ತುಮಕೂರು: ಕನ್ನಡ ಬಳಸಿದರೆ ಕನ್ನಡ ಉಳಿಯಲಿದೆ. ಹಾಗೆಯೇ, ಕನ್ನಡ ಅನ್ನ ಕೊಡುವ ಭಾಷೆಯಾದರೆ ಮಾತ್ರ ಉಳಿಯಲು ಸಾಧ್ಯ ಎಂದು ಸುಧಾ ವಾರಪತ್ರಿಕೆ, ಮಯೂರ ಮಾಸ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ್ ಹೇಳಿದರು.
ಅವರು ಇಲ್ಲಿನ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಶೇಕಡಾ 50 ರಷ್ಟು ಭಾಷೆ ನಾಶವಾಗುತ್ತವೆ ಎಂದು ಭಾಷಾ ವಿಜ಼್ಞಾನಿಗಳು ಹೇಳುತ್ತಾರೆ. ಆದರೆ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾದಾಗ ಮಾತ್ರ ಭಾಷೆ ಮೃತವಾಗುತ್ತವೆ. ಬಳಕೆಯಲ್ಲಿರುವ ಯಾವ ಭಾಷೆಯೂ ಮೃತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕನ್ನಡದ ವಿದ್ಯಾರ್ಥಿಗಳೆಲ್ಲ ಕನ್ನಡದ ದೀಪದ ಹಾಗೆ ಕಾಣುತ್ತೀರಿ. ಭಾಷೆಯನ್ನು ನಾವು ಉಳಿಸುವುದಲ್ಲ, ನಮ್ಮ ಉಳಿವಿಗಾಗಿ ಭಾಷೆಯನ್ನು ಉಳಿಸಬೇಕು ಎಂದರು.
ಕನ್ನಡ ಅನ್ನದ ಭಾಷೆ ಕೂಡ ಆಗಬೇಕು. ಹೆಚ್ಚು ಹೆಚ್ಚು ಕನ್ನಡದಲ್ಲಿ ಓದಿದವರಿಗೆ ಉದ್ಯೋಗ ಸೃಷ್ಟಿಯಾಗಬೇಕು.
ಭಾಷೆಯನ್ನ ಬಳಸುವುದರ ಜೊತೆಗೆ ಭಾಷೆಯಲ್ಲಿಯೇ ತಂತ್ರಜ್ಞಾನವನ್ನು ಸೃಷ್ಟಿಸಿ ಅದೇ ತಂತ್ರಜ್ಞಾನ ವನ್ನು ಬಳಸುವಂತಹ ಸ್ವಾವಲಂಬಿಗಳಾಗಬೇಕು ಎಂದರು.
ಗೆದ್ದರೆ ಗೆಲ್ಲಬೇಕು, ಬಾಹುಬಲಿಯಂತೆ, ಬಿಟ್ಟುಕೊಡುವುದರಿಂದ. ನಮ್ಮ ಬಲ ಪ್ರದರ್ಶನ, ಅಧಿಕಾರ ಪ್ರದರ್ಶನದಿಂದ ಅಲ್ಲ. ತ್ಯಾಗ ಮಾಡುವುದರಿಂದ ಗೆಲ್ಲಬೇಕು. ಏನಾದರೂ ಆಗಿ ಮೊದಲು ಒಳ್ಳೆಯ ಓದುಗರಾಗಿ ಎಂದರು. ಒಳ್ಳೆಯ ಓದುಗರಾದರೆ ಒಳ್ಳೆಯ ವ್ಯಕ್ತಿತ್ವ ನಿಮ್ಮದಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗದೀಶ ಜಿ ಟಿ ಅವರು ” ನಮ್ಮ ಮಾತೃ ಭಾಷೆಗೆ ಘನತೆ ತರುವಂತೆ ನಾವೆಲ್ಲರೂ ಭಾಷೆಯಲ್ಲಿರುವ ಒಳ್ಳೆಯ ಪದಗಳನ್ನು ಮಾತನಾಡಬೇಕು. ಒಳ್ಳೆಯ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕು. ಅಂದು ನಿಜವಾಗಿ ಭಾಷೆಗೆ ಗೌರವ ಸಲ್ಲುತ್ತದೆ ಎಂದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಡಾ. ಶ್ವೇತಾರಾಣಿ ಹೆಚ್ ಅವರು ” ಕನ್ನಡನಾಡಿನಲ್ಲಿ ನಾವಿದ್ದರೆ ಸಾಲದು ಕನ್ನಡ ನಮ್ಮೊಳಗೆ ಇದ್ದಾಗ ಮಾತ್ರ ನಮ್ಮ ಜೀವನ ಸಾರ್ಥಕವೆನಿಸುತ್ತದೆ ಎಂದರು. ಉಪನ್ಯಾಸಕಿರಾದ ಕಿಮ್ ಶುಖ, ವಿಜಯಲಕ್ಷ್ಮಿ ಉಪಸ್ಥಿತರಿದ್ದರು.