ತುಮಕೂರು: ಒಂದೇ ಬಸ್ ನಲ್ಲಿ ಆಗಮಿಸಿರುವ 33 ಮಂದಿ ತಬ್ಲಿಘಿಗಳ ಪೈಕಿ ಚಿತ್ರದುರ್ಗದಲ್ಲಿ ಕ್ವಾರಂಟೈನ್ ನಲ್ಲಿದ್ದ 3 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಸೋಂಕು ದೃಢಪಟ್ಟ ಕೂಡಲೇ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಆತಂಕ ಶುರುವಾಗಿದೆ. ಚಿತ್ರದುರ್ಗದಲ್ಲಿರುವ 15 ಮಂದಿ ತಬ್ಲಿಘಿಗಳ ಜೊತೆ ಪಾವಗಡ ತಾಲ್ಲೂಕು ವೈ. ಎನ್ ಹೊಸಕೋಟೆ ಗ್ರಾಮದ 13 ಮಂದಿಯೂ ಬಸ್ ನಲ್ಲಿ ಸತತ 24 ಗಂಟೆಗಳ ಕಾಲ ಪ್ರಯಾಣ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.
ಮೇ-5 ರಂದು ಗುಜರಾತ್ ನ ಅಹಮದಾಬಾದ್ ನಿಂದ ರಾಜ್ಯಕ್ಕೆ 33 ಮಂದಿ ತಬ್ಲಿಘಿಗಳು ಬಸ್ ಮೂಲಕ ಆಗಮಿಸಿದ್ದರು. ಇವರು ಗುಜರಾತ್ ಸರ್ಕಾರದ ಅನುಮತಿ ಪಡೆದಿದ್ದರು. ಆದರೆ ರಾಜ್ಯ ಸರ್ಕಾರಕ್ಕೆ ಇವರು ಬರುವ ಮಾಹಿತಿ ಇರಲಿಲ್ಲ.
ಚಿತ್ರದುರ್ಗ ಚೆಕ್ ಪೋಸ್ಟ್ ಬಳಿ ಪೊಲೀಸರು ಬಸ್ ತಡೆದು ಪರಿಶೀಲಿಸಿದಾಗ 33 ಮಂದಿ ಒಂದೇ ಬಸ್ ನಲ್ಲಿ ಬಂದಿರುವ ಮಾಹಿತಿ ತಿಳಿದಿದೆ. ಕೂಡಲೇ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೆ ಮಾಹಿತಿ ಸಿಕ್ಕಿತ್ತು.
ವೈ.ಎನ್.ಹೊಸಕೋಟೆಯ ತಬ್ಲಿಘಿಗಳನ್ನು ಕುರುಬರಹಳ್ಳಿ ಗೇಟ್ ಬಳಿ ಕ್ವಾರಂಟೈನ್ ಮಾಡುವ ಬಗ್ಗೆ ಕುರುಬರಹಳ್ಳಿ, ನಲಿಗಾನಹಳ್ಳಿ, ಗುಂಡಾರ್ಲಹಳ್ಳಿ, ತಾಂಡ ಜನತೆ ಆಕ್ಷೇಪ ವ್ಯಕ್ತಪಡಿಸಿದ್ದರು.
ರಾತ್ರಿಯಿಡೀ ವಸತಿ ನಿಲಯದ ಮುಂದೆ ಕುಳಿತು ಬೇರೆಡೆ ಸ್ಥಳಾಂತರಿಸುವಂತೆ ಜನತೆ ಒತ್ತಾಯಿಸಿದ್ದರು. ವೈ.ಎನ್.ಹೊಸಕೋಟೆ ಬಳಿಯೇ ತಬ್ಲಿಘಿಗಳನ್ನು ಕ್ವಾರಂಟೈನ್ ಮಾಡಿ ಎಂದು ಪಟ್ಟು ಹಿಡಿದಿದ್ದರು.
ಚಿತ್ರದುರ್ಗದಲ್ಲಿ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ಸಿಕ್ಕ ಕೂಡಲೇ ತಾಲ್ಲೂಕು ಆಡಳಿತ, ಅಧಿಕಾರಿಗಳು ಕುರುಬರ ಹಳ್ಳಿ ಗೇಟ್ ಬಳಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.