ಪಾವಗಡ: ತಾಲ್ಲೂಕಿನ ಖಾಸಗಿ ಶಾಲೆಗಳಲ್ಲಿ ಪ್ರವಾಸದ ಹೆಸರಿನಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆ ಆರಂಭವಾಗುವಾಗ ಶುಲ್ಕದ ಹೆಸರಿನಲ್ಲಿ 20 ರಿಂದ 40 ಸಾವಿರ ರೂಪಾಯಿ ಹಣ ವಸೂಲಿ ಮಾಡುತ್ತಾರೆ. ಕಾರ್ಯಕ್ರಮಗಳಿಗೆ, ಪುಸ್ತಕ, ಸಮವಸ್ತ್ರ ಹೀಗೆ ಪ್ರತಿಯೊಂದಕ್ಕೂ ಹಣ ದೋಚುತ್ತಾರೆ. ಡಿಸೆಂಬರ್, ಜನವರಿ ಮಾಹೆಯಲ್ಲಿ ಹತ್ತಿರದ ಮಾರಿಕಣಿವೆ, ಚಿತ್ರದುರ್ಗ ಇತರೆ ಪ್ರದೇಶಗಳಿಗೆ ಪ್ರವಾಸದ ನೆಪದಲ್ಲಿ ಮನಬಂದಂತೆ ಪೋಷಕರಿಂದ ಹಣ ವಸೂಲಿಮಾಡಲಾಗುತ್ತಿದೆ ಎಂದು ಪಟ್ಟಣದ ವೆಂಕಟೇಶ್, ಸುಮಲತಾ, ನರಸಿಂಹ ಆರೋಪಿಸಿದ್ದಾರೆ.
ಚಳ್ಳಕೆರೆ ಮಾರ್ಗದಲ್ಲಿರುವ ಖಾಸಗಿ ಶಾಲೆಯೊಂದರಿಂದ 100 ಕಿ.ಮೀ ದೂರದ ಹಿರಿಯೂರಿನ ಮಾರಿಕಣಿವೆಗೆ 150 ಮಂದಿ ವಿದ್ಯಾರ್ಥಿಗಳನ್ನು ಎರಡು ಬಸ್ ನಲ್ಲಿ ಕರೆದೊಯ್ಯಲಾಗಿದೆ. ಪ್ರತಿ ವಿದ್ಯಾರ್ಥಿಯಿಂದ 600 ರೂಪಾಯಿ ವಸೂಲಿ ಮಾಡಿದ್ದಾರೆ. ಸುಮಾರು 90 ಸಾವಿರ ವಸೂಲಿಯಾಗಿದೆ. ಇಷ್ಟೊಂದು ಹಣ ಪ್ರವಾಸಕ್ಕೆ ಖರ್ಚಾಗುತ್ತದೆಯೇ? ಉಳಿಕೆ ಹಣ ಯಾರ ಜೇಬಿಗೆ ಸೇರುತ್ತದೆ?. ಇದು ಹಗಲು ದರೋಡೆಯೇ ಸರಿ ಎಂದು ಅಳಲು ತೋಡಿಕೊಂಡಿದ್ದಾರೆ.
ಬಸ್ ಒಂದರಲ್ಲಿ 75 ಮಂದಿಯನ್ನು ಕುರಿಮಂದೆಯಂತೆ ಕೂಡಿಕೊಂಡು ಹೋಗುವ ಇವರು ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ಶಿಕ್ಷಣ ಇಲಾಖೆಯ ಅನುಮತಿಯನ್ನೂ ತೆಗೆದುಕೊಂಡಿಲ್ಲ. ಶಾಲೆಗಳು ವ್ಯಾಪಾರ ಕೇಂದ್ರಗಳಂತಾಗಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಈ ಬಗ್ಗೆ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಪ್ರತಿಕ್ರಿಯಿಸಿ, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಅನುಮತಿ ತೆಗೆದುಕೊಳ್ಳುತ್ತಿದ್ದಾರೆ. ಖಾಸಗಿ ಶಾಲೆಯವರು ಅನುಮತಿ ತೆಗೆದುಕೊಳ್ಳಬೇಕು. ಪೋಷಕರಿಂದ ಹೆಚ್ಚಿನ ಹಣ ವಸೂಲಿ ಮಾಡಬಾರದು ಜೊತೆಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಪಬ್ಲಿಕ್ ಸ್ಟೋರಿ ಗೆ ತಿಳಿಸಿದರು.