ಪಾವಗಡ: ಶಿಲಾನ್ಯಾಸದಲ್ಲಿ ಹೆಸರು ಹಾಕಿಸಿಕೊಳ್ಳುವ ತರಾತುರಿಯಲ್ಲಿ ತಾಲ್ಲೂಕಿನ ಕಣಿವೇನಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯ ಭವನವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರೆ ಉದ್ಘಾಟಿಸಿದ್ದಾರೆ.
ಸಮುದಾಯ ಭವನದ ಉದ್ಘಾಟನೆಗೆ ಲೋಕಸಭೆ ಸದಸ್ಯ ಎ.ನಾರಾಯಣಸ್ವಾಮಿ ಅವರೊಬ್ಬರನ್ನು ಅಧ್ಯಕ್ಷೆ ಪತಿ ಆಹ್ವಾನಿಸಿದ್ದರು. ಗ್ರಾಮದಲ್ಲಿನ ಗೊಂದಲದ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಸಂಸದರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಉದ್ಘಾಟನೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಜನಾಂಗದ ಸ್ವಾಮೀಜಿ, ಮುಖಂಡರನ್ನು ಕರೆಸಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ಅವಕಾಶ ಕೊಡಬೇಕು ಎಂದು ಗ್ರಾಮಸ್ಥರು ಸಂಸದರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಸದರು ಸಮ್ಮತಿ ಸೂಚಿಸಿ ಎಲ್ಲರೂ ಒಪ್ಪಿ ಆಹ್ವಾನ ನೀಡಿದಾಗ ಮತ್ತೊಮ್ಮೆ ಬಂದು ಉದ್ಘಾಟನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಸಮುದಾಯದವರಿಗೆ ಮಾಹಿತಿ ನೀಡದೆ ಏಕಾ ಏಕಿ ಉದ್ಘಾಟನಾ ಕಾರ್ಯಕ್ರಮ ನಿಗದಿ ಮಾಡಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪತಿಯನ್ನು ತರಾಟೆಗೆ ತೆಗೆದುಕೊಂಡು ಸ್ಥಳದಿಂದ ನಿರ್ಗಮಿಸಿದ್ದಾರೆ.
ಲೋಕ ಸಭೆ ಸದಸ್ಯರು ಗ್ರಾಮದಿಂದ ಹೊರಟ ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರೆ ಸಮುದಾಯ ಭವನದ ಉದ್ಘಾಟನೆ ಮಾಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾರೆ ಎಂದು ಗ್ರಾಮದ ಯುವಕರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಕೆಯ ಪತಿ ಗ್ರಾಮಸ್ಥರನ್ನು ನಿಂದಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದ್ದು, ಸಮುದಾಯ ಭವನದ ಶಿಲಾ ಫಲಕದಲ್ಲಿ ಹೆಸರು ಹಾಕಿಸಲು ತರಾತುರಿಯಲ್ಲಿ ಕಾರ್ಯಕ್ರಮ ನಿಗದಿಗೊಳಿಸಲಾಗಿದೆ. ಗ್ರಾಮದಲ್ಲಿ ಅಧ್ಯಕ್ಷೆಯನ್ನು ಹೊರತುಪಡಿಸಿ 5 ಮಂದಿ ಸದಸ್ಯರಿದ್ದು ಅವರಿಗೂ ಮಾಹಿತಿ ನೀಡಿಲ್ಲ. ಅಧಿಕಾರಿಗಳು ಜನಾಂಗದ ಮುಖಂಡರು ಯಾರಿಗೂ ಮಾಹಿತಿ ನೀಡದೆ ತ್ವರಿತವಾಗಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆರೋಪಿಸಿದರು.
ಮತ ಹಾಕಿ ಗೆಲ್ಲಿಸಿದ ಜನತೆ ಬಗ್ಗೆ ಗೌರವವಿಲ್ಲ. ಕಾರ್ಯಕ್ರಮದ ಬಗ್ಗೆ ಸೌಜನ್ಯಕ್ಕೂ ಮಾಹಿತಿ ನೀಡಿಲ್ಲ. ಮಾಹಿತಿ ನೀಡದೆ ಸ್ವಾರ್ಥಕ್ಕಾಗಿ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದವರನ್ನು ಸಾರ್ವಜನಿಕವಾಗಿ ನಿಂದಿಸಲಾಗಿದೆ. ಶಿಷ್ಠಾಚಾರ ಉಲ್ಲಂಘಿಸಿ ಉದ್ಘಾಟನೆ ಮಾಡಿರುವ ಅಧ್ಯಕ್ಷೆ ಹಾಗೂ ಆಕೆಯ ಪತಿಯ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮದ ಮಲ್ಲಿಕಾರ್ಜುನ್, ರವಿ, ಅಶ್ವಥ್ ನಾರಾಯಣ, ಶಂಕರಪ್ಪ, ಅಂಜಿನಪ್ಪ, ಮಾರಪ್ಪ ನಾಯಕ, ರಮೇಶ್ ಆಗ್ರಹಿಸಿದ್ದಾರೆ.