ಮೈಸೂರು
ಕನ್ನಡ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಇಡೀ ಜಗತ್ತಿಗೆ ಪರಿಚಯಿಸಿದೆ. ಶ್ರಮ ಸಂಸ್ಕೃತಿಯ ವೈಶಿಷ್ಟ್ಯತೆ ಚಿಂತನೆ ಕುರಿತಂತೆ ಪ್ರಾಚೀನ ಕಾಲದಿಂದಲೂ ಇಲ್ಲಿಯವರೆಗೂ ಸಾಹಿತಿಗಳು ವಿಶೇಷವಾಗಿ ನಿರೂಪಿಸಿದ್ದಾರೆ. ಕನ್ನಡ ಮಾತೃಭಾಷೆಯಲ್ಲದ ಅನೇಕ ಮಹನೀಯರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಸ್ಮರಣೀಯವಾದದ್ದು.ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ವಿಚಾರ ಸಂಕಿರಣದ ಗೋಷ್ಠಿಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.ಭಾಷೆಯ ಬಗೆಗೆ ಗಂಭೀರವಾದ ಚಿಂತನೆ ನಡೆಸಿದವರು ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆ.ಹಾಗಾಗಿ ಕನ್ನಡ ಸಾಹಿತ್ಯ ಶ್ರೀ ಸಾಮಾನ್ಯನ ಪ್ರತೀಕ ಎಂದು ತುಮಕೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.
ನಗರದ ಶೇಷಾದ್ರಿಪುರಂ ಪದವಿ ಕಾಲೇಜು, ಅಮೇರಿಕ ನ್ಯಾಶುವೇಲ್ ಕನ್ನಡ ಕೂಟ, ಸಾಕ್ಷಿ ಪ್ರತಿಷ್ಠಾನ ಮತ್ತು ಈಳ್ಳೇವು ಪ್ರಕಾಶನ ಸಹಯೋಗದಲ್ಲಿ ನಡೆದ ‘ಕನ್ನಡ ಸಾಹಿತ್ಯ : ಶ್ರೀ ಸಾಮಾನ್ಯ ಚಿಂತನೆ ‘ ಎಂಬ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಭಾಷೆಯ ವಿಷಯದಲ್ಲಿ ಅಧ್ಯಯನ ಬಹಳ ಮುಖ್ಯ. ಮಾತೃಭೂಮಿ ಮತ್ತು ಮಾತೃಭಾಷೆಯನ್ನು ನಿರ್ಲಕ್ಷ್ಯ ಮಾಡಿದರೆ ನಾವು ಅನಾಥಪ್ರಜ್ಞೆ ಯನ್ನು ಅನುಭವಿಸಬೇಕಾಗುತ್ತದೆ.ಯಾವುದೇ ಭಾಷೆ ಮತ್ತೊಂದು ಭಾಷೆಗೆ ಪ್ರತಿಬಂಧಕ ಅಲ್ಲ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಕೊಳು ಕೊಡುಗೆಯೊಂದಿಗೆ ಭಾಷೆ ಜಾಗತಿಕ ಮಟ್ಟದಲ್ಲಿ ಪಸರಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಮಾತನಾಡಿ ಕನ್ನಡ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ಕಾರಣರಾದ ಸಾಧಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸಬೇಕು.ಕನ್ನಡ ಸಾಹಿತ್ಯ ಮನುಷ್ಯನಿಗೆ ಬದುಕುವ ಕಲೆಯನ್ನು ಕಲಿಸಿಕೊಟ್ಟಿದೆ.ಉನ್ನತ ಗ್ರಂಥಗಳ ಅಧ್ಯಯನದಿಂದ ಶ್ರೇಷ್ಠ ಮಟ್ಟದ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ.ಯುವ ಪೀಳಿಗೆಯು ಕನ್ನಡ ಸಾಹಿತ್ಯದತ್ತ ಹೆಚ್ಚು ಗಮನವನ್ನು ಹರಿಸಬೇಕು ಎಂದರು. ಕನ್ನಡ ಸಾಹಿತ್ಯ ಹುಟ್ಟಿರುವುದೇ ಶ್ರೀ ಸಾಮಾನ್ಯನಿಂದ ಶ್ರೀ ಸಾಮಾನ್ಯನನ್ನು ಸಾಹಿತ್ಯ ಮುಟ್ಟಿದರೆ ಮಾತ್ರ ಸಾಹಿತ್ಯ ಸಮೃದ್ದಿಯಾಗಿ ಬೆಳೆಯುತ್ತದೆ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎನ್.ಕೆ. ಲೋಕನಾಥ್ ಅವರು ಕುವೆಂಪು ವಿಶ್ವಕವಿಯಾಗಲು ಇಂಗ್ಲಿಷ್ ಕಾರಣ .ಕನ್ನಡ ಸಾಹಿತ್ಯದ ಮೇರು ರಾಷ್ಟ್ರಕವಿ ಕುವೆಂಪುರವರು ಪ್ರಾಚೀನ ಕನ್ನಡ ಸಾಹಿತ್ಯವನ್ನು ಚೆನ್ನಾಗಿ ತಿಳಿದುಕೊಂಡು ಜನಸಾಮಾನ್ಯ ಸಾಹಿತ್ಯವನ್ನು ರಚಿಸಿದರು. ಶ್ರೀಸಾಮಾನ್ಯನ ಬಗೆಗೆ ಅಪಾರವಾದ ಕಾಳಜಿ ಇದ್ದ ಕಾರಣಕ್ಕೆ ಮಲೆಗಳಲ್ಲಿ ಮದುಮಗಳು ಮತ್ತು ಶೂದ್ರ ತಪಸ್ವಿ ಜಲಗಾರದಂತಹ ಸಾಹಿತ್ಯ ಕೃತಿಗಳು ಬರಲು ಕಾರಣವಾಯಿತು. ಇದಕ್ಕೆ ಬಹುಮುಖ್ಯ ಕಾರಣ, ಮಾತೃಭಾಷೆ ಕನ್ನಡದೊಂದಿಗೆ ಇಂಗ್ಲಿಷ್ ಭಾಷೆ ಗೊತ್ತಿದ್ದ ಕಾರಣಕ್ಕೆ ಇವರು ವಿಶ್ವಕವಿಯಾಗಲು ಕಾರಣವಾಯಿತು.
