Publicstory
ತುರುವೇಕೆರೆ: ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿತರಿಗೆ ಸಕಾಲಕ್ಕೆ ಕೋವಿಡ್ ಜೀವರಕ್ಷಕ ಔಷಧಿಗಳು ಸಿಗದೆ ಸಾಕಷ್ಟು ಬಡವರು, ಸಾರ್ವಜನಿಕರು ಸಾವನ್ನಪ್ಪುತ್ತಿದ್ದು ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ರಾಜ್ಯ ಯುವ ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ತುರುವೇಕೆರೆ ದೊಡ್ಡಾಘಟ್ಟಚಂದ್ರೇಶ್ ಗಂಭೀರ ಆರೋಪ ಮಾಡಿದರು.
ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಏರುತ್ತಿದೆ. ಸಾರ್ವಜನಿಕ ಆಸ್ಪತ್ರೆ ಹಾಗು ಕೋವಿಡ್ ಕೇಂದ್ರಗಲ್ಲಿ ಸೂಕ್ತವಾದ ಕೋವಿಡ್ ಔಷಧಿಗಳು, ಆಮ್ಲಜನಕ ಹಾಗು ಇನ್ನಿತರ ಸೌಕರ್ಯಗಳ ಕೊರತೆ ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗಳು ಸಾರ್ವಜನಿಕವಾಗಿ ಹೇಳದ ಸ್ಥಿತಿಲ್ಲಿದ್ದಾರೆ. ಕನಿಷ್ಟ ಸೋಂಕಿತರಿಗೆ ನೀಡಬೇಕಾದ ಮಾತ್ರೆಗಳನ್ನು ಸರಬರಾಜು ಮಾಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ ವಹಿಸಿದ್ದು ಆಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಡಳಿತ ಬಡವರ ಜೀವದೊಡನೆ ಚೆಲ್ಲಾಟವಾಡುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಜಿಲ್ಲೆಯ 10 ತಾಲ್ಲೂಕಿನ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ಗೆ ಸಂಬಂಧಿಸಿದ ಔಷಧಿಗಳು ಎಷ್ಟಿದೆ, ಅಥವಾ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯೇ ಜಿಲ್ಲಾ ಆರೋಗ್ಯಧಿಕಾರಿಗಳಿಗೆ ಇದ್ದಂತಿಲ್ಲ. ಇನ್ನು ಕೋವಿಡ್ ಪರೀಕ್ಷೆಗಳ ಫಲಿತಾಂಶ ಬರಲು ವಾರಗಟ್ಟಲೆ ವಿಳಂಭವಾಗುತ್ತಿರುವುದರಿಂದ ಸೋಂಕು ತೀವ್ರ ಪ್ರಮಾಣದಲ್ಲಿ ಹಬ್ಬುತ್ತಿದ್ದೆ. ಹಾಗಾಗಿ ಸೋಂಕು ಹೆಚ್ಚಿರುವ ರೋಗಿಗಳಿಗೆ ರಾಪಿಡ್ ಆಂಟೆಜೆನ್ ಪರೀಕ್ಷೆ ಮಾಡಿಸಲು ಅನುವು ಮಾಡಿಕೊಡಿ ಎಂದಿದ್ದಾರೆ.
ಜಿಲ್ಲೆಯಾದ್ಯಂತ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಕೋವಿಡ್ ನಿಯಂತ್ರಣ ಕುರಿತಂತೆ ಸಭೆ ನಡೆಸುತ್ತಿರುವುದು ಸಂತಸದ ವಿಚಾರ. ಅದೇ ರೀತಿ ಆಸ್ಪತ್ರೆ ಹಾಗು ಕೋವಿಡ್ ಕೇಂದ್ರಗಳಲ್ಲಿ ಔಷಧಿ ಹಾಗು ಇನ್ನಿತರ ಸೌಕರ್ಯಗಳು ರೋಗಿಗೆ ಸಿಗುವಂತೆ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಸಾರ್ವಜನಿಕರ ಪರವಾಗಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.