ಸಂಚಲನ
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಬಾಣದ-ದೇವರಹಟ್ಟಿ ಮತ್ತು ಸೊಂಡೇನಹಳ್ಳಿ ಮಧ್ಯಭಾಗದ ಸರ್ವೆ ನಂಬರ್ 11/3’ರಲ್ಲಿ ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ಕಂದಾಯ ಅಧಿಕಾರಿಗಳು ಪಹಣಿ ಬದಲು ಮಾಡಿ ರೈತರಿಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸದರಿ ಜಮೀನಿನಲ್ಲಿ ಸುಮಾರು ಅರವತ್ತು ಎಪ್ಪತ್ತು ವರ್ಷಗಳಿಂದಲೂ ಉಳುಮೆ ಮಾಡಿಕೊಂಡು ಬಂದಿರುವ ಜಮೀನಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ, ಪಹಣಿ ಬದಲು ಮಾಡಿಕೊಂಡಿದ್ದಾರೆ. ಇದು ರೈತರಿಗೆ ಮಾಡಿದ ಅನ್ಯಾಯ ಎಂದು ರೈತ ಪಾಂಡುಕುಮಾರ್ ಆರೋಪಿಸುತ್ತಾರೆ.
ಈ ಸರ್ವೆ ನಂಬರ್’ನಲ್ಲಿ ನಾಲ್ಕು ಮಂದಿ ರೈತರು ಅನುಭೋಗದಲ್ಲಿದ್ದು, ಕಳೆದ 75 ವರ್ಷಗಳಿಂದಲೂ ಅವರಿಗೆ ಜಮೀನನ್ನು ಖಾತೆ ಮಾಡಿಕೊಡದೆ ಅಧಿಕಾರಿಗಳು ಸತಾಯಿಸಿದ್ದಾರೆ. ಖಾತೆ ಮಾಡಿಕೊಡಲು ಕಾಲ ಕಾಲಕ್ಕೆ ಬಂದುಹೋದ ಅಧಿಕಾರಿಗಳು ಉದ್ದಕ್ಕೂ ಲಂಚದ ಬೇಡಿಕೆ ಇಡುತ್ತಲೇ ಬಂದಿದ್ದರು. ಬಡ ರೈತರು ಲಂಚ ನೀಡದಿದ್ದ ಕಾರಣ ಈ ಜಮೀನನ್ನು ಈಗ ಸರ್ಕಾರಿ ಆಶ್ರಯ ಯೋಜನೆಗೆ ಮಂಜೂರು ಮಾಡಿದ್ದೇವೆಂದು ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ ಎಂದು ರೈತ ಪಾಂಡುಕುಮಾರ್, ಶಶಿಧರ್ ಮತ್ತು ಬಾಣೇಶ್’ರವರು ಮಾಧ್ಯಮಗಳ ಎದುರು ತಮ್ಮ ನೋವನ್ನು ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಬಗರ್’ಹುಕುಂ ಕಮಿಟಿ ರಚನೆಯಾಗಿದ್ದು, ಇದುವರೆಗೂ ಯಾವುದೇ ಸಭೆ ನಡೆದಿಲ್ಲ. ಆದರೆ ಅಧಿಕಾರಿಗಳು ಸಭೆಯಲ್ಲಿ ನಿಮಗೆ ಮಂಜೂರಾಗುವಂತೆ ಶಿಫಾರಸ್ಸು ಮಾಡಿದ್ದೇವೆ ಎಂದು ರೈತರಿಗೆ ಸುಳ್ಳು ಹೇಳಿ ಈಗ ಈ ಜಮೀನನ್ನು ಆಶ್ರಯ ಯೋಜನೆಗೆ ಕಾಯ್ದಿರಿಸಿರುತ್ತಾರೆ. ಇದು ರೈತರಿಗೆ ಮಾಡಿದ ಮೋಸವೇ ಹೌದು. ಯಾಕೆಂದರೆ, ಇಲ್ಲಿನ ರೈತರೆಲ್ಲ ಕಾಲಂ 57’ರಲ್ಲಿ ಹಣ ಕಟ್ಟಿ, ಪ್ರಸಿದ್ಧಿ ಪಡೆದುಕೊಂಡಿದ್ದೆವು. ಆ ದಾಖಲೆಗಳನ್ನೂ ಸಹ ಈ ಕಂದಾಯಾಧಿಕಾರಿಗಳು ನಾಶಗೊಳಿಸಿ, ನಮ್ಮ ರೈತರ ಜಮೀನನ್ನು ಆಶ್ರಯ ಯೋಜನೆಗೆ ಮುಡಿಪು ಒಪ್ಪಿಸಿರದ್ದಾರೆ ಎಂದು ರೈತರು ತಮ್ಮ ಆಕ್ರೋಶಗೊಂಡರು.