ಕುವೆಂಪು ಅವರು ಕನ್ನಡ ಸಾಹಿತ್ಯದ ಮೇರು ವ್ಯಕ್ತಿತ್ವ. ಸಮಾಜದ ತಳವರ್ಗದದವರ ಬಗ್ಗೆ ಅಪಾರವಾದ ಕಾಳಜಿ ಇತ್ತು. ಇವರ ಶ್ರೀಸಾಮಾನ್ಯನ ಚಿಂತನೆಯನ್ನು ತಮ್ಮ ಎಲ್ಲಾ ಸಾಹಿತ್ಯ ಕೃತಿಗಳಲ್ಲಿ ಅನಾವರಣ ಮಾಡಿದ್ದಾರೆ. ಹಾಗಾಗಿ ನಮ್ಮ ಇಂದಿನ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ಅವರು ಪ್ರಯೋಜನವನ್ನು ಪಡೆದುಕೊಳ್ಳಬೇಕು ಹಾಗೂ ಸಮೂಹ ಮಾಧ್ಯಮಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳನ್ನು ಒಳಗೊಂಡು ನಾವೆಲ್ಲರೂ ಹೆಚ್ಚು ಕನ್ನಡ ಪುಸ್ತಕಗಳನ್ನು ಓದುವುದರಿಂದ ನಮ್ಮ ಕನ್ನಡ ಭಾಷೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ವಿಚಾರ ಸಂಕಿರಣದ ಅಂಗವಾಗಿ ಹೊರತಂದ ‘ ಕನ್ನಡ ಸಾಹಿತ್ಯ: ಶ್ರೀಸಾಮಾನ್ಯನ ಚಿಂತನೆ ‘ ಎಂಬ ಪುಸ್ತಕವನ್ನು ಕನ್ನಡ ಶಾಸ್ತ್ರೀಯ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ ಎನ್ ಎಂ ತಳವಾರ್ ಅವರು ಬಿಡುಗಡೆ ಮಾಡಿದರು. ಸಾಕ್ಷಿ ಪ್ರತಿಷ್ಠಾನ ಮತ್ತು ಈಳ್ಳೇವು ಪ್ರಕಾಶನ ವತಿಯಿಂದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರಿಗೆ ‘ ಶ್ರೇಷ್ಠ ಶಿಕ್ಷಣ ರತ್ನ ಪ್ರಶಸ್ತಿ ‘ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಅವರಿಗೆ ‘ಶ್ರೇಷ್ಠ ಸಾಹಿತ್ಯ ಮತ್ತು ಸಾಂಸ್ಕೃತಿಕ ರತ್ನ ಪ್ರಶಸ್ತಿ ‘ನೀಡಿ ಗೌರವಿಸಲಾಯಿತು. ಡಾ.ಪ್ರಿಯಾಂಕ ಕೃತಿ ಕುರಿತು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞರಾದ ಪ್ರೊ.ವೈ ಎಸ್ ಸಿದ್ದೇಗೌಡ, ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸೌಮ್ಯಾ ಈರಪ್ಪ ಕೆ ಉಪಸ್ಥಿತರಿದ್ದರು. ಸಂಚಾಲಕರಾದ ಡಾ.ಚಿತ್ರಲಿಂಗಯ್ಯ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೊ. ಸಿದ್ದಪ್ಪ ವಂದಿಸಿದರು. ಡಾ.ಸಿ.ಪಿ.ಲಾವಣ್ಯ ನಿರೂಪಿಸಿದರು.