ರಾಷ್ಟ್ರಪಿತ ಗಾಂಧೀಜಿ ಅವರು ಹುಟ್ಟಿದ ದಿನದ ನೆನಪಿನಲ್ಲಿ ವಕೀಲರಾದ ಕೋಳಾಲ ಚಿನ್ಮಯ ಅವರು ಗಾಂಧೀಜಿ ಆಶಯಗಳ ನಿಜ ಭಾರತದ ಕಡೆ ಬೆಳಕು ಚೆಲ್ಲುವ ಬರಹವನ್ನು ಪಬ್ಲಿಕ್ ಸ್ಟೋರಿ ಓದುಗರಿಗಾಗಿ ಬರೆದಿದ್ದಾರೆ. ಗಾಂಧೀಜಿ ನಮ್ಮ ನಡುವೆ ಬದುಕಿರಲು ನಾವು ಮಾಡಬೇಕಾದದ್ದು ಏನು ಎಂಬುದರತ್ತ ಬೆಳಕು ಚೆಲ್ಲಿದ್ದಾರೆ.
ಮಹಾತ್ಮಾ ಗಾಂಧೀಜಿಯವರ ಜನ್ಮ ದಿನದಂದು ದೇಶವ್ಯಾಪಿ ಗಾಂಧೀಜಿಯವರ ಗುಣಗಾನದ ಜೊತೆ ಖಳನಾಯಕನಾಗಿ , ಮಹಾದುಷ್ಟನಾಗಿ, ಕೊಲೆಗಾರನಾಗಿ ಇಡೀ ಭಾರತೀಯರು ನೆನಪಿಸಿಕೊಳ್ಳೋ ಮತ್ತೊಂದು ಹೆಸರೇ ನಾಥುರಾಮ್ ಗೋಡ್ಸೆ…..
ಹೌದಾ? ನಿಜವಾಗಿಯೂ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದದ್ದು ನಾಥುರಾಮ್ ಗೋಡ್ಸೆ ನಾ? ಎಂಬ ಕಾಲ್ಪನಿಕ ಹಾಗೂ ಅತಿಶಯೋಕ್ತಿಎನಿಸುವ ಪ್ರಶ್ನೆ ಯೊಂದು ನಮ್ಮನ್ನು ಗಾಂಧಿ ಜಯಂತಿಯಂದು ನಮ್ಮನ್ನು ಕಾಡಲು ಪ್ರಾರಂಭಿಸುತ್ತದೆ. ವಿಚಿತ್ರ ಆದರೂ ಕಹಿ ಸತ್ಯಎನಿಸುವ, ಆಲೋಚನೆಗೀಡು ಮಾಡುವ ವಿಚಾರವಿದು.
ಕೆಲವೊಂದು ಮಹಾನ್ ಚೇತನಗಳು ನಮ್ಮನ್ನು ಅಗಲಿ ದೈಹಿಕವಾಗಿ ದೂರಾದರೂ ಸಹ ಅವರ ತತ್ವ ಆದರ್ಶ ಗಳು, ಅವರು ಹಾಕಿಕೊಟ್ಟ ಸನ್ಮಾರ್ಗದ ಹೆಜ್ಜೆ ಗುರುತುಗಳನ್ನು ಹಿಡಿದು ನಡೆಯುವ ಮೂಲಕ ಅವರನ್ನು ಅಮರರನ್ನಾಗಿಸುವ, ಅಜರಾಮರರನ್ನಾಗಿಸುವ ಕಾಯಕವನ್ನು ಪ್ರಚಲಿತ ಕಾಲಘಟ್ಟದ ನಾವುಗಳು ಮಾಡಿದಾಗ ಅಂತಹ ಚೇತನಗಳು ನಮ್ಮೊಂದಿಗೆ ಜೀವಂತ ಬದುಕು ಸಾಗಿಸುತ್ತವೆ ಎಂಬುದು ಸದಾಶಯ.
ಆದರೆ ಮಹಾತ್ಮಾ ಗಾಂಧೀಜಿ ಯವರನ್ನು ಗೋಡ್ಸೆ ಕೇವಲ ಒಂದು ಭಾರಿ ಬಂದೂಕಿನಿಂದ ಗುಂಡಿಕ್ಕಿ ಕೊಂದು ಅವರನ್ನು ಹುತಾತ್ಮರನ್ನಾಗಿ ಮಾಡಿದ…., !!!!!
ಅಂದು ಹುತಾತ್ಮ ರಾದ ಗಾಂಧೀಜಿಯವರ ದ್ಯೇಯೋದ್ದೇಶಗಳನ್ನು ಪ್ರತಿ ನಿತ್ಯ ಗುಂಡಿಕ್ಕಿ ಕೊಲ್ಲುತ್ತಿರುವರಾರು?
