್ನು ಕೇಳಿದ್ದೀರಾ ನೋಡಿದ್ದೀರಾ?!
https://youtu.be/9jvxjVVhUDIಹೌದು, ಈಗ ಕಾಲ ಬದಲಾಗಿದೆ. ದನಗಳು ಸಾಕುವವರು ಅಪರೂಪವಾಗಿದ್ದಾರೆ. ಹೀಗಾಗಿ ದನದ ಸಗಣಿ ಸಿಗುವುದು ಮತ್ತೂ ದುಸ್ತರವಾಗಿದೆ. ನಗರಗಳು ಬೆಳೆದಿವೆ. ವಿಸ್ತಾರ ಪಡೆದುಕೊಳ್ಳುತ್ತಿವೆ. ನಗರೀಕರಣ ಹೆಚ್ಚಿದಂತೆ ಹಳ್ಳಿಗಳಿಂದ ವಲಸೆ ಹೋದವರು ಹಬ್ಬಗಳನ್ನು ಆಚರಿಸುವುದು ನಿಲ್ಲಿಸುತ್ತಾರೆಯೇ? ಖಂಡಿತವಾಗಿಯೂ ಇಲ್ಲ.ಹಬ್ಬಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವುದು ದೀಪಾವಳಿ. ಇದು ಹಳ್ಳಿಸೊಗಡಿನ ಹಬ್ಬ. ಕೃಷಿಕರ ಹಬ್ಬ. ಎಲ್ಲಾ ಬೆಳೆಗಳು ಫಸಲಿಗೆ ಬಂದು ನಿಂತಿರುವ ಸಂದರ್ಭ. ಹಾಗಾಗಿ ರಾಗಿತೆನೆ, ಸಜ್ಜೆತೆನೆ, ಗರಿಕೆ, ನವಣೆತೆನೆ, ಅಣ್ಣೆಸೊಪ್ಪು ತೆನೆ – ಹೀಗೆ ಎಲ್ಲಾ ಬೆಳೆಯ ತೆನೆಗಳನ್ನು ಇಟ್ಟು ಪೂಜಿಸಲಾಗುತ್ತದೆ.ದೀಪಾವಳಿಗೆ ದೀಪ ಹಚ್ಚಲು ಸಗಣಿ ಬೇಕೇಬೇಕು. ಪ್ರತಿಯೊಂದು ಉಂಡೆಗಳನ್ನು ಮಾಡಿ ಅದಕ್ಕೆ ಈ ತೆನೆಗಳನ್ನು ಸಿಕ್ಕಿಸಿ ಪೂಜೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗ ಇದು ವಿಶೇಷವಲ್ಲ. ಹಸಿ ಸಗಣಿ ಮಾರುವುದು ವಿಶೇಷ.ದೀಪಾವಳಿಗೆ ದೀಪಹಚ್ಚಲು, ತೆನೆಗಳನ್ನು ಅದಕ್ಕೆ ಸಿಕ್ಕಿಸಲು ನಗರಗಳಲ್ಲಿ ಹಸಿ ಸಗಣಿ ಸಿಗುವುದು ಕಷ್ಟ. ಇದನ್ನೇ ವ್ಯಾಪಾರಸ್ಥರು ಮಾರಾಟದ ವಸ್ತುವನ್ನಾಗಿ ಮಾರಾಟ ಮಾಡುತ್ತಿದ್ದಾರೆ. ತುಮಕೂರು ನಗರದ ಸೋಮೇಶ್ವರ ಮುಖ್ಯರಸ್ತೆಯ ಸುನಿತಾ ಹೋಟೆಲ್ ಬಳಿ ಮಕ್ಕಳು ಹಸಿ ಸಗಣಿ ಇಟ್ಟುಕೊಂಡು ಮಾರುತ್ತಿದ್ದರು.ಒಂದು ಮಿದಿಕೆ ಸಗಣಿ ಬೆಲೆ 10 ರೂಪಾಯಿ. ಅದು ಹಸುವಿನ ಸಗಣಿ. ಹಸುಗಳು ಹಾಕಿದ್ದ ತೊಪ್ಪೆಗಳನ್ನು ತಂದು ಮಾರಾಟಕ್ಕೆ ಇಟ್ಟುಕೊಂಡಿದ್ದಿದು ಕಂಡುಬಂತು. ಎಷ್ಟು ಎಂದು ವಿಚಾರಿಸಿದಾಗ ಒಂದು ಹಿಡಿ 10 ರೂಪಾಯಿ ಎನ್ನುತ್ತಿದ್ದರು. ಹಬ್ಬಕ್ಕೆ ಸಗಣಿ ಬೇಕಲ್ಲ ಎಂದು ಗ್ರಾಹಕರು ಅರ್ಥಾತ್ ಭಕ್ತರು 10 ರೂಪಾಯಿ ಕೊಟ್ಟು ಖರೀದಿಯೂ ಮಾಡಿದರು. ಆ ಮಕ್ಕಳು ಹತ್ತು ರೂಪಾಯಿ ಸಿಕ್ಕಿತ್ತಲ್ಲ ಎಂಬುದಕ್ಕೆ ಅವರ ಮುಖದಲ್ಲಿನ ಮಂದಹಾಸವೇ ಹೇಳುತ್ತಿತ್ತು. ಅಂತೂ ಹಸಿ ಸಗಣಿಗೂ ಕಾಲ ಬಂತು ಅನ್ನಿ.