ಮೂಲತಃ ಸರ್ಕಾರಿ ಬಂಜರು ಎಂದು ಪಹಣಿಯಿದ್ದ ಸದರಿ ಜಮೀನನ್ನು ಈಗ ಆಶ್ರಯ ಯೋಜನೆ ಎಂದು ಪಹಣಿ ಬದಲು ಮಾಡಲಾಗಿದೆ ಅಷ್ಟೆ. ಇದು ಸರ್ಕಾರಿ ಉದ್ದೇಶಕ್ಕಾಗಿ ಮತ್ತು ಸಾರ್ವಜನಿಕ ವಸತಿ ಉದ್ದೇಶಕ್ಕಾಗಿ ಮೀಸಲಿಟ್ಟಿರುವುದು. ಜಿಲ್ಲಾಧಿಕಾರಿಗಳ ಆದೇಶದನ್ವಯ ಅದೀಗ ಗೋಡೇಕೆರೆ ಗ್ರಾಮ ಪಂಚಾಯತಿ ಆಶ್ರಯ ಯೋಜನೆಯ ವಸತಿ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿರುವ ಜಮೀನು. ಪ್ರತಿಯೊಂದು ಗ್ರಾಮದಲ್ಲೂ ಸಮೀಪದಲ್ಲೇ ಇರುವ ಸರ್ಕಾರಿ ಬಂಜರು ಜಮೀನಿನ ಸರ್ವೆ ನಂಬರುಗಳನ್ನು ಶೋಧಿಸಿ, ಅವನ್ನೆಲ್ಲ ಆಯಾಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶ್ರಯ ಯೋಜನೆ ವಸತಿ ನಿರ್ಮಾಣದ ಉದ್ದೇಶಕ್ಕಾಗಿ ಕಾಯ್ದಿರಿಸಲಾಯಿತು. ಇದು ಆಗ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಶ್ರೀನಿವಾಸ್ ‘ರವರ ಆದೇಶದನ್ವಯ ಕಾಯ್ದಿರಿಸಲಾಗಿರುವುದು. ಇದರಲ್ಲಿ ರೈತರಿಗೆ ಅನ್ಯಾಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಇಲ್ಲಿ ಯಾವ ಅಧಿಕಾರಿಯೂ ರೈತರ ಎದುರು ಲಂಚಕ್ಕೆ ಬೇಡಿಕೆ ಇಟ್ಟಿಲ್ಲ. ಇದು ಅಪ್ಪಟ ಸುಳ್ಳು. ಅದೇ ರೀತಿ,
ಅನುಭೋಗದಲ್ಲಿರುವವರು ಮಂಜೂರಾತಿಗೆ ಅರ್ಜಿ ಹಾಕಿ ಅವರ ಅರ್ಜಿಗಳು ತಿರಸ್ಕೃತವೂ ಆಗಿವೆ. ಅನುಭೋಗಸ್ಥರ ಕುಟುಂಬಗಳು ಐದಾರು ಎಕರೆಗಳಷ್ಟು ಜಮೀನು ಹೊಂದಿದ್ದು, ಈ ಸರ್ಕಾರಿ ಜಮೀನನ್ನೂ ಉಳುಮೆ ಮಾಡಿಟ್ಟುಕೊಂಡಿದ್ದರು. ಅವರ ಬಳಿ ಸೂಕ್ತ ದಾಖಲೆಗಳಿದ್ದಲ್ಲಿ ಅವರು ಜಮೀನಿನ ಅನುಭೋಗದಲ್ಲಿರುತ್ತಿದ್ದರು. ಆದರೆ ಈ ಜಮೀನು ಮೂಲತಃ ಸರ್ಕಾರಿ ಬಂಜರು. ಈಗದು ನೂರಾರು ಜನ ಬಡವರಿಗೆ, ವಸತಿ ವಂಚಿತರಿಗೆ ಆಶ್ರಯ ಯೋಜನೆಯ ವಸತಿಗಳನ್ನು ಒದಗಿಸಿಕೊಡಲಿದೆ.
__ನವೀನ್, ಕಂದಾಯಾಧಿಕಾರಿ, ಶೆಟ್ಟಿಕೆರೆ ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು
ಮುಖ್ಯಾಂಶಗಳು ::
*ಮೂಲತಃ ಅದು ಸರ್ಕಾರಿ ಬಂಜರು
*75 ವರ್ಷಗಳಿಂದ ರೈತರು ಉಳುಮೆ ಮಾಡುತ್ತಿದ್ದ ಜಾಗ
*ಸರ್ಕಾರಿ ಉದ್ದೇಶಕ್ಕಾಗಿ ಆಶ್ರಯ ಯೋಜನೆಗೆ ಪಹಣಿ ಮಾಡಲಾಗಿದೆ
*ಅಧಿಕಾರಿಗಳಿಂದ ರೈತರಿಗೆ ಅನ್ಯಾಯ ಆಗಿದೆ
*ಮೂಲತಃ ಅದು ಸರ್ಕಾರಿ ಬಂಜರು. ಈಗದು ಸರ್ಕಾರಿ ಉದ್ದೇಶದ ಆಶ್ರಯ ಯೋಜನೆ ವಸತಿ ಪ್ರದೇಶ.