ಅಂದು ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸನ್ನು ಗುಂಡಿಕ್ಕಿ ನುಚ್ಚುನೂರು ಮಾಡಿದವರಾರು?
ಅಂದು ಗಾಂಧೀಜಿ ಅವರು ಮದ್ಯಪಾನದಿಂದ ಸರ್ವನಾಶ, ಮದ್ಯಪಾನ ನಿಷೇಧ ಮಾಡಿ ಅಂದರು, ಆದರೆ ಕೇವಲ ಅವರ ಜಯಂತಿಯಂದು ಮಾತ್ರ ಮದ್ಯ ನಿಷೇಧ ಮಾಡಿ ಅವರ ಆಶಯಗಳನ್ನು ಕೊಲ್ಲುತ್ತಿರುವವರು ಯಾರು?
ಒಂದು ಹೆಣ್ಣು ಮಧ್ಯರಾತ್ರಿ ಒಬ್ಬಂಟಿಯಾಗಿ ಓಡಾಡುವಂತಾಗಬೇಕು ಎಂಬ ಅವರ ಕನಸಿಗೆ ವಿರುದ್ಧವಾಗಿ ಒಂದು ಹೆಣ್ಣು ಹೊರಗೆ ಓಡಾಡಲಾಗದಂತೆ ಅವರ ಕನಸನ್ನು ಭಸ್ಮಗೊಳಿಸಿದವರಾರು?
ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಪ್ರಗತಿಯೇ ದೇಶದ ಪ್ರಗತಿ ಅಂದವರ ಇಷ್ಟಕ್ಜೆ ವಿರುದ್ಧವಾಗಿ ಹಳ್ಳಿಗಳನ್ನು, ಹಳ್ಳಿಗರನ್ನು ಶೂದ್ರರನ್ನಾಗಿಸಿ ಗಾಂಧೀಜಿಯವರ ಆದರ್ಶಗಳನ್ನು ಗುಂಡಿಕ್ಕಿ ಕೊಂದವರು, ಕೊಳ್ಳುತ್ತಿರುವರು ಯಾರು?
ಭ್ರಷ್ಟಾಚಾರ ರಹಿತ, ಸ್ವಚ್ಛಂದ, ಪ್ರಾಮಾಣಿಕ ಆಡಳಿತದ ಕನಸು ಕಂಡ ಗಾಂಧೀಜಿಯವರ ಫೋಟೋ ವನ್ನು ಸರ್ಕಾರಿ ಕಚೇರಿಯಲ್ಲಿ ಮೊಳೆ ಹೊಡೆದು ನೇತು ಹಾಕಿ ಅದರ ನೆರಳಲ್ಲಿ ಲಂಚ, ಭ್ರಷ್ಟ ಆಡಳಿತ ನಡೆಸುವ ಮೂಲಕ ಅವರ ಆದರ್ಶಗಳಿಗೂ ಮೊಳೆ ಹೊಡದವರಾರು…?
…………………..
ಒಮ್ಮೆ ಮಾತ್ರ ದೈಹಿಕವಾಗಿ ಗಾಂಧೀಜಿಯವರನ್ನು ಕೊಂದ ಮಹಾ ಕ್ರೂರಿ ಗೋಡ್ಸೆ ಗಿಂತಲೂ, ಅವರ ನೆನಪುಗಳನ್ನು, ಅವರು ಕಂಡ ಕನಸುಗಳನ್ನು, ಆದರ್ಶಗಳನ್ನು ಆಳುವವರು ಹಾಗೂ ಆಳಿಸಿಕೊಳ್ಳುತ್ತಿರುವ ಪ್ರಜೆಗಳು ಒಂದಿಲ್ಲೊಂದು ರೀತಿಯಲ್ಲಿ ದಿನಂಪ್ರತಿ, ಪ್ರತಿಕ್ಷಣ ಕೊಲ್ಲುತ್ತಿದ್ದು,ನಿಜವಾದ ಹಂತಕರು ಯಾರು ಎಂಬ ಪ್ರಶ್ನೆಗೆ ಉತ್ತರ ನಮ್ನಲ್ಲೇ ಇದೆ ಎನಿಸುತ್ತದೆ.
