Publicstory
ತುಮಕೂರು: ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡು ತುರುವೇಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವರ ಸಂಖ್ಯೆ ಹೆಚ್ಚಾಗಿದ್ದು; ತಾಲ್ಲೂಕಿನ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಪರದಾಡುವಂತಾಗಿದೆ.
ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬೆಳಗ್ಗೆ 9 ರಿಂದ 11 ಗಂಟೆ ನಿಗದಿ ಮಾಡಲಾಗಿದೆ. ಈಗಾಗಲೇ ಬೆಂಗಳೂರಿನಲ್ಲೇ ಕುಳಿತು ಆನ್ ಲೈನ್ ನಲ್ಲಿ ನೋಂದಣಿ ಮಾಡಿದವರು ತಮ್ಮ ಸಮಯ ನಿಗಧಿಯಾಗಿದ್ದರಿಂದ ಬೆಂಗಳೂರಿನಿಂದ ಬಂದ ಯುವಕ, ಯುವತಿಯರು ಹಾಗು ಮಧ್ಯ ವಯಸ್ಕರು ಬೆಳಗ್ಗೆ 7 ಗಂಟೆಯಿಂದಲೇ ಆಸ್ಪತ್ರೆಯ ಮುಂಭಾಗ ಸರತಿ ಸಾಲಿನಲ್ಲಿ ನಿಂತಿದ್ದರು.
ಆಸ್ಪತ್ರೆಯ ಪಕ್ಕದ ರಸ್ತೆಯ ಇಕ್ಕೆಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳು ಜಮಾವಣೆಯಾಗಿದ್ದವು.
‘ಗುರುವಾರ 145 ಮಂದಿಗೆ ವ್ಯಾಕ್ಸಿನ್ ಹಾಕಲಾಗಿತು. ಅದರಲ್ಲಿ 45 ಮಂದಿ ಮೊದಲ ಮತ್ತು ಎರಡನೇ ಡೋಸ್ ಅನ್ನು ಬೆಂಗಳೂರಿಗರು ತೆಗೆದುಕೊಂಡರು’ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಧರ್.
ಲಾಕ್ಡೌನ್ನಿಂದ ಪಟ್ಟಣದಲ್ಲಿ ಕಂಪ್ಯೂಟರ್ ಸೆಂಟರ್ ತೆರೆದಿಲ್ಲ ಮತ್ತು ಮೊಬೈಲ್ನಲ್ಲಿ ನೋಂದಣಿ ಮಾಡಲು ಹಳ್ಳಿಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿದೆ ಹಾಗಾಗಿ ಭಾಗಶಃ ಜನರು ನೋಂದಾವಣಿ ಮಾಡಲು ಸಾದ್ಯವಾಗಿಲ್ಲ. ಮತ್ತೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ವ್ಯಾಕ್ಸಿನ್ ತೆಗೆದುಕೊಳ್ಳಲು ಆನ್ಲೈನ್ ನಲ್ಲಿ ನೋಂದಣಿ ಮಾಡಬೇಕೆಂಬ ಮಾಹಿತಿಯ ಕೊರತೆಯಿಂದ ಎಷ್ಟೋ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದು ಬರಿಗೈಯಲ್ಲಿ ಹಿಂತಿರುಗುತ್ತಿದ್ದಾರೆ. ಈ ಬಗ್ಗೆ ತಾಲ್ಲೂಕು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ಹಿರಿಯ ನಾಗರಿಕರು.