ಪಾವಗಡ ತಾಲ್ಲೂಕು ತಿರುಮಣಿ ಸರ್ಕಲ್ ಇನ್ ಸ್ಪೆಕ್ಟರ್ ವೆಂಕಟೇಶ್ ಹಾಗೂ ತಂಡ ಮಾಡಿದ ಕೆಲಸಕ್ಕೆ ತಾಲ್ಲೂಕಿನ ಜನತೆ ಫಿದಾ ಆಗಿದ್ದಾರೆ.
ದೇಶದಾದ್ಯಂತ ಕೊರೊನಾ ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಹಿಡಿದು ಅನಗತ್ಯವಾಗಿ ಅಡ್ಡಾಡುತ್ತಿದ್ದವರ ಮೇಲೆ ಬ್ಯಾಟಿಂಗ್ ಮಾಡುತ್ತಿದ್ದ ವಿಡಿಯೊ ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಯ ಪಡುವಂತೆ ಮಾಡಿದ್ದವು. ಆದರೆ ರಕ್ಷಣೆಗಾಗಿ ಲಾಠಿ ಹಿಡಿದ ಕೈಗಳು ಹಸಿದವರಿಗೆ ತುತ್ತು ತಿನಿಸುತ್ತವೆ ಎಂಬುದನ್ನು ತಿರುಮಣಿ ಪೊಲೀಸರು ಸಾಬೀತುಪಡಿಸಿದ್ದಾರೆ.
ಕೆಲಸದ ಒತ್ತಡದ ನಡುವೆಯೂ ತಿರುಮಣಿ ಪೊಲೀಸರ ತಂಡ ಹಸಿದವರ ಮನೆ ಬಾಗಿಲಿಗೆ ಹೋಗಿ ಅವರ ಕಷ್ಟಕ್ಕೆ ಸ್ಪಂದಿಸುವ ಜೊತೆಗೆ ದವಸ, ಧಾನ್ಯ ವಿತರಿಸಿ ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಮಹತ್ ಕಾರ್ಯಕ್ಕೆ ಮುಂದಾಗಿದೆ.
ನಾಗಲಮಡಿಕೆ ಹೋಬಳಿಯ ಗ್ರಾಮಗಳ ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಪಡಿತರ, ಅಗತ್ಯ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಇಲ್ಲಿನ ಪೊಲೀಸ್ ಸಿಬ್ಬಂದಿ ಪಾತ್ರರಾಗಿದ್ದಾರೆ..
ನಾಗಲಮಡಿಕೆ ಹೋಬಳಿಯ ಬುಗಡೂರು, ಶ್ರೀರಂಗಪುರ, ರಾಪ್ಟೆ, ಶಾಂತಿವನ ಇತರೆ ಗ್ರಾಮಗಳ ಬಡ ಕುಟುಂಬಗಳನ್ನು ಗುರುತಿಸಿ ಗ್ರಾಮಗಳಿಗೆ ಹೋಗಿ ಪಡಿತರ ವಿತರಿಸಿದ್ದಾರೆ. ಯಾವುದೇ ಸಮಸ್ಯೆ ಇದ್ದಲ್ಲಿ ತಿರುಮಣಿ ಠಾಣೆಯನ್ನು ಸಂಪರ್ಕಿಸಿ ಸಹಾಯ ಸಹಕಾರ ಪಡೆಯುವಂತೆ ಜನತೆಯಲ್ಲಿ ಆತ್ಮಸ್ಥೈರ್ಯ ಮೂಡಿಸಿದ್ದಾರೆ.
ಗುಜರಾತ್ ಹಾಗೂ ಇತರೆಡೆಯಿಂದ ಕೆಲಸಕ್ಕಾಗಿ ರಾಪ್ಟೆ ಹಾಗೂ ಹೋಬಳಿಯ ಗ್ರಾಮಗಳಿಗೆ ಆಗಮಿಸಿ ಅನ್ನ ನೀರು ಇಲ್ಲದೆ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರ ಬಳಿಗೆ ಹೋಗಿ ಸಹಾಯ ಹಸ್ತ ಚಾಚಿದ್ದಾರೆ.
ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರು, ಬಡ ಕುಟುಂಬಗಳಿಗೆ ಪೊಲೀಸರು ವೈಯಕ್ತಿಕವಾಗಿ ಸಹಾಯ ಮಾಡಿರುವ ಬಗ್ಗೆ ತಾಲ್ಲೂಕಿನ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಬ್ ಇನ್ ಸ್ಪೆಕ್ಟರ್ ರಾಮಕೃಷ್ಣಪ್ಪ, ಗೋಕರ್ಣ, ಪುಂಢಲೀಕ ಲಮಾಣಿ, ಪ್ರವೀಣ್ ಭಜಂತ್ರಿ, ಮಹಂತೇಶ್, ನರಸಿಂಹಮೂರ್ತಿ, ದವಾಲ್ ಸಾಬ್, ನಾಗೇಂದ್ರ ಪ್ರಸಾದ್, ಮುತ್ತು ಸನ್ನದ್, ವೆಂಕಪ್ಪ, ಗಂಗಾಧರ್ ಜಿನಪುರ್ ಪಡಿತರ ವಿತರಣಾ ತಂಡದಲ್ಲಿದ್ದಾರೆ.