ಪಾವಗಡ ತಾಲ್ಲೂಕು ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಬ್ರಹ್ಮ ರಥೋತ್ಸವ ರದ್ದುಪಡಿಸಿದಾಗ್ಯೂ ಭಕ್ತಾದಿಗಳು ರಥದ ಶೆಡ್ ಗೆ ಪೂಜೆ ಸಲ್ಲಿಸಿ, ಮೂಲ ವಿಗ್ರಹದ ದರ್ಶನ ಪಡೆದರು.
ಸುಮಾತು 500 ವರ್ಷಗಳ ಇತಿಹಾಸವಿರುವ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲಕ್ಕೆ ತಮಿಳುನಾಡು, ಕೇರಳ, ರಾಜ್ಯದ ವಿವಿದೆಡೆ ಭಕ್ತಾದಿಗಳಿದ್ದಾರೆ. ಅಂತ್ಯ ಸುಬ್ರಹ್ಮಣ್ಯ ಸ್ವಾಮಿ ಎಂದು ಜನಪ್ರಿಯತೆ ಪಡೆದಿರುವ ದೇಗುಲದಲ್ಲಿ ಹರಕೆ ಹೊತ್ತರೆ ಕಿವಿ, ಕಣ್ಣು ಚರ್ಮದ ಸಮಸ್ಯೆ ಬಗೆಹರಿಯುತ್ತವೆ ಎಂಬ ನಂಬಿಕೆ ಭಕ್ತ ವಲಯದಲ್ಲಿದೆ.
ವರ್ಷದ ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳ ಷಷ್ಠಿಯಂದು ವಿಶೇಷ ಪೂಜೆ ನಡೆಯುತ್ತದೆ. ಜನವರಿ ಮಾಹೆಯ ಷಷ್ಠಿಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ.
ಷಷ್ಠಿಯಂದು ಅನ್ನದರಾಶಿಯ ಮೇಲೆ ಉತ್ಸವ ಮೂರ್ತಿಯನ್ನು ಇರಿಸಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ರಾಶಿ ಇಬ್ಬಾಗವಾಗುವುದು ಪವಾಡವೇ ಸರಿ. ಇದನ್ನು ಭಕ್ತಾದಿಗಳು ಪ್ರತ್ಯಕ್ಷವಾಗಿ ಕಣ್ತುಂಬಿಕೊಳ್ಳುತ್ತಾರೆ. ನಂತರ ಅನ್ನದ ರಾಶಿಯನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಈ ಬಾರಿ ಕೋವಿಡ್ ಹಿನ್ನೆಲೆ ಸರ್ಕಾರ ಸಾಕಷ್ಟು ನಿಯಮಾವಳಿ ರೂಪಿಸಿತ್ತು. ಆದರೂ ಪೂಜೆ, ನೈವೇದ್ಯ ಇತ್ಯಾದಿ ಸಾಂಪ್ರದಾಯಿಕ ವಿಧಿ ವಿಧಾನಗಳಿಗೆ ಅವಕಾಶ ನೀಡಲಾಗಿತ್ತು. ಪ್ರಸಾದ ವಿತರಣೆ ಮಾಡದಂತೆ ಇಲಾಖೆ ಸೂಚನೆ ನೀಡಿದ ಕಾರಣ ಪ್ರಸಾದ ವಿನಿಯೋಗ ನಡೆಯಲಿಲ್ಲ.
ರಥೋತ್ಸವ ನಡೆಯದಿದ್ದರೂ ರಥ ನಿಲ್ಲಿಸಿದ್ದ ಶೆಡ್ ನಲ್ಲಿಯೆ ಉತ್ಸವ ಮೂರ್ತಿ ಇರಿಸಿ ಅಲ್ಲಿಯೇ ಪೂಜೆ ಸಲ್ಲಿಸಲಾಯಿತು. ತಹಶೀಲ್ದಾರ್ ಕೆ.ಆರ್. ನಾಗರಾಜು ಅವರೊಂದಿಗೆ ದೇಗುಲ ಪ್ರಾಂಗಣದಲ್ಲಿ ಪ್ರಾಕಾರೋತ್ಸವ ನಡೆಸಲಾಯಿತು.
ಪ್ರಧಾನ ಅರ್ಚಕ ಪಿ.ಬದರಿನಾಥ್ ಅವರ ಮುಂದಾಳತ್ವದಲ್ಲಿ ಬೆಳಗಿನ ಜಾವದಿಂದಲೆ ಮೂಲ ವಿಗ್ರಹಕ್ಕೆ ಕಳಶ ಪೂಜೆ, ಏಕಾದಶ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಇತ್ಯಾದಿ ಪೂಜೆ ನಡೆಯಿತು.
ಮೂಲ ಸೌಕರ್ಯಗಳ ಕೊರತೆ: ಕೋವಿಡ್ 19 ನೆಪ ಒಡ್ಡಿ ನಾಗಲಮಡಿಕೆ ಹೋಬಳಿಯ ಪ್ರಭಾರಿ ಕಂದಾಯ ನಿರೀಕ್ಷಕ, ಪಾರುಪತ್ತೇದಾರ ಶೌಚಾಲಯಗಳಿಗೂ ಬೀಗ ಹಾಕಿ ನೀರು ಪೂರೈಕೆ ಸ್ಥಗಿತಗೊಳಿಸಿದ್ದರು. ಇದರಿಂದ ಮಹಿಳೆಯರು, ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಯಿತು. ನೀರು ಸ್ಥಗಿತಗೊಳಿಸಿದ್ದಕ್ಕಾಗಿ ಮಹಿಳೆಯರು ಹಿಡಿ ಶಾಪ ಹಾಕಿದರು.