ಬೆಂಗಳೂರು: ಗಾಂಧೀಜಿ ಅವರನ್ನು ಓದದೇ ವಿಮರ್ಶಿಸಬೇಡಿ ಎಂದು ಗಾಂಧಿ ಪ್ರತಿಷ್ಠಾನದ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ ಕೃಷ್ಣ ಅವರು ಕಟುವಾಗಿ ಹೇಳಿದರು.
ಇಲ್ಲಿನ ಶೇಷಾದ್ರಿಪುರಂ ಕಾನೂನು ಮಹಾವಿದ್ಯಾಲಯ ಬೆಂಗಳೂರು, ಗಾಂಧೀ ಅಧ್ಯಯನ ಕೇಂದ್ರ ಶೇಷಾದ್ರಿಪುರಂ ಕಾಲೇಜು,ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಗಾಂಧೀ ಶಾಂತಿ ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ಗಾಂಧೀ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಅನಿವಾರ್ಯ” ವಿಚಾರ ಕುರಿತ ಒಂದು ದಿನದ ವಿಚಾರ ಸಂಕಿರಣ ಮತ್ತು ಸಂವಾದದಲ್ಲಿ ಮಾತನಾಡಿದರು.
” ತಾಂತ್ರಿಕತೆಯ ಆರ್ಭಟದಲ್ಲಿ ಇಂದು ಮನುಷ್ಯ ಸಂಬಂಧಗಳು ಹಾಳಾಗುತ್ತಿವೆ, ಪ್ರಕೃತಿಯೊಂದಿಗೆ ಸಾಮರಸ್ಯ ಕಳಚಿಕೊಳ್ಳುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಇಂದು ಜಾತೀಯತೆ ಮತ್ತು ಮತೀಯತೆಯ ಭೇದಭಾವ ಉಂಟುಮಾಡುತ್ತಿರುವ ಇಂದಿನ ದಿನಗಳಲ್ಲಿ ಗಾಂಧೀಯ ತತ್ವಗಳ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ಪಟ್ಟರು.
ಗಾಂಧೀಜಿಯವರು ಹೇಳುತ್ತಾರೆ ” ಸತ್ಯ ಮತ್ತು ಅಹಿಂಸೆಯನ್ನು ನಾನು ಕಂಡು ಹಿಡಿಯಲಿಲ್ಲ. ಅದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಿಳಿತವಾಗಿದೆ ಎಂದು ಹೇಳಿದ್ದಾರೆ. ಮಹಾತ್ಮ ಗಾಂಧೀಜಿಯವರು ನಮಗೆ ದೊರೆತಿರುವುದು ಬರೀ ರಾಜಕೀಯ ಸ್ವಾತಂತ್ರ್ಯ, ನಾವು ಸಾಮಾಜಿಕವಾಗಿ, ಆರ್ಥಿಕವಾಗಿ ಸ್ವತಂತ್ರವಾಗಿಲ್ಲ ಎಂದು ಹೇಳಿದ್ದರು. ಗಾಂಧೀಜಿಯವರು ಕಲ್ಪನೆಯ ಸ್ವಾತಂತ್ರ್ಯ ನಮಗೆ ಇನ್ನೂ ಸಿಕ್ಕಿಲ್ಲ ಎಂದರು.
ಗಾಂಧೀಜಿ ಅವರ ಅನೇಕ ವಿಚಾರಧಾರೆಗಳ ಬಗ್ಗೆ ಒತ್ತಿ ಹೇಳಿದ ಅವರು ಗಾಂಧೀಜಿಯವರ ವಿಚಾರಗಳನ್ನು ಓದದೆ ಅವರನ್ನು ವಿಮರ್ಶಿಸಬೇಡಿ ಎಂದರು.
