Publicstory. in
ತುಮಕೂರು: ಕರೊನಾ ಭಯದಿಂದ ತತ್ತರಿಸುತ್ತಿರುವ ಜನರಿಗೆ ಧೈರ್ಯ ತುಂಬುವ ಕೆಲಸವನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಂದುವರೆಸಿರುವ ಮಾಜಿ ಶಾಸಕ ಸುರೇಶ ಗೌಡರು ಸೋಮವಾರ ಸಾವಿರಾರು ಕುಟಬಗಳನ್ನು ಭೇಟಿ ಮಾಡಿ ಜಾಗೃತಿ ಮೂಡಿಸಿದರು.
ಹೆಬ್ಬೂರು ಹೋಬಳಿ ಕಣಕುಪ್ಪೆ, ನಿಡವವಳು ಪಂಚಾಯಿತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಸಭೆ ನಡೆಸಿ ರೋಗದ ವಿರುದ್ದ ಕೈಗೊಳ್ಳಬೇಕಾದ ಎಚ್ಚರಿಕೆಯ ಬಗ್ಗೆ ಅರಿವು ಮೂಡಿಸಿದರು.
ಸುಮಾರು 3500 ಕುಟುಂಬಕ್ಕೆ ಒಂದೇ ದಿನ ಮಾಸ್ಕ್ ವಿತರಿಸಿದರು. ಅಷ್ಟೇ ಅಲ್ಲದೇ ಪಡಿತರ ಚೀಟಿ ಹೊಂದಿರದ ಕುಟುಂಬಗಳಿಗೆ ಹದಿಮೂರು ಬಗೆಯ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು.
ಕ್ಷೇತ್ರದಲ್ಲಿ ನೀರಿನ ಸಮಸ್ಯೆಯ ಅರಿವು ಇದೆ. ಈ ಸಲ ಹೇಮಾವತಿ ನೀರಿನಿಂದ ಎಲ್ಲ ಕೆರೆಗಳನ್ನು ತುಂಬಿಸಲು ಸಾಧ್ಯವಾಗದ ಕಾರಣ ಅಂತರ್ಜಲವೂ ಕಡಿಮೆಯಾಗಿದೆ. ಇದರ ನಡುವೆ ಕರೊನಾ ಕಷ್ಟ ತಂದಿದೆ. ಕ್ಷೇತ್ರದ ಜನರ ಕಷ್ಟದ ಅರಿವು ಇದೆ. ಹೀಗಾಗಿಯೇ ಲಾಕ್ ಡೌನ್ ಆದಾಗಿನಿಂದಲೂ ಜನರೊಟ್ಟಿಗೆ ನಿಂತಿದ್ದೇನೆ ಎಂದರು.
ಕಣಕುಪ್ಪೆಯಲ್ಲಿ ಮಾತನಾಡಿದ ಅವರು, ಮುಂದುವರಿದ ದೇಶಗಳಲ್ಲೇ ಕರೊನಾ ನಿಯಂತ್ರಿಸಲು ಸಾಧ್ಯವಾಗಿಲ್ಲ. ಔಷಧಿ ಕೊರತೆ ಕಾಡುತ್ತಿದೆ. ಆದರೆ ದೇಶ, ರಾಜ್ಯದಲ್ಲಿ ರೋಗ ನಿಯಂತ್ರಣದಲ್ಲಿ ಉತ್ತಮ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಅರೋಗ್ಯ, ಪ್ರತಿ ದಿನದ ಜೀವನ ನಿರ್ವಹಣೆಗೆ ಯಾರಿಗೆ ಏನೇ ತೊಂದರೆಯಾದರೂ ನನ್ನ ಗಮನಕ್ಕೆ ತಂದರೆ ಬಗೆಹರಿಸಿಕೊಡುತ್ತೇನೆ. ಇದಕ್ಕಾಗಿ ಎಲ್ಲ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರ ಪಡೆಯೂ ಇದೆ. ಯಾರೂ ಹೆದರಬೇಕಿಲ್ಲ ಎಂದು ಹೇಳಿದರು.
ಉಳ್ಳದವರಿಗೆ ನೆರವು ನೀಡಬೇಕು ಎಂದು ಸಲಹೆ ನೀಡಿದರು.