ಶಾಲಾ ಪೂರ್ವ ಶಿಕ್ಷಣವನ್ನು ಅಂಗನವಾಡಿಗಳಲ್ಲೇ ಆರಂಭಿಸುವಂತೆ ಒತ್ತಾಯಿಸಿ ಕೈಗೊಂಡಿದ್ದ ಪಾದಯಾತ್ರೆಗೆ ಪೊಲೀಸರು ತಡೆಯೊಡ್ಡಿರುವುದರಿಂದ ಅಂಗನವಾಡಿ ನೌಕರರು ತುಮಕೂರಿನ ಗಾಜಿನಮನೆಯಲ್ಲೇ ಧರಣಿ ಮುಂದುವರಿಸಿದ್ದಾರೆ.
ರಾಜ್ಯ ಸರ್ಕಾರ ಅಂಗನವಾಡಿ ನೌಕರರ ಸಂಘದ ನಿಯೋಗದ ಜೊತೆ ಮಾತುಕತೆ ನಡೆಸದೆ ಕೇವಲ ಮನವಿ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಸರ್ಕಾರದ ವಿರುದ್ದ ಘೋಷಣೆಗಳು ಮೊಳಗುತ್ತಿವೆ.
ರಾತ್ರಿ ಇಡೀ ಗಾಜಿನಮನೆಯ ಆವರಣದಲ್ಲಿ ಅಂಗನವಾಡಿ ನೌಕರರು ಚಳಿಗಾಳಿ ಎನ್ನದೆ ನಿದ್ರಿಸಿದರು. ಇಂದು ಮುಂಜಾನೆಯೂ ಕೂಡ ರಾಜ್ಯದ ವಿವಿಧ ಭಾಗಗಳಿಂದ ಅಂಗನವಾಡಿ ನೌಕರರು ತುಮಕೂರಿಗೆ ಧಾವಿಸುತ್ತಿದ್ದುದು ಕಂಡು ಬಂತು.
ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪಾದಯಾತ್ರೆ-ಧರಣಿ ಕೈಬಿಡುವುದಿಲ್ಲ. ಏನೇ ಬರಲಿ ಒಗ್ಗಟ್ಟಿನಿಂದ ಇರುತ್ತೇವೆ ಎಂದು ಒಕ್ಕೊರಲ ಘೋಷಣೆ ಕೂಗಿದರು.
ಇಂದು ಬೆಳಗ್ಗೆ ಹಳೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಂದರೆ ಅಮಾನಿಕೆರೆ ರಸ್ತೆಯಲ್ಲಿ ಅಂತನವಾಡಿ ತಾಯಂದಿರು ಗ್ಯಾಸ್ ಸಿಲೆಂಡರ್ ಗಳನ್ನು ಇಟ್ಟುಕೊಂಡು ಬೆಳಗಿನ ತಿಂಡಿ ತಯಾರಿಸಿ ತಿನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ದಾಬಸ್ ಪೇಟೆಯ ಸಂಘಟನೆಯೊಂದು ಎಲ್ಲಾ ಅಂಗನವಾಡಿ ನೌಕರರಿಗೆ ಹಾಲಿನ ವ್ಯವಸ್ಥೆ ಮಾಡಿತ್ತು.
ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಬಳಿ ಅಂಗನವಾಡಿ ನೌಕರರು ತಿಂಡಿ ತಯಾರಿಸಿಕೊಳ್ಳುತ್ತಿದ್ದರೆ ಪೊಲೀಸರು ಅಡ್ಡಿಪಡಿಸಿದರು. ವಾಹನಗಳನ್ನು ಬೇರೆಡೆ ನಿಲ್ಲಿಸುವಂತೆ ತಗಾದೆ ತೆಗೆದರು. ಆದರೆ ಅಂಗನವಾಡಿ ನೌಕರರು ಶಾಂತವಾಗಿಯೇ ತಿಂಡಿ ತಯಾರಿಕೆಯಲ್ಲಿ ತೊಡಗಿದ್ದರು.
ಪ್ರತಿಭಟನಾ ಧರಣಿ ಸ್ಥಳದಲ್ಲಿ ಇಬ್ಬರು ಅಂಗನವಾಡಿ ನೌಕರರ ಮೊಬೈಲ್ ಗಳು ಕಳೆದು ಹೋಗಿವೆ. ಧರಣಿ ನಡೆಯುತ್ತಿರುವ ಸ್ಥಳಕ್ಕೆ ಹೊರಗಿನಿಂದ ಕೆಲವರು ಬರುತ್ತಿದ್ದು ಅವರು ಈ ಕೈಚಳಕ ಮಾಡಿದ್ದಾರೆ ಎನ್ನಲಾಗುತ್ತಿದೆ. ಮೊಬೈಲ್ ಗಳು ಮತ್ತು ಬೇರೆ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ ಪ್ರಕಟಿಸಲಾಗುತ್ತಿತ್ತು.