ಸತ್ಯ ಯಾವಗಲೂ ಉಳಿಯುತ್ತದೆ. ನಮ್ಮ ಮಕ್ಕಳ ಮನಸ್ಸನ್ನು ಹಾಳುಮಾಡಬಾರದು. ಗಾಂಧೀ ನಮಗೆ ಯಾಕೆ ಮುಖ್ಯ ಎನ್ನುವುದನ್ನು ಹೇಳುತ್ತಾ, ಅವರ ತತ್ವಗಳಿಂದ ಅವರು ಜೀವಂತವಾಗಿದ್ದಾರೆ. ಎಂದು ತಿಳಿಸಿದರು.
” ದ್ವೇಷಿಸುವವರನ್ನು ಪ್ರೀತಿಸಬೇಕು ಎಂಬ ಗಾಂಧೀಜಿಯವರ ಉದಾತ್ತ ಚಿಂತನೆಗಳಿಂದ ಅವರು ಮಹಾತ್ಮರಾದರು. ಸಮಾಜ ಕಡೆಗಣಿಸಿದವರನ್ನು ಜೊತೆ ಸೇರಿಸಿಕೊಂಡರು. ಕ್ಷಮೆಕೇಳದೆ ಕ್ಷಮಿಸುವುದು.ತಪ್ಪುಗಳನ್ನು ಒಪ್ಪಿಕೊಳ್ಳುವುದು. ಸರಳವಾಗಿ ಬದುಕುವುದು. ನಾವು ನಾವಾಗಿರುವುದು ಮುಖ್ಯ. ಇಂತಹ ತತ್ವಗಳಿಂದಾಗಿ ಗಾಂಧೀ ನಮಗೆ ಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗಾಂಧೀ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಪ್ರೊ ಜಿ ಬಿ ಶಿವರಾಜು ಅವರು ಮಾತನಾಡಿ, “ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಲ್ಲಾದರೂ ಇದೆಯಾ ಎಂದರೆ ಅದು ಗಾಂಧೀಯ ವಿಚಾರದಲ್ಲಿದೆ” ಎಂದರು.
ಇಂದಿನ ಸಮಾಜದ ವಿಪರ್ಯಾಸವೆಂದರೆ ” ಎಲ್ಲವನ್ನು ಪರಿಹಾಸ್ಯ ಮಾಡುವ ಗುಣ ನಮ್ಮ ರಾಷ್ಟ್ರರಕ್ತಕ್ಕೆ ಅಂಟಿದೆ. ಅದನ್ನು ಮೊದಲು ತೊಲಗಿಸಬೇಕು. ಶ್ರೇಷ್ಠ ಮತ್ತು ಪರಿಶುದ್ದ ಮನಸ್ಸಿನ ಹಿರಿಯರ, ಸಂತರ, ಸಾಧಕರ ವ್ಯಕ್ತಿತ್ವವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು. ನಿಮ್ಮಂತಹ ಮಕ್ಕಳು ಗಾಂಧೀಯ ತತ್ವಗಳನ್ನು, ಮೌಲ್ಯಗಳನ್ನು ತೆಗೆದುಕೊಂಡು ಹೋಗಬೇಕು. ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು. ಗಾಂಧೀ ಸತ್ಯ ಮತ್ತು ಪ್ರೇಮದ ಜ್ವಾಲಾಮುಖಿ ಎಂಬ ಮಾತನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ ಕೃಷ್ಣಸ್ವಾಮಿ, ಪ್ರಾಂಶುಪಾಲರಾದ ಡಾ. ಪ್ರಣೀತ ಬಿ ಎಸ್, ಸಂಪನ್ಮೂಲ ವ್ಯಕ್ತಿಯಾದ ಡಾ. ಎನ್ ಎಸ್ ಸತೀಶ್, ಶೇಷಾದ್ರಿಪುರಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಚಾಲಕರಾದ ಡಾ. ಸಂದೀಪ್.ಸಿ, ಪ್ರೊ ಜಯಶೀಲ ಜಿ.ಎಸ್ ಉಪಸ್ಥಿತರಿದ್ದರು