ಪಾವಗಡ ತಾಲ್ಲೂಕಿನ ತಿಮ್ಮಮ್ಮನಹಳ್ಳಿ ಗ್ರಾಮದ ಬಸ್ ಚಾಲಕ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ ಒಟ್ಟು 4 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಮಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ತಿಮ್ಮಮ್ಮನಹಳ್ಳಿ ಗ್ರಾಮದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇವರೊಟ್ಟಿಗೆ ಕಂಡಕ್ಟರ್ ಆಗಿದ್ದವರಿಗೂ ಸೋಂಕು ದೃಢಪಟ್ಟಿತ್ತು. ಗಂಟಲು ದ್ರವ ಪರೀಕ್ಷೆಗೆ ನೀಡಿ ಚಾಲಕ ತಿಮ್ಮಮ್ಮನಹಳ್ಳಿಗೆ ಹಿಂದಿರುಗುತ್ತಿದ್ದಾಗ ಕೊರೋನಾ ಸೊಂಕು ದೃಢಪಟ್ಟಿರುವ ವಿಚಾರ ತಿಳಿದಿದೆ. ಆದರೂ ಮರಳದೆ ಪಾವಗಡದತ್ತ ಚಾಲಕ ಬಂದಿದ್ದಾರೆ. ಮಾಹಿತಿ ತಿಳಿದ ಇಲ್ಲಿನ ಸಿಬ್ಬಂದಿ ಚಾಲಕನನ್ನು ತಡೆದು ಪ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಟ್ಟಣದ ವಿನಾಯಕನಗರದ 32 ವರ್ಷ ವಯಸ್ಸಿನ ವ್ಯಕ್ತಿ, ರೈನ್ ಗೇಜ್ ಬಡಾವಣೆ 23 ವರ್ಷದ ಯುವಕನಿಗೂ ಸೋಂಕು ದೃಡಪಟ್ಟಿದೆ. ಇವರಿಬ್ಬರ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. 23 ವರ್ಷ ವಯಸ್ಸಿನ ವ್ಯಕ್ತಿ ಪಟ್ಟಣದ ಆಶ್ರಮವೊಂದರಲ್ಲಿ ಸ್ವಯಂ ಸೇವಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂಬುದು ಅಲ್ಲಿನ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ.
ಲಿಂಗದಹಳ್ಳಿಯಲ್ಲಿ ನಕಲಿ ವೈದ್ಯ (ಆರ್.ಎಂ.ಪಿ) ವೃತ್ತಿ ನಡೆಸುತ್ತಿದ್ದ ನ್ಯಾಯದಗುಂಟೆ ಗ್ರಾಮದ 49 ವರ್ಷದ ವ್ಯಕ್ತಿಗೆ ಸೊಂಕು ದೃಢಪಟ್ಟಿದೆ. ಈತನ ಬಳಿ ಸಾಕಷ್ಟು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಪಡೆದವರ ಬಗ್ಗೆ ತಾಲ್ಲೂಕು ಆಡಳಿತ ಮಾಹಿತಿ ಕಲೆ ಹಾಕುತ್ತಿದೆ.