ತುಮಕೂರು ಜಿಲ್ಲೆ ಸಾಕಷ್ಟು ಐತಿಹಾಸಿಕ ತಾಣಗಳಿಗೆ ಹೆಸರಾಗಿದೆ. ಪಾವಗಡ ತಾಲ್ಲೂಕು ನಿಡಗಲ್ ದುರ್ಗವನ್ನು ಐತಿಹಾಸಿಕ ಸ್ಮಾರಕಗಳ ಗಣಿ ಎಂದೇ ಕರೆಯಲಾಗುತ್ತದೆ.
ಇದಕ್ಕೆ ಪುಷ್ಠಿ ನೀಡುವಂತೆ ಪಾವಗಡ ತಾಲ್ಲೂಕಿನ ಕೆ.ಟಿ.ಹಳ್ಳಿ ಬಳಿಯ ಕಣಿವೆ ಸಿದ್ದಪ್ಪನ ದೇಗುಲದ ಬಳಿ ಶತಮಾನಗಳ ಹಿಂದಿನ ಶಿವಲಿಂಗ, ಶಿಲಾ ಶಾಸನ ಪತ್ತೆಯಾಗಿದೆ.
ತುಂಗಭದ್ರಾ ಯೋಜನೆಗಾಗಿ ಕಾಲುವೆ ತೆಗೆಯುವಾಗ ಶಿವಲಿಂಗ ಹಾಗೂ ಶಿಲಾ ಶಾಸನ ಸಿಕ್ಕಿದೆ. ಶಿವಲಿಂಗದ ಕೆಳಭಾಗದಲ್ಲಿ ಬೃಹತ್ ಗಾತ್ರದ ಬಂಡೆ ಇದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಕಣಿವೆ ಸಿದ್ದಪ್ಪನ ದೇಗುಲ ಪ್ರದೇಶ ನಿಡಗಲ್ ದುರ್ಗಕ್ಕೆ ಪ್ರವೇಶ ಧ್ವಾರ ಎಂದು ಹೇಳಲಾಗುತ್ತದೆ. ನಿಡಗಲ್ ದುರ್ಗವನ್ನು ಆಳ್ವಿಕೆ ನಡೆಸಿದ ಚೋಳರ ಕಾಲದಲ್ಲಿ ಶಿವ ದೇಗುಲ ನಿರ್ಮಿಸಬಹುದು. ಈ ಸ್ಥಳದಲ್ಲಿ ಸಿಕ್ಕಿರುವ ಶಿಲಾ ಶಾಸನದಲ್ಲಿ ಅಕ್ಷರಗಳು ಮಸುಕಾಗಿವೆ ಲಿಂಗದ ಗುರುತು ಕಾಣುತ್ತದೆ. ಇದು ಸುಮಾರು 13 ನೇ ಶತಮಾನದ ಕಾಲ ಘಟ್ಟಕ್ಕೆ ಸೇರಿದ್ದು ಇರಬಹುದು ಎಂದು ಅಂದಾಜಿಸಲಾಗುತ್ತಿದೆ.
ಸ್ಥಳೀಯರು, ಬೃಹತ್ ಬಂಡೆ ಕೆಳಗೆ ಮತ್ತೊಂದು ಶಿವಲಿಂಗ, ಇಲ್ಲವೇ ದೇಗುಲ ಇರಬಹುದು ಎನ್ನುತ್ತಿದ್ದಾರೆ. ಸಂಬಂಧಿಸಿದ ಇಲಾಖೆಯವರು ಸ್ಥಳದಲ್ಲಿ ಸಂಶೋಧನೆ ನಡೆಸಿದರೆ ಸತ್ಯಾಸತ್ಯತೆ ತಿಳಿಯಲಿದೆ. ಶೀಘ್ರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯೋನ್ಮುಖರಾಗಬೇಕು ಎನ್ನುತ್ತಿದ್ದಾರೆ.
ರಾಜರು ದೇಗುಲಕ್ಕೆ ದಾನ ಕೊಟ್ಟಿರುವ ಅಥವಾ ದೇಗುಲ ಜೀರ್ಣೋದ್ಧಾರ ಮಾಡಿಸಿರುವುದಕ್ಕೆ ಸಂಬಂಧಿಸಿದ ಶಿಲಾ ಶಾಸನ ಇದಾಗಿರಬಹುದು. ಚೋಳರು ಶಿವಾರಾಧಕರಾಗಿದ್ದು ಸಾಕಷ್ಟು ಶಿವ ದೇಗುಲಗಳನ್ನು ನಿರ್ಮಿಸಿದ್ದಾರೆ. ಸಿದ್ದಪ್ಪನ ದೇಗುಲದಲ್ಲಿ ಸಿಕ್ಕಿರುವ ಶಿವಲಿಂಗವೂ ಚೋಳರ ಕಾಲಕ್ಕ ಸೇರಿರಬಹುದು. ಆದರೆ ಈ ಬಗ್ಗೆ ಸಂಶೋಧನೆ ನಡೆಸಿದಲ್ಲಿ ಸಮಪೂರ್ಣ ಮಾಹಿತಿ ಸಿಗುತ್ತದೆ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.
ಪ್ರಾಚ್ಯ ಸಂಶೋಧನಾ ಇಲಾಖೆಯವರು ಶೀಘ್ರ ಸ್ಥಳದಲ್ಲಿ ಸಿಕ್ಕಿರುವ ಶಿವಲಿಂಗ, ಶಿಲಾ ಶಾಸನದ ಬಗ್ಗೆ ಸಂಶೋಧನೆ ನಡೆಸಬೇಕು. ಭೂಮಿಯಲ್ಲಿ ಹುದುಗಿರಬಹುದಾದ ಐತಿಹಾಸಿಕ ಸ್ಮಾರಕಗಳನ್ನು ಪತ್ತೆಹಚ್ಚಿ ಸ್ಥಳೀಯ ಇತಿಹಾಸವನ್ನು ಜನತೆಗೆ ತಿಳಿಸುವ ಕೆಲಸ ಮಾಡಬೇಕು ಎಂದು ಇದೇ ಗ್ರಾಮದವರಾದ ದಂತ ವೈದ್ಯ ಕೆ.ಎಚ್.ದೇವರಾಜು ಒತ್ತಾಯಿಸಿದ್ದಾರೆ.
ಶಿವಲಿಂಗ ವೀಕ್ಷಣೆ ಮಾಡಲು ಸುತ್ತಮುತ್ತಲ ನೂರಾರು ಮಂದಿ ಆಗಮಿಸುತ್ತಿದ್ದಾರೆ. ಕೆಲವರು ಶಿವಲಿಂಗಕ್ಕೆ ಹರಿಶಿನ, ಕುಂಕುಮ, ಹೂವುಗಳನ್ನು ಹಾಕಿ ಪೂಜಿಸುತ್ತಿದ್ದಾರೆ.