ತುಮಕೂರು: ರಾಜ್ಯ ಸರ್ಕಾರವು ಕೆಲಸದ ಅವಧಿಯನ್ನು ದಿನಕ್ಕೆ 8 ರಿಂದ 10 ಗಂಟೆ ಹಾಗು ವಾರದಲ್ಲಿ 48 ರಿಂದ 60 ಗಂಟೆಗಳಿಗೆ ಹೆಚ್ಚಿಸುವ ಆದೇಶ ಹೊರಡಿರುವುದು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ತುಮಕೂರಿನಲ್ಲಿಂದು ಪ್ರತಿಭಟನೆ ನಡೆಸಿ ಆದೇಶದ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.
ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಸಂಘಟನೆಗಳ ಕಾರ್ಯಕರ್ತರು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಸಿಟ್ಟನ್ನು ಹೊರಹಾಕಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕಾರ್ಮಿಕ ಕಾನೂನುಗಳನ್ನು ಮಾಲಕರ ಪರವಾಗಿ ಸಡಿಲಗೊಳಿಸುವ ಪ್ರಯತ್ನ ಇದಾಗಿದೆ. ಕೆಲಸದ ಅವಧಿ ಹೆಚ್ಚಳ ಮಾಡುವುದು ಅವೈಜ್ಞಾನಿಕ ಎಂದರು.
ಇದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘmನೆ ನಿರ್ಣಯಕ್ಕೆ ವಿರುದ್ಧವಾಗಿದೆ. 10 ಗಂಟೆಗಳ ಆದೇಶವನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಸರ್ಕಾರ ವಲಸೆ ಕಾರ್ಮಿಕರ ಕುರಿತು ಕಾಳಜಿ ಹೋಂದಿಲ್ಲ, ಕಾರ್ಮಿಕ ಕಾನೂನುಗಳ ಮಾಲಿಕರ ಪರ ಬದಲಿಸಿ ದುಡಿವವರಿಗೆ ಅನ್ಯಾಯ ಮಾಡುತ್ತಿದೆ ಎಂದರು.
ಮೋದಿ ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸದೆ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಅರೋಪಿಸಿದರು.
ಎಐಯುಟಿಯುಸಿ ಮಂಜುಳ ಮಾತಾನಾಡಿ ಸಂವೇದನೆಯೇ ಇಲ್ಲದೆಂತೆ ಸರ್ಕಾರಗಳು ವರ್ತಿಸುತ್ತಿವೆ ಎಂದರು. ಕಟ್ಟಡ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ರಂಗಧಾಮಯ್ಯ, ಗೌರವಾಧ್ಯಕ್ಷ ಗೋವಿಂದರಾಜು, ಶಂಕರಪ್ಪ. ಖಿಲೀಲ್, ಎಐಟಿಯುಸಿ ಕಾಂತರಾಜು, ನಾಗಣ್ಣ ಮೊದಲಾದವರು ಉಪಸ್ಥಿತರಿದ್ದರು.