ಗಾಂಧೀಜಿಯವರ ಕನಸಿನ ಭಾರತ ಇಂದು ಕೇವಲ ಕಾಲ್ಪನಿಕ ಕಥೆಯಾಗಿ, ಗಾಂಧೀಜಿ ಎಂಬ ಹೆಸರು ವ್ಯಂಗ್ಯದ ವಸ್ತುವಾಗಿ, ಸಿನಿಮಾ ಥಿಯೇಟರ್ ನ ಗಾಂಧಿ ಕ್ಲಾಸ್ ಆಗಿ, ಸರ್ಕಾರಿ ಕಛೇರಿಯಲ್ಲಿ ಜೋತು ಬಿದ್ದ ಫೋಟೋ ಆಗಿ, ಭ್ರಷ್ಟಾಚಾರವೇ ತುಂಬಿರುವ ಗ್ರಾಮಪಂಚಾಯಿತಿಯ ಉದ್ಯೋಗ ಖಾತ್ರಿಯ ಹೆಸರಾಗಿ, ಮೋದೀ ಬದಲಾವಣೆ ಮಾಡಿದ ಬಣ್ಣ ಬಣ್ಣದ ನೋಟಿನ ಮೇಲೆ ಮುಗ್ದ ನಗುವಿನೊಂದಿಗೆ ಇರೋ ಅವರ ಚಿತ್ರ, ದೇಶದ ಪ್ರಸ್ತುತ ವ್ಯವಸ್ಥೆಯನ್ನು, ಭ್ರಷ್ಟಾಚಾರವನ್ನು, ಅದೋಗತಿ ಯನ್ನು ಕಂಡು ಅಣಕಿಸಿ ನಗುವಂತಿದೆ.
ಯಾವ ದೇಶದಲ್ಲಿ ಮದ್ಯ ನಿಷೇದದ ಕನಸು ಕಂಡಿದ್ದರೋ ಅದೇ ದೇಶದಲ್ಲಿ ಕೊರೋನಾ, ಲಾಕ್ ಡೌನ್ ಸಂದರ್ಭದಲ್ಲಿ ದೇವಾಲಯ, ಶಾಲೆಗಳಿಗಿಂತ ಮೊದಲು ಬಾರ್ ವೈನ್ ಶಾಪ್ ಗಳನ್ನು ತೆರೆಯಲು ತವಕಿಸಿದ ಸರ್ಕಾರವನ್ನು ಕಂಡು ನಗುತ್ತಿರಬಹುದೇ ಎನಿಸುತ್ತದೆ ಆ ಗಾಂಧೀಜಿಯವರ ಮುಗ್ದ ನಗು.
ಗಾಂಧೀಜಿ ಹಾಗೂ ಮಹಾನ್ ಹೋರಾಟಗಾರರಿಂದ ಭಾರತವನ್ನು ಪರಕೀಯರಿಂದ ಪಾರುಮಾಡಿ ಈ ಕೆಲ ಭ್ರಷ್ಟ ರಾಜಕಾರಣಿಗಳ ಕೈಗೆ ಇಟ್ಟು, ಅಳುವವ ಸರ್ವಾಧಿಕಾರಿಯಂತೆ, ಪ್ರಜೆಗಳು ಗುಲಾಮ ರಂತೆ, ದೇಶ, ಹಾಗೂ ದೇಶದ ಸಂಪತ್ತನ್ನು ಸ್ವಯಾರ್ಜಿತ ಆಸ್ತಿಯಂತೆ ಭಾವಿಸಿಕೊಂಡಿರುವ ಗಾಂಧೀ ಕನಸಿನ ರಾಮರಾಜ್ಯದಲ್ಲಿನ ರಾವಣರಾಗಿ ಸೀತಾಪಹರಣದ ಬದಲಿಗೆ ಪ್ರಜಾಪ್ರಭುತ್ವದ ಅಪಹರಣ, ಸಾರ್ವಜನಿಕ ಅಸ್ತಿ ಅಪಹರಣ ಮಾಡಲು ತವಕಿಸುತ್ತಿರುವ ಭ್ರಷ್ಟ ರಾಜಕೀಯ ವ್ಯವಸ್ಥೆಯೇ ಗಾಂಧೀಜಿಯವರನ್ನು ಕೊಂದದ್ದು….. !
ಸಾರ್ವಜನಿಕ ಅಸ್ತಿ ಪಾಸ್ತಿ ಯ ಕಾವಲುಗಾರ ರಂತೆ ಮುಖವಾಡ ಹೊತ್ತು, ಆ ಭ್ರಷ್ಟ ರಾಜಕೀಯ ವ್ಯವಸ್ಥೆಯ ಕೈಗೊಂಬೆಯಂತೆ ವರ್ತಿಸುವ, ಪರವಾನಿಗೆ ಪಡೆದ ಭ್ರಷ್ಟ ರಂತೆ, ಗೂಂಡಾಗಳಂತೆ ವರ್ತಿಸುವ, ಉಳ್ಳವರ, ಪ್ರಭಾವಿಗಳ ಬೂಟು ನೆಕ್ಕುವ ಕೆಲ ಭ್ರಷ್ಟ ಸರ್ಕಾರಿ ಅಧಿಕಾರಿಗಳೇ ಗಾಂಧೀಜಿ ಕೊಂದದ್ದು…..! ಕೊಳ್ಳುತ್ತಿರುವುದು….. !!
ಈಗ ಹೇಳಿ ಗಾಂಧೀಜಿಯನ್ನು ಕೊಂದದ್ದು ಯಾರು…..?