ಪಾವಗಡ: ರೋಗಿಗಳ ಜೀವ ಉಳಿಸುವ ವೈದ್ಯರಿಗಿಲ್ಲ ಸರ್ಕಾರದ ಅಭಯ. ಕಷ್ಟ ಪಟ್ಟು ಕೆಲಸ ಮಾಡಿದರೂ ತಾರತಮ್ಯ……
-ಹೌದು ಇತ್ತೀಚೆಗೆ ಸರ್ಕಾರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಎಂ ಬಿ ಬಿಎಸ್ ವೈದ್ಯರ ವೇತನ ಹೆಚ್ಚಿಸಿ ಅವರ ಸೇವೆ ಖಾಯಂ ಮಾಡುವ ತೀರ್ಮಾನ ತೆಗೆದುಕೊಂಡಿದೆ.
ಆದರೆ ಇವರಷ್ಟೇ ಕೆಲಸ ಮಾಡುವ ಆಯುಶ್ ವೈದ್ಯರಿಗೆ ಖಾಯಂ ಗೊಳಿಸುವುದಿರಲಿ ವೇತನ ಹೆಚ್ಚಿಸುವ ಯತ್ನವನ್ನೂ ಮಾಡಿಲ್ಲ.
ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ಕೊಡುವ, ಜೀವವನ್ನೆ ಒತ್ತೆಯಿಟ್ಟು ದುಡಿಯುತ್ತಿರುವ ಇವರನ್ನು ಕೊರೋನಾ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಿಲ್ಲ. ಆಶಾ ಕಾರ್ಯಕರ್ತೆಯರು, ಡಿ ಗ್ರೂಪ್ ನೌಕರರಿಗೆ ಕೊಟ್ಟಿರುವ ವಿಮೆ, ಇತ್ಯಾದಿ ಸವಲತ್ತನ್ನೂ ನೀಡಿಲ್ಲ ಇದೆಂತ ವಿಪರ್ಯಾಸ.
ಆಯುಶ್ ವೈದ್ಯರನ್ನು ಹೆಚ್ಚಾಗಿ ಗ್ರಾಮೀಣ ಭಾಗಕ್ಕೆ ನಿಯೋಜಿಸಲಾಗುತ್ತಿದೆ. 20 ರಿಂದ 25 ಸಾವಿರ ವೇತನದಲ್ಲಿ ಮನೆ ಬಾಡಿಗೆ, ಕುಟುಂಬ ನಿರ್ವಹಣೆ, ಆಸ್ಪತ್ರೆಗ ಹೋಗಿ ಬರುವ ವೆಚ್ಚವನ್ನೂ ನಿಭಾಯಿಸಬೇಕು. ಗುತ್ತಿಗೆ ಆಧಾರದಲ್ಲಿ ಇತರೆಡೆ ಕೆಲಸ ಮಾಡುವವರಿಗೆ ಹೆಚ್ಚಿನ ವೇತನ ಕೊಡಲಾಗುತ್ತಿದೆ.
ಕೊರೋನಾ ಆರಂಭವಾದಾಗಿನಿಂದ ಆಯುಶ್ ವೈದ್ಯರ ಸಮಸ್ಯೆ ಹೆಚ್ಚಿದೆ. ಆಸ್ಪತ್ರೆಗೆ ಹೋಗಿ ಬಂದು ಕುಟುಂಬ ಸದಸ್ಯರ ಸುರಕ್ಷತೆಯನ್ನೂ ನೋಡಿಕೊಳ್ಳಬೇಕು. ಇದರ ವೆಚ್ಚವೂ ದಿನದಿಂದ ದಿನಕ್ಕೆ ಗಗನಮುಖಿಯಾಗಿದೆ. ಆದರೆ ವೇತನ ಮಾತ್ರ ದಶಕಗಳ ಹಿಂದೆ ನಿಗದಿ ಮಾಡಿದ್ದನ್ನೇ ಕೊಡಲಾಗುತ್ತಿದೆ.
ಆಯುಶ್ ವೈದ್ಯರಿಗೆ ಸೇವಾ ಭದ್ರತೆ, ಸಮರ್ಪಕ ವೇತನ ಕಲ್ಪಿಸದಿದ್ದಲ್ಲಿ ಜುಲೈ-20 ರ ನಂತರ ಸಾಮೂಹಿಕ ರಾಜಿನಾಮೆ ನೀಡಲು ಸಂಘದ ಪ್ರಮುಖರು ತೀರ್ಮಾನ ತೆಗೆದುಕೊಂಡಿದ್ದಾರಂತೆ.
ಸುಪ್ರಿಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ, ಸೇವೆ ಖಾಯಂ ಗೊಳಿಸದೆ, ಕೋವಿಡ್ 19 ಸೊಂಕಿತರಿಗೆ ಚಿಕಿತ್ಸೆ ಕೊಡುವ ಆಯುಶ್ ವೈದ್ಯರಿಗೆ ವಿಮೆ ಸೇರಿದಂತೆ ಯಾವುದೇ ಸವಲತ್ತು ಕೊಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ನೋವಿನ ವಿಚಾರ ಎಂದು ವೈದ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸೋಮವಾರದವರೆಗೆ ಸಚಿವರು ಕಾಲಾವಕಾಶ ನೀಡುವಂತೆ ಕೇಳಿದ್ದಾರೆ. ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನಿಡಿದ್ದಾರೆ. ಸರ್ಕಾರ ಆಯುಶ್ ವೈದ್ಯರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸಾಮೂಹಿಕವಾಗಿ ರಾಜಿನಾಮೆ ಕೊಡಲಾಗುವುದು ಎಂದು ಆಯುಶ್ ವೈದ್ಯರು ಎಚ್ಚರಿಸಿದ್ದಾರೆ.
ಪಾವಗಡ ತಾಲ್ಲೂಕಿನಲ್ಲಿ 10 ಮಂದಿ ಆಯುಶ್ ವೈದ್ಯರಿದ್ದು ಸರ್ಕಾರ ವೈದ್ಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ವೈದ್ಯ ಮಂಜುನಾಥ್, ರಾಜೇಶ್ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದರು.
ವೈದ್ಯ ಲಿಂಗರಾಜು, ರವಿರಾಜ್, ಎಚ್. ಹರ್ಷಿತ, ಅನಿಲ್, ತಿಪ್ಪೆಸ್ವಾಮಿ, ಮಾರುತಿ, ಅನಿಲ್ ಕುಮಾರ್, ರಜಿಯಾ ಉಪಸ್ಥಿತರಿದ್ದರು.